ಹೈಕೋರ್ಟ್ ಆದೇಶದ ನಿರೀಕ್ಷೆಯಲ್ಲಿ ಮುಸ್ಲಿಂ ದಾವೆದಾರರು: ಫೆ.17ಕ್ಕೆ ಮಳಲಿ ಮಸೀದಿ ಪ್ರಕರಣದ ವಿಚಾರಣೆ ಮುಂದೂಡಿಕೆ

ಮಸೀದಿ ವಕ್ಫ್ ಆಸ್ತಿ ಎಂಬುದಕ್ಕೆ ಸಂಬಂಧಿಸಿದ ದಾವೆ ಕುರಿತಂತೆ ಕರ್ನಾಟಕ ಹೈಕೋರ್ಟ್‌ ಆದೇಶ ದೊರೆತರಷ್ಟೇ ವಾದ ಮಂಡಿಸಲು ಸಾಧ್ಯ ಎಂದು ಮಸೀದಿಯನ್ನು ಪ್ರತಿನಿಧಿಸುತ್ತಿರುವ ವಕೀಲ ಎಂ ಪಿ ಶೆಣೈ ತಿಳಿಸಿದ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡಲಾಯಿತು.
ಹೈಕೋರ್ಟ್ ಆದೇಶದ ನಿರೀಕ್ಷೆಯಲ್ಲಿ ಮುಸ್ಲಿಂ ದಾವೆದಾರರು: ಫೆ.17ಕ್ಕೆ ಮಳಲಿ ಮಸೀದಿ ಪ್ರಕರಣದ ವಿಚಾರಣೆ ಮುಂದೂಡಿಕೆ

ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯಂತೆಯೇ ದಕ್ಷಿಣ ಕನ್ನಡದ ಮಳಲಿ ಮಸೀದಿ ಸಮೀಕ್ಷೆ ನಡೆಸುವಂತೆ ಕೋರಿ ಹಿಂದೂ ದಾವೆದಾರರು ಹೂಡಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳೂರು ನ್ಯಾಯಾಲಯ ಫೆಬ್ರವರಿ 17ಕ್ಕೆ ಮುಂದೂಡಿದೆ.

ಮಸೀದಿ ವಕ್ಫ್‌ ಆಸ್ತಿ ಎಂಬುದಕ್ಕೆ ಸಂಬಂಧಿಸಿದ ದಾವೆ ಕರ್ನಾಟಕ ಹೈಕೋರ್ಟ್‌ನಲ್ಲಿದ್ದು ಈ ಕುರಿತು ಯಾವುದೇ ಆದೇಶವನ್ನು ಅದು ನೀಡಿಲ್ಲ. ಹೀಗಾಗಿ ಆದೇಶ ದೊರೆತ ನಂತರವಷ್ಟೇ ಮಸೀದಿಯ ಸಮೀಕ್ಷೆ ಕುರಿತಂತೆ ವಾದ ಮಂಡಿಸಲು ಸಾಧ್ಯ ಎಂದು ಮಳಲಿಪೇಟೆ ಜುಮ್ಮಾ ಮಸೀದಿಯನ್ನು ಪ್ರತಿನಿಧಿಸುತ್ತಿರುವ ವಕೀಲ ಎಂ ಪಿ ಶೆಣೈ ಅವರು ವಾದ ಮಂಡಿಸಿದರು.

ಈ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯd ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಪ್ರಕರಣವನ್ನು ಮುಂದೂಡಿದರು.

ಇದೇ ವೇಳೆ ವಾದ ಮಂಡಿಸಿದ ಹಿಂದೂ ಪಕ್ಷಕಾರರ ಪರ ವಕೀಲರಾದ ಚಿದಾನಂದ ಎಂ ಕೆದಿಲಾಯ ಅವರು ಮಸೀದಿ ಸಮೀಕ್ಷೆ ನಡೆಸುವ ಸಂಬಂಧ ನ್ಯಾಯಾಲಯ ಅಡ್ವೊಕೇಟ್‌ ಕಮಿಷನರ್‌ ಅವರನ್ನು ನೇಮಿಸಬೇಕು ಎಂದು ಪ್ರತಿಪಾದಿಸಿದರು.

ಅಲ್ಲದೆ ಮಸೀದಿ ಇರುವ ಸ್ಥಳದ ಉತ್ಖನನ ಕಾರ್ಯ ನಡೆಯಬೇಕು. ಕೇವಲ ಮೌಖಿಕ ವಾದ ಸಾಲದು. ವರದಿ ದೊರೆತರಷ್ಟೇ ಮಸೀದಿ ಇರುವ ಸ್ಥಳದಲ್ಲಿ ಹಿಂದೂ ದೈವಗಳ ಕುರುಹುಗಳಿವೆಯೇ ಎಂದು ನ್ಯಾಯಾಲಯಕ್ಕೆ ಮಾಹಿತಿ ತಿಳಿಯುತ್ತದೆ ಎಂದರು.

ಈಚೆಗೆ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಮಳಲಿ ಮಸೀದಿ ವಿವಾದ ಕೂಡ ಮುನ್ನೆಲೆಗೆ ಬಂದಿತ್ತು. ಅಡ್ವೊಕೇಟ್‌ ಕಮಿಷನರ್‌ ನೇಮಕಕ್ಕೆ ಒತ್ತಾಯಿಸಿ ಅರ್ಜಿದಾರರಾದ ಧನಂಜಯ್‌ ಹಾಗೂ ಇನ್ನಿತರರು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿವಾದಿತ ಸ್ಥಳದಲ್ಲಿರುವ ಪುರಾತನ ಕಟ್ಟಡ, ಪುರಾತನ ದೇವಾಲಯವಾಗಿದೆ. ಅದು ದೇವಾಲಯದ ಗರ್ಭಗುಡಿಯಾಗಿದೆ. ಅಲ್ಲಿನ ವಾಸ್ತುಶಿಲ್ಪದ ಚಿತ್ರಗಳು, ಗೋಡೆ, ಕೆತ್ತನೆಗಳು ಅದರಲ್ಲಿದ್ದು ಅದರ ಐತಿಹಾಸಿಕ ಸ್ವರೂಪವನ್ನು ಆಧರಿಸಿ ಅಡ್ವೊಕೇಟ್‌ ಕಮಿಷನರ್‌ ವರದಿ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಎರಡು ವರ್ಷಗಳ ಹಿಂದೆಯೂ ಕೋರ್ಟ್‌ ಕಮಿಷನರ್‌ ನೇಮಿಸುವ ಸಂಬಂಧ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಮಳಲಿ ಮಸೀದಿ ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಯಾಗಿದೆ ಎಂದು ಮಳಲಿ ಜುಮ್ಮಾ ಮಸೀದಿ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಾದ ಆಲಿಸಿದ್ದ ಹೈಕೋರ್ಟ್‌ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ. 31ರಂದು ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com