ಸೇವಾ ಸಂಬಂಧಿ ವಿಚಾರಗಳಲ್ಲಿ ಸಂಶೋಧನೆಗಾಗಿ ಚಾಟ್‌ಜಿಪಿಟಿ ಬಳಕೆ ಮಾಡುತ್ತಿರುವುದಾಗಿ ಮಣಿಪುರ ಹೈಕೋರ್ಟ್ ಈಚೆಗೆ ಬಹಿರಂಗಪಡಿಸಿದೆ.
ಗ್ರಾಮ ರಕ್ಷಣಾ ಪಡೆ (ವಿಡಿಎಫ್) ಸಿಬ್ಬಂದಿ ಹಿಂಪಡೆಯುವ ಕುರಿತು ನೆರವಾಗಲು ಕೃತಕ ಬುದ್ದಿಮತ್ತೆ ಬಳಕೆ ಮಾಡಿರುವುದಾಗಿ ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಹೇಳಿದ್ದಾರೆ.
ವಿಡಿಎಫ್ ಅನ್ನು ಯಾವ ಸಂದರ್ಭದಲ್ಲಿ ಹಿಂಪಡೆಯಬಹುದು ಎಂಬುದರ ಕುರಿತು ಆರಂಭದಲ್ಲಿ ನ್ಯಾಯಾಲಯವು ಸರ್ಕಾರದ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಸರಿಯಾದ ಪ್ರತಿಕ್ರಿಯೆ ದೊರೆಯದಿದ್ದಾಗ ನ್ಯಾಯಮೂರ್ತಿಗಳು ಗೂಗಲ್ ಮತ್ತು ಚಾಟ್‌ಜಿಪಿಟಿ ಸೇವೆ ಪಡೆದಿದ್ದರು.
“ಇಂಥ ಸಂದರ್ಭದಲ್ಲಿ ನ್ಯಾಯಾಲಯವು ಗೂಗಲ್ ಮತ್ತು ಚಾಟ್‌ಜಿಪಿಟಿ 3.5 ಬಳಕೆ ಮಾಡುವ ಮೂಲಕ ಕೆಲವು ಪ್ರಮುಖ ಮಾಹಿತಿ ಸಂಗ್ರಹಿಸಿದೆ” ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ದಾಖಲಿಸಿದ್ದಾರೆ.
ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಭದ್ರತೆ ಹೆಚ್ಚಿಸಲು ಮತ್ತು ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನೆರವಾಗಲು ಮಣಿಪುರದಲ್ಲಿ ವಿಡಿಎಫ್ ಆರಂಭಿಸಲಾಗಿದೆ. ಮಣಿಪುರ ಪೊಲೀಸ್ ಅಡಿ ಬರುವ ವಿಡಿಎಫ್‌ನಲ್ಲಿ ಸ್ಥಳೀಯ ಸಮುದಾಯಗಳ ಸ್ವಯಂ ಸೇವಕರು ಇರಲಿದ್ದಾರೆ. ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ದಂಗೆಕೋರರು ಮತ್ತು ಜನಾಂಗೀಯ ದಾಳಿ ತಡೆಯಲು ಅವರ ನೆರವು ಪಡೆಯಲಾಗುತ್ತದ ಎಂದು ಎಐ ನೆರವು ಪಡೆದು ಆದೇಶದಲ್ಲಿ ವಿವರಿಸಲಾಗಿದೆ.
ವಿಡಿಎಫ್ ಹಿಂಪಡೆಯುವ ಆದೇಶವು ಸ್ವಾಭಾವಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಹೇಳಿದ್ದು, ಅರ್ಜಿದಾರರನ್ನು ತಕ್ಷಣ ಮರುನೇಮಕ ಮಾಡುವಂತೆ ಆದೇಶಿಸಿದೆ.