ನ್ಯಾಯಾಲಯ ಪ್ರಕ್ರಿಯೆಗಳ ಆಧುನೀಕರಣದ ಜೊತೆಗೆ ವಕೀಲರು ಮತ್ತು ದಾವೆದಾರರಿಗೆ ನ್ಯಾಯಾಲಯಗಳನ್ನು ಸುಲಭವಾಗಿ ಎಡತಾಕುವಂತೆ ಮಾಡುವ ಸುಧಾರಣಾ ಯತ್ನವಾಗಿ, ಮಣಿಪುರ ಹೈಕೋರ್ಟ್ ಜುಲೈ 1ರಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ಹೈಬ್ರಿಡ್ ವಿಧಾನದಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದೆ.
ಇದು, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ಕಂಪ್ಯೂಟರ್ ಸಮಿತಿಯ ಸದಸ್ಯರಾದ ನ್ಯಾಯಮೂರ್ತಿಗಳಾದ ಎ ಬಿಮೋಲ್ ಸಿಂಗ್ ಮತ್ತು ಎ ಗುಣೇಶ್ವರ್ ಶರ್ಮಾ ಅವರ ನೇತೃತ್ವದಲ್ಲಿ ಆರಂಭಿಸಲಾದ ಇ- ಕೋರ್ಟ್ ಯೋಜನೆಯ ಭಾಗವಾಗಿದೆ.
ಯೋಜನೆ ಪ್ರಾರಂಭಿಸಲು, ಮಣಿಪುರ ಸರ್ಕಾರ ₹ 13.36 ಕೋಟಿ ಹಣ ಮಂಜೂರು ಮಾಡಿದೆ, ಇದನ್ನು ಕಾಗದ ರಹಿತ ನ್ಯಾಯಾಲಯಗಳಿಗೆ ಟಚ್‌ಸ್ಕ್ರೀನ್ ಪರದೆ, ಅಲ್ಟ್ರಾ ಎಚ್‌ಡಿ ಪ್ರೊಫೆಷನಲ್ ಡಿಸ್‌ಪ್ಲೇ, ಕ್ಯಾಮೆರಾ, ವೀಡಿಯೊ ರೆಕಾರ್ಡಿಂಗ್ ಹಾಗೂ ಪ್ರಸಾರ ಉಪಕರಣ, ಮೈಕ್ರೊಫೋನ್, ಸ್ಪೀಕರ್, ವಿಡಿಯೋ ಕಾನ್ಫರೆನ್ಸಿಂಗ್ ತಂತ್ರಾಂಶ ಪರವಾನಗಿ ಇತ್ಯಾದಿ ಸಾಧನಗಳನ್ನು ಖರೀದಿಸಲೆಂದು ಬಳಸಲಾಗಿದೆ.
ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಸೂಕ್ತ ಅಂತರ್ಜಾಲ ಸಂಪರ್ಕ ದೊರೆಯುವಂತೆ ಮಾಡಲು ರೈಲ್‌ಟೆಲ್‌ನೊಂದಿಗೆ ಹೈಕೋರ್ಟ್ ಗುತ್ತಿಗೆ ಒಪ್ಪಂದ ಕೂಡ ಮಾಡಿಕೊಂಡಿದೆ.
ಇದೇ ಜುಲೈ 1ರಿಂದ, ವಕೀಲರು ಮತ್ತು ದಾವೆದಾರರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಣಿಪುರದ ಜಿಲ್ಲಾ ನ್ಯಾಯಾಲಯಗಳಿಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಜೂನ್ 28ರಂದು ಮಣಿಪುರ ಹೈಕೋರ್ಟ್ ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಮಣಿಪುರ ಹೈಕೋರ್ಟ್ (ನ್ಯಾಯಾಲಯಗಳಿಗೆ ವೀಡಿಯೊ-ಕಾನ್ಫರೆನ್ಸಿಂಗ್) ನಿಯಮಾವಳಿ- 2020ರ ಪ್ರಕಾರ ವೀಡಿಯೊ ಕಾನ್ಫರೆನ್ಸಿಂಗ್/ಹೈಬ್ರಿಡ್ ವಿಚಾರಣೆಗಳು ನಡೆಯಲಿವೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಲು ಲಿಂಕ್ ಮತ್ತು ಆಯಾ ಅಧಿಕೃತ ಜಾಲತಾಣಗಳಲ್ಲಿ ಸಹಾಯವಾಣಿ ಒದಗಿಸುವಂತೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ಹೊಸ ಪ್ರಕರಣ ದಾಖಲಿಸಲು ಜಿಲ್ಲಾ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ ಕಡ್ಡಾಯ ಎಂದು ಹೈಕೋರ್ಟ್ ತಿಳಿಸಿದೆ. ತುರ್ತುಪ್ರಕರಣಗಳಲ್ಲಿ, ನ್ಯಾಯಾಲಯದ ಮುಖ್ಯ ಅಧಿಕಾರಿ (ಪ್ರಿಸೈಡಿಂಗ್ ಆಫೀಸರ್) ಇ-ಫೈಲ್ ಮಾಡದಂತೆ ವಿನಾಯಿತಿನೀಡಬಹುದು ಎಂದು ಕೂಡ ಅದು ಸ್ಪಷ್ಟಪಡಿಸಿದೆ.