ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯಂತೆಯೇ ಮಂಗಳೂರಿನ ಮಳಲಿಪೇಟೆ ಜುಮ್ಮಾ ಮಸೀದಿಯ ಸಮೀಕ್ಷೆ ನಡೆಸುವಂತೆ ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿರುವ ಅರ್ಜಿಯನ್ನು ಫೆ. 8ರಂದು (ಗುರುವಾರ) ವಿಚಾರಣೆ ನಡೆಸುವುದಾಗಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಇಂದು ತಿಳಿಸಿದೆ.
ಪ್ರಕರಣ ಇಂದು ಬೆಳಗ್ಗೆ ವಿಚಾರಣೆಗೆ ಬಂದಾಗ ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಗುರುವಾರ ವಿಚಾರಣೆ ನಡೆಸಲು ತೀರ್ಮಾನಿಸಿದರು.
ಮಳಲಿಪೇಟೆ ಜುಮ್ಮಾ ಮಸೀದಿಯನ್ನು ಪ್ರತಿವಾದಿಯಾಗಿಸಿರುವ ಅರ್ಜಿದಾರರಾದ ಧನಂಜಯ್ ಹಾಗೂ ಇನ್ನಿತರರು "ಮಸೀದಿ ಸಮೀಕ್ಷೆ ನಡೆಸುವ ಸಂಬಂಧ ನ್ಯಾಯಾಲಯ ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಿಸಬೇಕು. ಅವರಿಗೆ ತಜ್ಞರು, ಇಲ್ಲವೇ ಪುರಾತತ್ವ ಇಲಾಖೆಯ ಅಧಿಕಾರಿಗಳು ನೆರವು ಒದಗಿಸಲು ನಿರ್ದೇಶನ ನೀಡಬೇಕು” ಎಂದು ಕೋರಿದ್ದಾರೆ. ನ್ಯಾಯವಾದಿ ಚಿದಾನಂದ ಎಂ ಕೆದಿಲಾಯ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ವಿವಾದಿತ ಸ್ಥಳದಲ್ಲಿರುವ ಪುರಾತನ ಕಟ್ಟಡ, ಪುರಾತನ ದೇವಾಲಯವಾಗಿದೆ. ಅದು ದೇವಾಲಯದ ಗರ್ಭಗುಡಿಯಾಗಿದೆ. ಅಲ್ಲಿನ ವಾಸ್ತುಶಿಲ್ಪದ ಚಿತ್ರಗಳು, ಗೋಡೆ, ಕೆತ್ತನೆಗಳು ಅದರಲ್ಲಿದ್ದು ಅದರ ಐತಿಹಾಸಿಕ ಸ್ವರೂಪವನ್ನು ಆಧರಿಸಿ ಅಡ್ವೊಕೇಟ್ ಕಮಿಷನರ್ ವರದಿ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಸ್ಥಳವನ್ನು ಅಗೆದು ಮತ್ತು ಉತ್ಖನನ ನಡೆಸಿ ಅಲ್ಲಿ ಚಾರಿತ್ರಿಕ ಕುರುಹುಗಳಿವೆಯೇ ಪ್ರತಿಮೆಗಳಿವೆಯೇ ಎಂಬ ಬಗ್ಗೆ ವರದಿ ತಿಳಿಸಬೇಕು. ಸ್ಥಳದಲ್ಲಿರುವ ಕಟ್ಟಡ ಮತ್ತು ಸ್ಮಾರಕಗಳ ಕಾಲಮಾನದ ಕುರಿತು ವರದಿ ಮಾಡಬೇಕು. ಇಡೀ ಕಟ್ಟಡದ ಅಥವಾ ಅಲ್ಲಿ ನೆಲೆಗೊಂಡಿರಬಹುದಾದ ಮತ್ತಾವುದೇ ಸ್ಮಾರಕಗಳ ಒಟ್ಟಾರೆ ಸ್ವರೂಪದ ಬಗ್ಗೆ ವೈಜ್ಞಾನಿಕ ವರದಿ ನೀಡಬೇಕು ಎಂದು ಕೂಡ ವಿನಂತಿಸಲಾಗಿದೆ.
ಎರಡು ವರ್ಷಗಳ ಹಿಂದೆ ಅಂದರೆ 2022ರಲ್ಲಿ ಮಸೀದಿಯ ದುರಸ್ತಿ ನಡೆಯುತ್ತಿದ್ದ ವೇಳೆ ಕಟ್ಟಡದ ಕೆಲ ಭಾಗಗಳನ್ನು ಕೆಡವಲಾಗಿತ್ತು. ಅದರ ಛಾವಣಿ ದೇಗುಲ ಶೈಲಿಯಲ್ಲಿರುವುದು ವಿವಾದಕ್ಕೆ ಕಾರಣವಾಗಿತ್ತು. ಮಸೀದಿಯ ಒಳಗೆ ಶಿವನ ಸನ್ನಿಧಾನ ಇರುವುದರಿಂದ ದುರಸ್ತಿ ಕಾಮಗಾರಿ ಸ್ಥಗಿತಗೊಳಿಸಿ ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಕೋರಿ ಈ ಹಿಂದೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಆದರೆ ಮಳಲಿ ಮಸೀದಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಾಗಿದೆ ಎಂದು ಮಳಲಿ ಜುಮ್ಮಾ ಮಸೀದಿ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ ಆಲಿಸಿದ್ದ ಹೈಕೋರ್ಟ್ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ. 31ರಂದು ಸೂಚಿಸಿತ್ತು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು “ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಿಂದ ದೂರ ಉಳಿದಿದ್ದ ವಕ್ಫ್ ಮಂಡಳಿ ಇನ್ನು ತನ್ನನ್ನೂ ಪ್ರಕರಣದ ಕಕ್ಷಿದಾರನನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಲಿದೆ. ಈ ಕುರಿತ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲಿದೆ” ಎಂದಿದ್ದರು.