ಗಲಭೆಗೆ ಕಾರಣವಾಗಿದ್ದ ಆದೇಶ ಪರಿಶೀಲಿಸಿದ ಮಣಿಪುರ ಹೈಕೋರ್ಟ್: ಎಸ್‌ಟಿ ವರ್ಗಕ್ಕೆ 'ಮೈತೇಯಿʼ ಸೇರ್ಪಡೆ ನಿರ್ದೇಶನ ರದ್ದು

ಹೈಕೋರ್ಟ್‌ನ ಈ ನಿರ್ದೇಶನ ಕಳೆದ ವರ್ಷ ಮಣಿಪುರದಲ್ಲಿ ಹಿಂಸಾಚಾರಕ್ಕೆ ಭೂಮಿಕೆ ಒದಗಿಸಿತ್ತು, ಅಂತಿಮವಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿತ್ತು.
ಮಣಿಪುರ ಹೈಕೋರ್ಟ್
ಮಣಿಪುರ ಹೈಕೋರ್ಟ್hcmimphal.nic.in

ಕಳೆದ ವರ್ಷ ಮಣಿಪುರದಲ್ಲಿ ಹಿಂಸಾಚಾರ ಭುಗಿಲೇಳಲು ಕಾರಣವಾಗಿದ್ದ; ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ತಾನು ರಾಜ್ಯ ಸರ್ಕಾರಕ್ಕೆ ನೀಡಿದ್ದ ನಿರ್ದೇಶನವನ್ನು ಮಣಿಪುರ ಹೈಕೋರ್ಟ್‌ ರದ್ದುಗೊಳಿಸಿದೆ.

ನ್ಯಾಯಾಲಯಗಳು ಎಸ್‌ಟಿ ಪಟ್ಟಿಯನ್ನು ಮಾರ್ಪಡಿಸಲು, ತಿದ್ದುಪಡಿ ಮಾಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮತ್ತು ಮಿಲಿಂದ್‌ ಹಾಗೂ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಈ ನಿರ್ದೇಶನ ವಿರುದ್ಧವಾಗಿದೆ ಎಂದು ತಿಳಿಸಿರುವ ನ್ಯಾ. ಗೊಲ್ಮೇಯಿ ಗೈಫುಲ್‌ಶಿಲು ನಿರ್ದೇಶನವನ್ನು ಆದೇಶದಿಂದ ತೆಗೆದುಹಾಕಲು ಸೂಚಿಸಿದ್ದಾರೆ.

ತೀರ್ಪಿನಿಂದ ಪ್ರಸ್ತುತ ತೆಗೆದುಹಾಕಿರುವ ಪ್ಯಾರಾದ ವಿವರ ಹೀಗಿದೆ: "ರಿಟ್ ಅರ್ಜಿಯಲ್ಲಿ ನಿಗದಿಪಡಿಸಿದ ಆಕ್ಷೇಪಣೆಗಳ ಪ್ರಕಾರ ಮತ್ತು ಗುವಾಹಟಿ ಹೈಕೋರ್ಟ್ ದಿನಾಂಕ 26.05.2003 ರಂದು ಹೊರಡಿಸಿದ ಆದೇಶದ ಅನುಸಾರವಾಗಿ ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನದಿಂದ ನಾಲ್ಕು ವಾರಗಳೊಳಗೆ ಮೈತೇಯಿ/ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಅರ್ಜಿದಾರರು ಮಂಡಿಸಿರುವ ವಾದವನ್ನು ಪ್ರತಿವಾದಿ ಪರಿಗಣಿಸಬೇಕು."

ಈ ವಿವಾದಾತ್ಮಕ ನಿರ್ದೇಶನವನ್ನು ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಅವರು ಮಾರ್ಚ್ 27, 2023 ರಂದು ರಾಜ್ಯ ಸರ್ಕಾರಕ್ಕೆ ನೀಡಿದ್ದರು.

ಇದು ಕಳೆದ ವರ್ಷ ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿ ಅಂತಿಮವಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗುವಂತೆ ಮಾಡಿತ್ತು. ನಂತರ ನ್ಯಾಯಮೂರ್ತಿ ಮುರಳೀಧರನ್ ಅವರನ್ನು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.

ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಆಲಿಸಲು ಮಣಿಪುರ ಹೈಕೋರ್ಟ್‌ ವಿಭಾಗೀಯ ಪೀಠ ಕಳೆದ ಅಕ್ಟೋಬರ್‌ನಲ್ಲಿ ಸಮ್ಮತಿಸಿತ್ತು. 2023ರ ತೀರ್ಪು ಹೊರಬಿದ್ದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ತಮ್ಮನ್ನು ಪಕ್ಷಕಕಾರರನ್ನಾಗಿ ಮಾಡಿಕೊಂಡಿಲ್ಲ ಎಂದು ಅಖಿಲ ಮಣಿಪುರ ಬುಡಕಟ್ಟು ಒಕ್ಕೂಟ ಮತ್ತು ವಿವಿಧ ಗುಂಪುಗಳು ಮೇಲ್ಮನವಿ ಸಲ್ಲಿಸಿದ್ದವು.

ಮಣಿಪುರದ 34 ಮಾನ್ಯತೆ ಪಡೆದ ಬುಡಕಟ್ಟು ಜನಾಂಗಗಳ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲೆ 2023ರ ತೀರ್ಪು ಪ್ರತಿಕೂಲ ಪರಿಣಾಮ ಬೀರಿದೆ. ಮೈತೇಯಿ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದಿರುವುದರಿಂದ, ವಿಧಾನಸಭೆ ಸೇರಿದಂತೆ ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಸ್ಥಾನಗಳನ್ನು ಅದು ಕಸಿದುಕೊಳ್ಳಲಿದೆ ಎಂದು ವಾದಿಸಲಾಗಿತ್ತು.

ತೀರ್ಪಿನಿಂದ ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುವ ಗುಂಪುಗಳ ಯಾವುದೇ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ನ್ಯಾ. ಮುರಳೀಧರನ್‌ ಅವರಿಂದ ನಿರ್ದೇಶನ ಪಡೆದಿದ್ದ ಮೂಲ ಅರ್ಜಿದಾರರು ಸಮರ್ಥಿಸಿಕೊಂಡಿದ್ದರು.

ಈ ಮಧ್ಯೆ ಹೈಕೋರ್ಟ್‌ಗೆ ತೀರ್ಪನ್ನು ಮರುಪರಿಶೀಲಿಸುವಂತೆ ಅರ್ಜಿ ಸಲ್ಲಿಸಲಾಯಿತು. ಇದರಲ್ಲಿ ಸಮಸ್ಯೆಯ ಸೂಕ್ಷ್ಮ ಸ್ವರೂಪವನ್ನು ಪರಿಗಣಿಸಿ ಮಾರ್ಚ್ 2023ರ ಆದೇಶದಲ್ಲಿನ "ನಿರುಪದ್ರವಿ" ನಿರ್ದೇಶನವನ್ನು ಮಾರ್ಪಡಿಸಬೇಕಾಗಬಹುದು ಎಂದು ಮೈತೇಯಿ ಅರ್ಜಿದಾರರು ತಿಳಿಸಿದರು.

ಮೈತೇಯಿ ಸಮುದಾಯವನ್ನು ಮತ್ತೆಯೂ ಎಸ್‌ಟಿ ಸಮುದಾಯಕ್ಕೆ ಸೇರ್ಪಡೆ ಮಾಡುವನ್ನು ಸರ್ಕಾರ ಪರಿಗಣಿಸಬೇಕು. ಆದರೆ ಈ ಕುರಿತು ನಿರ್ಧಾರ ಕೈಗೊಳ್ಳುವುದು ಸಂಪೂರ್ಣವಾಗಿ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಅರ್ಜಿದಾರರು ವಿವರಿಸಿದ್ದರು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Mutum Churamani Meetei vs State of Manipur and ors.pdf
Preview
Kannada Bar & Bench
kannada.barandbench.com