ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ಹಾಗೂ ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಎಂಡಿಎಲ್‌ಎಸ್‌ಎ) ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಗೊತ್ತುವಳಿ ಹೊರಡಿಸಿ, ವಕೀಲರ ಸಂಘದ ಸದಸ್ಯರನ್ನು ನಿರ್ಬಂಧಿಸಿದ್ದ ಮಂಡ್ಯ ವಕೀಲರ ಸಂಘದ ಪದಾಧಿಕಾರಿಗಳ ನಡತೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಂಡ್ಯ ವಕೀಲರ ಸಂಘವು ಹೊರಡಿಸಿದ್ದ ಗೊತ್ತುವಳಿ ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು “ಮಂಡ್ಯ ವಕೀಲರ ಸಂಘದ ಎಚ್ಚರಿಕೆ ಪಾಲಿಸದ ಇಬ್ಬರು ಪ್ಯಾನಲ್ ವಕೀಲರನ್ನು ಅಮಾನತು ಮಾಡಲಾಗಿದೆ” ಎಂದು ಪೀಠಕ್ಕೆ ತಿಳಿಸಿದರು.
ಆಗ ಸಿಜೆ ವರಾಳೆ ಅವರು “ನಿಮ್ಮ (ಮಂಡ್ಯ ವಕೀಲರ ಸಂಘ) ನಡೆಯನ್ನು ಹೇಗೆ ಸಮರ್ಥಿಸುತ್ತೀರಿ? ಇದು ಸರಿಯಾದ ವಿಧಾನವೇ? ವಿವೇಕ ಮೇಲುಗೈ ಸಾಧಿಸಲಿ. ನಿಮ್ಮ ನಡೆಯು ನ್ಯಾಯದಾನಕ್ಕೆ ಅಡ್ಡಿಯಾಗಿದೆ. ಉತ್ತಮ ತಿಳಿವಳಿಕೆ ಮೇಲುಗೈ ಸಾಧಿಸಲಿ, ಇಲ್ಲವಾದಲ್ಲಿ ನಾವು ಗಂಭೀರವಾದ ಕ್ರಮ ಕೈಗೊಳ್ಳುತ್ತೇವೆ” ಎಂದರು.
ಬೇರೊಂದು ಪ್ರಕರಣದ ವಿಚಾರಣೆಗಾಗಿ ಪೀಠದ ಮುಂದಿದ್ದ ರಾಜ್ಯ ವಕೀಲರ ಪರಿಷತ್ ಕಾರ್ಯದರ್ಶಿ ಎಸ್ ಬಸವರಾಜ್ ಅವರನ್ನು ಉದ್ದೇಶಿಸಿ ಪೀಠವು “ಮಂಡ್ಯದ ವಕೀಲರ ಸಂಘದ ಪದಾಧಿಕಾರಿಗಳಿಗೆ ಹಿರಿಯ ಸದಸ್ಯರಿಂದ ಸಲಹೆ ಕೊಡಿಸುವ ಮೂಲಕ ಸೂಕ್ತ ರೀತಿಯಲ್ಲಿ ಸಮನ್ವಯ ಸಾಧಿಸಿ, ಪರಿಸ್ಥಿತಿಯನ್ನು ತಹಬಂದಿಗೆ ತಂದು, ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಅಸಂತೋಷದ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು” ಎಂದು ಪೀಠವು ಸೂಚಿಸಿತು.
ಸಾರ್ವಜನಿಕರ ಒಳಿತಿಗಾಗಿ ಲೋಕ ಅದಾಲತ್ ನಡೆಸಲಾಗುತ್ತಿದ್ದು, ಇದರಲ್ಲಿ ಯಾರ ವೈಯಕ್ತಿಕ ಹಿತಾಸಕ್ತಿಯೂ ಅಡಗಿಲ್ಲ. ಲೋಕ ಅದಾಲತ್‌ನಲ್ಲಿ ಕರ್ನಾಟಕವು ಇಡೀ ದೇಶದಲ್ಲೇ ದಾಖಲೆ ಸೃಷ್ಟಿಸಿದೆ. ಕರ್ನಾಟಕವು ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ದಾಖಲೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಕೀಲರ ಸಂಘದ ಸದಸ್ಯರ ಪ್ರಯತ್ನವಿರಬೇಕು” ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಫೆಬ್ರವರಿ ೨೭ಕ್ಕೆ ಮುಂದೂಡಿದೆ.
ರಾಜ್ಯದಾದ್ಯಂತ ನೊಂದಾವಣೆಗಾಗಿ ಕೆಎಸ್‌ಎಲ್‌ಎಸ್‌ಎ, ಎಸ್‌ಒಪಿ ಜಾರಿ ಮಾಡಿದೆ. ನೊಂದಾಯಿತರಾದ ವಕೀಲರು ಶಾಸನಬದ್ಧವಾಗಿ ತಮ್ಮ ಕರ್ತವ್ಯ ನಿಭಾಯಿಸದಂತೆ, ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಮಂಡ್ಯ ಜಿಲ್ಲಾ ವಕೀಲರ ಸಂಘ ತಡೆದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಕೀಲರ ನೊಂದಾವಣೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎಂಡಿಎಲ್‌ಎಸ್‌ಎ ಪರವಾಗಿ ಕೆಲಸ ಮಾಡಿರುವ ವಕೀಲರನ್ನು ಮಂಡ್ಯ ವಕೀಲರ ಸಂಘ ಸಮಾನತು ಮಾಡಿದೆ. ಅಲ್ಲದೇ, ಲೋಕ ಅದಾಲತ್ ಮತ್ತು ಎಂಡಿಎಲ್‌ಎಸ್‌ಎ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದೆ. ಇದು ಸಂವಿಧಾನ, ಸುಪ್ರೀಂ ಕೋರ್ಟ್ ಆದೇಶ ಮತ್ತು ವಕೀಲರ ಕಾಯಿದೆ ಹಾಗೂ ಭಾರತೀಯ ವಕೀಲರ ಪರಿಷತ್ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
2022ರ ಆಗಸ್ಟ್ 13ರಂದು ವಕೀಲರ ಸಂಘದ ಸದಸ್ಯರು ಸೇರಿದಂತೆ ಎಂ ಟಿ ರಾಜೇಂದ್ರ, ಸಿದ್ದರಾಜು, ಎಂ ರೂಪಾ, ಎಚ್ ಎನ್ ಗಿರಿಜಾಂಬಿಕೆ, ರಥಿ ಕುಮಾರಿ ಅವರು ಮಂಡ್ಯದ ನ್ಯಾಯಾಲಯದ ಕಟ್ಟಡದಲ್ಲಿ ಜನರು ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ಭೌತಿಕವಾಗಿ ತಡೆದಿದ್ದಾರೆ. ವಿಚಾರಣೆಯಲ್ಲಿ ಭಾಗವಹಿಸಲು ಬಂದಿದ್ದ ಕಾನೂನು ವಿದ್ಯಾರ್ಥಿಗಳನ್ನು ತಡೆದಿದ್ದಾರೆ” ಎಂದು ವಿವರಿಸಲಾಗಿದೆ. 2022ರ ಆಗಸ್ಟ್ 20 ಮತು 21ರಂದು ನಡೆದ ತರಬೇತಿ ಮಧ್ಯಸ್ಥಿಕೆದಾರರಿಗೂ ತಡೆ ಒಡ್ಡಲಾಗಿದೆ ಎಂದು ಆಕ್ಷೇಪಿಸಲಾಗಿದೆ.
ಪ್ಯಾನಲ್‌ನಲ್ಲಿ ವಕೀಲರು/ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರ ವಿರುದ್ಧ ಹೊರಡಿಸಿರುವ ಎಲ್ಲಾ ಆದೇಶ/ಗೊತ್ತುವಳಿ ಮತ್ತಿತರ ಆದೇಶಗಳನ್ನು ಹಿಂಪಡೆಯಲು ಮಂಡ್ಯ ವಕೀಲರ ಸಂಘಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.