ಮಣಿಪುರಿ ಮೈತೇಯಿ ಮಾಯೆಕ್ ಲಿಪಿಯಲ್ಲಿ ಭಾರತದ ಸಂವಿಧಾನ ಪ್ರಕಟಿಸಲು ಮಣಿಪುರ ಸರ್ಕಾರದ ನಿರ್ಧಾರ

ಮೈತೇಯಿ ಮಾಯೆಕ್ ಲಿಪಿಯಲ್ಲಿ ಸಂವಿಧಾನ ಪ್ರಕಟಿಸುವುದು ನಿಸ್ಸಂದೇಹವಾಗಿ ಇಡೀ ರಾಜ್ಯಕ್ಕೆ ಅಮೂಲ್ಯ ಆಸ್ತಿಯಾಗಲಿದ್ದು ಮಣಿಪುರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಇದು ಪರಿಣಮಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಭಾರತದ ಸಂವಿಧಾನ
ಭಾರತದ ಸಂವಿಧಾನ
Published on

ಮಣಿಪುರಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸಂವಿಧಾನದ ದ್ವಿಭಾಷಾ ಆವೃತ್ತಿಯನ್ನು ಪ್ರಕಟಿಸುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಅವರು ಘೋಷಿಸಿದ್ದು ಈ ಆವೃತ್ತಿ ಮೈತೇಯಿ ಮಾಯೆಕ್ ಲಿಪಿಯಲ್ಲಿ ಇರಲಿದೆ ಎಂದಿದ್ದಾರೆ.

"ಮಣಿಪುರ ಸರ್ಕಾರದ ಕಾನೂನು ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಭಾರತದ ಸಂವಿಧಾನದ ದ್ವಿಭಾಷಾ ಆವೃತ್ತಿಯನ್ನು (ಇಂಗ್ಲಿಷ್-ಮಣಿಪುರಿ) ಮಣಿಪುರಿ ಮೈತೇಯಿ ಮಾಯೆಕ್‌ ಲಿಪಿಯಲ್ಲಿ ಪ್ರಕಟಿಸುತ್ತಿದೆ ಎಂದು ತಿಳಿದು ನನಗೆ ಅತೀವ ಸಂತಸವಾಗಿದೆ" ಎಂದು ಶನಿವಾರ ಸಿಂಗ್‌ ಅವರು ತಮ್ಮ ಅಧಿಕೃತ X ಖಾತೆಯಲ್ಲಿ (ಹಿಂದಿನ ಟ್ವಿಟರ್) ಮಾಹಿತಿ ನೀಡಿದ್ದಾರೆ.

ಮಣಿಪುರಿ ಲಿಪಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ಮತ್ತು ಮಣಿಪುರಿ ಭಾಷೆ ಮಾತನಾಡುವವರಿಗೆ ಭಾರತೀಯ ಸಂವಿಧಾನ ತಿಳಿಸಿಕೊಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

ಸಂವಿಧಾನವು ದೇಶದ ಸರ್ವೋಚ್ಚ ಕಾನೂನಾಗಿದೆ. ಆದರೆ, ಸ್ಥಳೀಯ ಭಾಷೆಗಳಲ್ಲಿ ಸಂವಿಧಾನ ಕೃತಿಗಳ ಅಲಭ್ಯತೆಯಿಂದಾಗಿ ಅನೇಕರಿಗೆ ಅದನ್ನು ಅರಿಯಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

"ಸ್ಥಳೀಯ ಭಾಷೆಯಲ್ಲಿ ಲಭ್ಯವಿರದ ಕಾರಣ ಭಾರತದ ಸಂವಿಧಾನ ಜಾರಿಗೆ ಬಂದು 73 ವರ್ಷ ಕಳೆದಿದ್ದರೂ ಅದರ ಅನೇಕ ತತ್ವಗಳು ಸಾಮಾನ್ಯ ಜನರ ಅರಿವಿನ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ ಈ ಬಾರಿ 105ನೇ ತಿದ್ದುಪಡಿಯವರೆಗಿನ ಸಂವಿಧಾನ ಕೃತಿಯನ್ನು ಮೈತೇಯಿ ಮಾಯೆಕ್ ಲಿಪಿಯಲ್ಲಿ ತರುತ್ತಿರುವುದು ಬಹಳ ಮಹತ್ವಪೂರ್ಣ ಮತ್ತು ವಿಶೇಷವಾದುದಾಗಿದೆ" ಎಂದು ಅವರು ನುಡಿದಿದ್ದಾರೆ.

ಈ ಆವೃತ್ತಿಯು ನಿಸ್ಸಂದೇಹವಾಗಿ ಇಡೀ ರಾಜ್ಯಕ್ಕೆ ಅಮೂಲ್ಯವಾದ ಆಸ್ತಿಯಾಗಲಿದ್ದು ಅದನ್ನು ಪ್ರಕಟಿಸುವುದು ಮಣಿಪುರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.

Kannada Bar & Bench
kannada.barandbench.com