ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಾನು ವೈದ್ಯಕೀಯ ಆಧಾರದಲ್ಲಿ ಜಾಮೀನು ಪಡೆಯಲು ಮಾವಿನ ಹಣ್ಣುಗಳನ್ನು ತಿನ್ನುವ ಮೂಲಕ ಸಕ್ಕರೆ ಅಂಶ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂಬ ಜಾರಿ ನಿರ್ದೇಶನಾಲಯದ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಮನೆಯಿಂದ ಜೈಲಿಗೆ ಕಳುಹಿಸಿರುವ 48 ಊಟಗಳ ಪೈಕಿ 3 ಊಟಗಳಲ್ಲಿ ಮಾತ್ರ ಮಾವಿನ ಹಣ್ಣನ್ನು ಕಳುಹಿಸಲಾಗಿದೆ ಎಂದು ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ಮುಂದೆ ಕೇಜ್ರಿವಾಲ್ ಪರ ವಕೀಲರು ವಾದಿಸಿದರು.
“ನಾನು ಮಾವಿನ ಹಣ್ಣು ತಿನ್ನುತ್ತಿದ್ದೇನೆ ಎನ್ನುವ ಆರೋಪ ಮಾಡಲಾಗಿದೆ… ಮನೆಯಿಂದ ಜೈಲಿಗೆ ಕಳುಹಿಸಿರುವ 48 ಊಟಗಳ ಪೈಕಿ 3 ಊಟಗಳ ಜೊತೆ ಮಾತ್ರ ಮಾವಿನ ಹಣ್ಣು ಕಳುಹಿಸಲಾಗಿದೆ. ಮಾಧ್ಯಮ ವಿಚಾರಣೆ ನಡೆಸುವುದು ಜಾರಿ ನಿರ್ದೇಶನಾಲಯಕ್ಕೆ ಬೇಕಿದೆ. ಏಪ್ರಿಲ್ 8ರಿಂದ ಯಾವುದೇ ಮಾವಿನ ಹಣ್ಣು ಕಳುಹಿಸಲಾಗಿಲ್ಲ. ಮಾವಿನ ಹಣ್ಣುಗಳನ್ನು ಸಕ್ಕರೆ ಬುಲೆಟ್‌ಗಳ ರೀತಿಯಲ್ಲಿ ಬಿಂಬಿಸಲಾಗಿದೆ. ಕಂದು ಮತ್ತು ಬಿಳಿ ಅನ್ನಕ್ಕೆ ಹೋಲಿಕೆ ಮಾಡಿದರೆ ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಕಡಿಮೆ” ಎಂದು ಕೇಜ್ರಿವಾಲ್ ಪರ ಹಿರಿಯ ವಕೀಲ ಎ ಎಂ ಸಿಂಘ್ವಿ ವಾದಿಸಿದರು.
“ನಾನು ಟೀಗೆ ಶುಗರ್ ಫ್ರೀ ಬಳಸುತ್ತೇನೆ. ಜಾರಿ ನಿರ್ದೇಶನಾಲಯವು ಎಷ್ಟು ಕ್ಷುಲ್ಲಕ, ಹಾಸ್ಯಾಸ್ಪದ, ಕೀಳು ರಾಜಕಾರಣದಿಂದ ಕೂಡಿರಬಹುದು? ಇ ಡಿ ಹೇಳಿಕೆ ಸಂಪೂರ್ಣವಾಗಿ ತಪ್ಪು ಮತ್ತು ದುರುದ್ದೇಶಪೂರಿತವಾಗಿದೆ. ಮಾಧ್ಯಮಗಳ ಮೇಲೆ ನಿಮಗೆ ನಿಯಂತ್ರಣವಿದೆ ಎಂದ ಮಾತ್ರಕ್ಕೆ ನಾನು ಒಮ್ಮೆ ಪೂಜೆಯ ಸಂದರ್ಭದಲ್ಲಿ ಆಲೂಪುರಿ ತಿಂದಿದ್ದರೂ ದಿನವೂ ತಿನ್ನುತ್ತೇನೆ ಎಂದು ಪ್ರಕಟಿಸಬಹುದೇ?… ಭಾರತದಲ್ಲಿ 75 ವರ್ಷಗಳಿಂದ ಪ್ರಜಾಪ್ರಭುತ್ವವಿದ್ದು, ಇದೇ ಮೊದಲ ಬಾರಿಗೆ ಇಂಥ ಯತ್ನವನ್ನು ಕಾಣುತ್ತಿದ್ದೇವೆ. ಇಂಥ ಕ್ಷುಲ್ಲಕತೆಯನ್ನು ಎಂದೂ ನೋಡಿಲ್ಲ” ಎಂದು ಸಿಂಘ್ವಿ ಇ ಡಿ ನಡೆಯ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದರು.
ಜಾರಿ ನಿರ್ದೇಶನಾಲಯದ ವಾದದ ಸಮರ್ಥನೆಯನ್ನು ಇಂದೂ ಮುಂದುವರಿಸಿದ ವಕೀಲ ಜೋಹೆಬ್ ಹುಸೇನ್ ಅವರು “ಕೇಜ್ರಿವಾಲ್ ಅವರ ಆಹಾರ ಪದ್ಧತಿಯು ವೈದ್ಯರು ಸೂಚಿಸಿರುವ ಆಹಾರ ಪದ್ಧತಿಗೆ ಹೊಂದಿಕೆಯಾಗುತ್ತಿಲ್ಲ. ಆಹಾರ ಪದ್ಧತಿ ಪಟ್ಟಿಯಲ್ಲಿ ಸಿಹಿ ತಿನಿಸು ಮತ್ತು ಸಿಹಿಯಾದ ಹಣ್ಣುಗಳ ಉಲ್ಲೇಖವಿಲ್ಲ. ಕೇಜ್ರಿವಾಲ್ ಸಕ್ಕರೆಯ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎನ್ನುವುದಕ್ಕೂ ಅವರ ಆಹಾರ ಪದ್ಧತಿಗೂ ನೇರ ಸಂಬಂಧವಿದೆ” ಎಂದು ಸಮರ್ಥಿಸಿದರು.
ಸಕ್ಕರೆ ಕಾಯಿಲೆ ಮತ್ತು ರಕ್ತದಲ್ಲಿ ರಕ್ತದ ಪ್ರಮಾಣ ಪರೀಕ್ಷಿಸಲು ತಮ್ಮ ವೈದ್ಯರು ಮತ್ತು ಪತ್ನಿ ಸುನಿತಾ ಅವರ ಉಪಸ್ಥಿತಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನು ಒಳಗೊಂಡ ಹೊಸ ಅರ್ಜಿಯನ್ನು ಕೇಜ್ರಿವಾಲ್ ಇಂದು ಸಲ್ಲಿಸಿದರು.
“ಕೇಜ್ರಿವಾಲ್ ಅವರು ಸಕ್ಕರೆ ಕಾಯಿಲೆಯಿಂದ ಬಾಧಿತರು ಎಂಬುದು ಗೊತ್ತಿರುವ ವಿಚಾರವಾಗಿದ್ದು, 12 ವರ್ಷಗಳಿಂದ ಅವರು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಫೆಬ್ರವರಿಯಲ್ಲಿ ಬಂಧನಕ್ಕೂ ಮುನ್ನ ಇನ್ಸುಲಿನ್ ಕಡಿಮೆಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಕುರಿತು ಸೂಕ್ಷ್ಮವಾಗಿ ನಿಗಾವಹಿಸಬೇಕಿದೆ. ಜೈಲಿನಲ್ಲಿ ಈ ಪ್ರಕ್ರಿಯೆಯನ್ನು ಪಾಲಿಸಲಾಗುತ್ತಿಲ್ಲ ಎಂಬುದು ಸಾಮಾನ್ಯ ಆಧಾರವಾಗಿದೆ. ನನ್ನ ವೈದ್ಯರು ಮಾತ್ರ ನಿಮಿಷಾರ್ಧದಲ್ಲಿ ನಿಗಾ ವಹಿಸಲು ಸಾಧ್ಯ ಎಂದು ಪದೇಪದೇ ಹೇಳಿದ್ದೇನೆ. ನಮ್ಮ ವೈದ್ಯರನ್ನು ಸಂಪರ್ಕಿಸಲು ಅನುಮತಿಸಬೇಕು ಎಂಬುದು ನಮ್ಮ ಏಕೈಕ ಕೋರಿಕೆಯಾಗಿದೆ” ಎಂದು ಸಿಂಘ್ವಿ ಹೇಳಿದರು.
ತಿಹಾರ್ ಜೈಲು ಪ್ರಾಧಿಕಾರದ ಪರವಾಗಿ ವಾದಿಸಿದ ವಕೀಲ ಯೋಗೀಂದರ್ ಹಂಡೂ ಅವರು ಜಾರಿ ನಿರ್ದೇಶನಾಲಯದ ವಾದವನ್ನು ಸಮರ್ಥಿಸಿದರು.