ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಏಕಾಏಕಿಯಾಗಿ ‘ನಿರ್ಬಂಧಿತ ಪ್ರವೇಶ - ನ್ಯಾಯಾಧೀಶರಿಗೆ ಮಾತ್ರ ಪ್ರವೇಶʼ ಎಂಬ ಫಲಕ ಹಾಕಿರುವುದಕ್ಕೆ ಮಂಗಳೂರು ವಕೀಲರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
"ಶನಿವಾರ ಬೆಳಿಗ್ಗೆ ಹೀಗೆ ಫಲಕ ಹಾಕಿರುವ ವಿಚಾರ ವಕೀಲರ ಗಮನಕ್ಕೆ ಬಂತು. ಅನೌಪಚಾರಿಕವಾಗಿ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಎಂ ಜೋಷಿ ಅವರನ್ನು ವಕೀಲರ ಸಂಘದ ತುರ್ತು ಸಮಿತಿ ಭೇಟಿಯಾದಾಗ ಅವರು ಭದ್ರತಾ ಪರಿಶೀಲನಾ ಸಮಿತಿ ಸಭೆ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು” ಎಂದು ಸಂಘದ ಕಾರ್ಯದರ್ಶಿಯಾದ ಶ್ರೀಧರ ಎಣ್ಮಕಜೆ ಅವರು ʼಬಾರ್ ಅಂಡ್ ಬೆಂಚ್ʼಗೆ ಮಾಹಿತಿ ನೀಡಿದರು.
“ಫಲಕದಲ್ಲಿ ತಿಳಿಸಿರುವ ಪ್ರಕಾರ ಸಾರ್ವಜನಿಕರೊಟ್ಟಿಗೆ ವಕೀಲರಿಗೂ ನಿರ್ಬಂಧವಿದೆ. ಆದರೆ ವಕೀಲರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ನ್ಯಾಯಾಧೀಶರು ಮೌಖಿಕವಾಗಿ ಹೇಳಿದ್ದಾರೆ. ಹಾಗಾದರೆ ಪೋಸ್ಟರ್ ತೆಗೆದುಹಾಕಿ ಎಂಬ ವಕೀಲರ ಮನವಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಮುಂದಿನ ಭದ್ರತಾ ಪರಿಶೀಲನಾ ಸಭೆ ವೇಳೆ ಪರಿಶೀಲಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಟ್ಟಿಗೆ ನಡೆಯುವ ಈ ಸಭೆ ಮತ್ತೆ ಆಯೋಜನೆಯಾಗುವುದು ಒಂದು ಅಥವಾ ಎರಡು ತಿಂಗಳ ಬಳಿಕ ಎಂಬ ಮಾಹಿತಿ ನ್ಯಾಯಾಧೀಶರಿಂದ ದೊರೆತಿದೆ. ನಿರ್ಬಂಧ ಜಾರಿಯಾದರೆ ಅಷ್ಟು ದಿನಗಳ ಕಾಲ ವಕೀಲರು ತೊಂದರೆ ಎದುರಿಸುವಂತಾಗುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
“ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ದೂರು ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸಂಘದ ಅಧ್ಯಕ್ಷರಾದ ಕೆ ಪೃಥ್ವಿರಾಜ್ ರೈ ಅವರ ನೇತೃತ್ವದಲ್ಲಿ ಸಮಿತಿ ಮಂಗಳವಾರ ಮತ್ತೆ ಸಭೆ ಸೇರಲಿದ್ದು ಎಲ್ಲಾ ವಕೀಲರನ್ನು ಸಭೆಗೆ ಆಹ್ವಾನಿಸಲಾಗುತ್ತಿದೆ. ಆಗ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಅವರು ವಿವರಿಸಿದರು.
ʼಮುಖ್ಯ ಪ್ರವೇಶ ದ್ವಾರ ಸಾರ್ವಜನಿಕ ಸ್ಥಳವಾಗಿದ್ದುʼ ಅಲ್ಲಿ ನಿರ್ಬಂಧ ವಿಧಿಸಿರುವುದಕ್ಕೆ ಮಂಗಳೂರಿನ ವಕೀಲ ಸುಕೇಶ್ ಶೆಟ್ಟಿ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
“ವಕೀಲರನ್ನು ನ್ಯಾಯಾಲಯ ಅಧಿಕಾರಿಗಳು ಎಂದು ಕೂಡ ಕರೆಯುತ್ತಾರೆ. ನ್ಯಾಯಾಧೀಶರುಗಳು ಕೂಡ ಒಂದೊಮ್ಮೆ ವಕೀಲರೇ ಆಗಿದ್ದವರು. ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವವಾದುದು. ಅವರನ್ನು ಕೀಳರಿಮೆಯಿಂದ ಕಾಣುವುದು ಸರಿಯಲ್ಲ. ನ್ಯಾಯಾಧೀಶರು ಮತ್ತು ವಕೀಲ ವರ್ಗದ ಉತ್ತಮ ಬಾಂಧವ್ಯದ ನಿಟ್ಟಿನಲ್ಲಿ ನ್ಯಾಯಾಧೀಶರು ಸೂಕ್ತ ಕ್ರಮ ಕೈಗೊಳ್ಳುಲೆಂದು ಆಶಿಸುವೆ” ಎಂಬುದಾಗಿ ಅವರು ತಿಳಿಸಿದರು.