[ಸೌದಿಯಲ್ಲಿ ಮಂಗಳೂರು ನಿವಾಸಿಗೆ ಜೈಲು] ಹದಿಹರೆಯದ ಪ್ರೇಮಿಗಳ ಪತ್ರ ವ್ಯವಹಾರದಂತಿದೆ: ಕೇಂದ್ರಕ್ಕೆ ಕುಟುಕಿದ ಹೈಕೋರ್ಟ್

ಸ್ಕಾಟ್‌ಲೆಂಡ್‌ ಯಾರ್ಡ್‌, ಇಸ್ರೇಲ್‌ನ ಮೊಸ್ಸಾದ್ ತನಿಖಾ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯಬೇಕು. ಹಿಂದಿನ ರೀತಿ ಕೆಲಸ ಮಾಡಲಾಗದು. ಹೊಸ ಸವಾಲು ಎದುರಾಗುತ್ತಿವೆ. ಅದಕ್ಕೆ ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದ ಪೀಠ.
Justice Krishna S Dixit and Karnataka HC
Justice Krishna S Dixit and Karnataka HC

“ನೀವು ಅವರಿಗೆ ಪತ್ರ ಕಳುಹಿಸಿದ್ದೀರಿ, ಅವರು ನಿಮಗೆ ಪತ್ರ ಬರೆದಿದ್ದಾರೆ. ಇದು ಒಂದು ರೀತಿಯಲ್ಲಿ ಹದಿಹರೆಯದ ಪ್ರೇಮಿಗಳು ಪತ್ರ ವ್ಯವಹಾರ ನಡೆಸಿದಂತಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರವನ್ನು ಮೌಖಿಕವಾಗಿ ಕುಟುಕಿತು.

ಸೌದಿ ಅರೇಬಿಯಾದ ದೊರೆ ಮತ್ತು ಇಸ್ಲಾಂ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಅವರ ವಿಚಾರದಲ್ಲಿ ಏನು ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ವಕೀಲರನ್ನು ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಪ್ರಶ್ನಿಸಿತು. ಆಗ ವಕೀಲರಾದ ಮಧುಕರ್‌ ದೇಶಪಾಂಡೆ ಅವರು ಹಲವು ಪತ್ರ ಸಂವಹನ ನಡೆಸಲಾಗಿದೆ ಎಂದು ಹೇಳಿದರು. ಇದರಿಂದ ತೃಪ್ತವಾಗದ ಪೀಠವು ಮೇಲಿನಂತೆ ಹೇಳಿತು.

ಮುಂದುವರಿದು ಪೀಠವು “ಇಲ್ಲಿ ವ್ಯಕ್ತಿಯೊಬ್ಬರ ಬದುಕು ಅಪಾಯದಲ್ಲಿದೆ. ಇಲ್ಲಿ ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಏನು ಮಾಡಬೇಕು ಎಂದು ಹೇಳುತ್ತದೆ?” ಎಂದೂ ಪ್ರಶ್ನಿಸಿದರು.

“ಕಾರ್ಯತತ್ಪರ ವಕೀಲಿಕೆ (ಪ್ರೊಆಕ್ಟೀವ್‌ ಅಡ್ವಕಸಿ) ಬೇಕಿದೆ. ರಿಯಾದ್‌ (ಸೌದಿ ಅರೇಬಿಯಾದ ರಾಜಧಾನಿ) ಭಾರತ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿದೆ.‌ ನಾನು ಎಎಸ್‌ಜಿಯಾಗಿದ್ದನು” ಎಂದು ನ್ಯಾ. ದೀಕ್ಷಿತ್‌ ಹೇಳಿದರು.

“ಭಾರತದ ಪ್ರಜೆ ವಿದೇಶಿ ಜೈಲಿನಲ್ಲಿದ್ದಾರೆ. ಅವರೊಂದಿಗೆ ಸಂವಾದಿಸಲು ಯಾರಿಗೂ ಅನುಮತಿ ಇಲ್ಲ. ಯಾರ ಜೊತೆ ಅವರು ಮಾತನಾಡಬೇಕು? ವಿದೇಶಿ ಜೈಲಿನಲ್ಲಿರುವವರನ್ನು ಹಾಗೆ ಬಿಟ್ಟರೆ ಅವರ ಗತಿ ಏನಾಗಬೇಕು? ಸೂಕ್ಷ್ಮತೆ ಮತ್ತು ಕಾರ್ಯತತ್ಪರತೆ ಎರಡೂ ಬೇಕಿದೆ” ಎಂದು ಒತ್ತಿ ಹೇಳಿದರು.

ನ್ಯಾಯಾಲಯದಲ್ಲಿ ಹಾಜರಿದ್ದ ಪ್ರಕರಣದ ತನಿಖಾಧಿಕಾರಿ ಸತೀಶ್‌ ಅವರನ್ನು ಕುರಿತು ಪೀಠವು “ಸೈಬರ್‌ ಕ್ಷೇತ್ರದಲ್ಲಿನ ಪ್ರಮುಖರನ್ನು ತನಿಖೆಯ ಭಾಗವಾಗಿ ಸಂಪರ್ಕಿಸಿದ್ದೀರಾ? ಸ್ಕಾಟ್‌ಲೆಂಡ್‌ ಯಾರ್ಡ್‌ ಪೊಲೀಸರು, ಇಸ್ರೇಲ್‌ನ ಮೊಸ್ಸಾದ್‌ನಂತಹ ತನಿಖಾ ಸಂಸ್ಥೆಗಳು ಹೇಗೆ ಕೆಲಸ ಮಾಡುತ್ತಾರೆ ಎಂದು ತಿಳಿದುಕೊಳ್ಳಬೇಕು. ಹಿಂದಿನ ಶತಮಾನಗಳ ಕಲ್ಪನೆ ರೀತಿಯಲ್ಲಿ ಕೆಲಸ ಮಾಡಲಾಗದು. ಹೊಸ ಸವಾಲುಗಳು ಎದುರಾಗುತ್ತಿವೆ. ಅದಕ್ಕೆ ಸಿದ್ಧರಾಗಬೇಕು” ಎಂದಿತು.

“ವಿಷಯ ತಜ್ಞರ ಜೊತೆ ಸಮಾಲೋಚಿಸಿ ಹೇಗೆ ಮಾಡಬೇಕು ಎಂದು ಕೇಳಿದರೆ ಅವರು ಹೇಳುತ್ತಾರೆ. ಅದರ ಪ್ರಕಾರ ನ್ಯಾಯಾಲಯಕ್ಕೆ ವಿವರಿಸಬೇಕು. ಇಲ್ಲವಾದಲ್ಲಿ ನಾವು ಹೇಗೆ ಕೆಲಸ ಮಾಡಬೇಕು? ಕುಲಭೂಷಣ್‌ ಪ್ರಕರಣದಲ್ಲಿ ತೋರಿದ ನ್ಯಾಯಪರತೆ ಮತ್ತು ಹೊಣೆಗಾರಿಕೆಯನ್ನು ಇಲ್ಲಿ ಏಕೆ ತೋರಿಸಬಾರದು? ಅದಕ್ಕೆ ಕಾರಣಗಳಿರಬಹುದು” ಎಂದು ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಹೇಳಿತು.

“ಈ ರೀತಿ (ಸೌದಿಯಲ್ಲಿ ಶೈಲೇಶ್‌ ಬಂಧನವಾಗಿರುವ ರೀತಿ) ನಡೆಯಲು ಬಿಟ್ಟರೆ ಯಾರೂ ವಿದೇಶದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಎಲ್ಲರೂ ಜಾಗೃತಿಯಿಂದ ಇರಬೇಕು. ಹೀಗಾಗಿ, ಎಲ್ಲರೂ ತಮ್ಮ ಕೆಲಸವನ್ನು ಮಾಡಬೇಕಿದೆ” ಎಂದು ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕುರಿತು ಮೌಖಿಕವಾಗಿ ಹೇಳಿತು.

Related Stories

No stories found.
Kannada Bar & Bench
kannada.barandbench.com