ಕೇಂದ್ರದ್ದು ಖೊಟ್ಟಿ ಭರವಸೆ, ಬಿಜೆಪಿ ಬೆಂಬಲಿಗರಿಂದ ಮಣಿಪುರ ಹಿಂಸಾಚಾರ: ಸುಪ್ರೀಂ ಕೋರ್ಟ್‌ಗೆ ಬುಡಕಟ್ಟು ವೇದಿಕೆ ದೂರು

ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ʼಜನಾಂಗೀಯ ಶುದ್ಧೀಕರಣʼ ಕ್ರಿಯೆಯಲ್ಲಿ ನಿರತರಾಗಿದ್ದಾರೆ ಎಂದು ಎಸ್ಐಟಿ ತನಿಖೆಗೆ ಒತ್ತಾಯಿಸಿರುವ ವೇದಿಕೆ ಆರೋಪಿಸಿದೆ.
Supreme Court, Manipur Violence
Supreme Court, Manipur Violence

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ  ಸುಪ್ರೀಂ ಕೋರ್ಟ್‌ಗೆ ನೀಡಿರುವ ಭರವಸೆ ಪೊಳ್ಳಾಗಿದ್ದು, ಗಂಭೀರತೆಯನ್ನು ಹೊಂದಿಲ್ಲ ಎಂದು ಮಣಿಪುರ ಬುಡಕಟ್ಟು ವೇದಿಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ನಡೆಸಿದ್ದ ವಿಚಾರಣೆ ಬಳಿಕ ಇಲ್ಲಿಯವರೆಗೆ ಕುಕಿ ಬುಡಕಟ್ಟು ಜನಾಂಗಕ್ಕೆ ಸೇರಿದ 81ಕ್ಕೂ ಹೆಚ್ಚು ಜನ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ 31,410 ಕುಕಿಗಳು ಸ್ಥಳಾಂತರಗೊಂಡಿದ್ದಾರೆ ಎಂದು ಜೂನ್ 9ರಂದು ಸಲ್ಲಿಸಲಾದ ಹೊಸ ವಾದಕಾಲೀನ ಅರ್ಜಿಯಲ್ಲಿ ಬುಡಕಟ್ಟು ಕಲ್ಯಾಣ ಸಂಸ್ಥೆ ಆರೋಪಿಸಿದೆ. ಇದಲ್ಲದೆ, 237 ಚರ್ಚ್‌ಗಳು ಮತ್ತು 73 ಆಡಳಿತಾತ್ಮಕ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದ್ದು 141 ಹಳ್ಳಿಗಳನ್ನು ನಾಶಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

Also Read
ಮಣಿಪುರ ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು: ಸುಪ್ರೀಂ ಕೋರ್ಟ್ ಮೊರೆ ಹೋದ ಮಣಿಪುರ ಬುಡಕಟ್ಟು ಸಂಘಟನೆ

“ಅಧಿಕಾರಿಗಳ ಭರವಸೆಗಳು ಪ್ರಯೋಜನಕ್ಕೆ ಬಂದಿಲ್ಲ ಮತ್ತು ಅವುಗಳನ್ನು ಗಂಭೀರವಾಗಿ ನೀಡಲಾಗಿಲ್ಲ, ಅವುಗಳನ್ನು ಜಾರಿಗೆ ತರುವ ಉದ್ದೇಶ ಅವರಿಗಿಲ್ಲ. ಗೌರವಾನ್ವಿತ ನ್ಯಾಯಾಲಯ ಇನ್ನು ಮುಂದೆ ಭಾರತ ಒಕ್ಕೂಟ (ಕೇಂದ್ರ ಸರ್ಕಾರ) ನೀಡಿದ ಖೊಟ್ಟಿ ಆಶ್ವಾಸನೆಗಳ ಮೇಲೆ ಅವಲಂಬಿತವಾಗಬಾರದು. ಏಕೆಂದರೆ ಭಾರತ ಒಕ್ಕೂಟ  ಮತ್ತು ರಾಜ್ಯದ ಮುಖ್ಯಮಂತ್ರಿ ಒಟ್ಟಾಗಿ ಕುಕಿಗಳ ಜನಾಂಗೀಯ ಶುದ್ಧೀಕರಣಕ್ಕಾಗಿ ಕೋಮುವಾದದ ಕಾರ್ಯಸೂಚಿ ಕೈಗೆತ್ತಿಕೊಂಡಿದ್ದಾರೆ” ಎಂದು ವೇದಿಕೆ ಆರೋಪಿಸಿದೆ.

ವಾದಕಾಲೀನ ಅರ್ಜಿಯ ಪ್ರಮುಖಾಂಶಗಳು

  • ದಾಳಿಕೋರರಿಗೆ ಆಡಳಿತಾರೂಢ ಬಿಜೆಪಿಯ ಬೆಂಬಲವಿದೆ.

  • ನಡೆಯುತ್ತಿರುವ ಹಿಂಸಾಚಾರ ಎರಡು ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಸುಳ್ಳು.

  • ಕೆಲ ಕಾಲದಿಂದ ಆಳವಾಗಿ ಬೇರೂರಿರುವ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಎರಡೂ ಸಮುದಾಯಗಳು ದೀರ್ಘಕಾಲ ಸಹಬಾಳ್ವೆ ನಡೆಸುತ್ತವೆ  ಎಂಬುದನ್ನು ಇಂತಹ ನಿರೂಪಣೆಗಳು ತಿಳಿಸುವುದಿಲ್ಲ.

  • ಅಧಿಕಾರದಲ್ಲಿರುವ ಪಕ್ಷದೊಂದಿಗೆ ನಂಟು ಹೊಂದಿರುವ ಕೆಲ ಶಸ್ತ್ರಸಜ್ಜಿತ ಕೋಮು ಗುಂಪುಗಳು ಪೂರ್ವಯೋಜಿತ ಕೋಮು ದಾಳಿ ನಡೆಸುತ್ತಿವೆ.

  • ಸಂಘರ್ಷ ನಡೆಯುತ್ತಿದೆ ಎಂದು ಬಿಂಬಿಸುವ ಮಾಧ್ಯಮ ನಿರೂಪಣೆಗಳು ಎಲ್ಲಾ ದಾಳಿಗಳ ಹಿಂದೆ ಈ ಗುಂಪುಗಳ ಕೈವಾಡವಿದೆ ಎಂಬುದನ್ನು ಮರೆಮಾಚುತ್ತಿದ್ದು ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ರಕ್ಷಿಸಲಾಗುತ್ತಿದೆ. ಆ ಮೂಲಕ ಮತ್ತಷ್ಟು ದಾಳಿ ನಡೆಸಲು ಇಂಬು ನೀಡುತ್ತಿವೆ.

  • ಈ ಗುಂಪುಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದೇ ಹೋದರೆ ಶಾಂತಿ ಯತ್ನ ದುರ್ಬಲವಾಗುತ್ತದೆ.

  • ಬುಡಕಟ್ಟು ಕಾರ್ಮಿಕರು ಅವಲಂಬಿತವಾಗಿರುವ ಗಸಗಸೆ ಕೃಷಿಯಲ್ಲಿ ದೊಡ್ಡ ರಾಜಕಾರಣಿಗಳು ಮತ್ತು ಮಾದಕವಸ್ತು ಮಾಫಿಯಾ ದೊರೆಗಳು ಮೇಲಾಟ ನಡೆಯುತ್ತಿದೆ. ಒಬ್ಬ ಮಾದಕವಸ್ತು ದೊರೆ ಮಣಿಪುರದ ಮಾಜಿ ಮುಖ್ಯಮಂತ್ರಿಯ ಸಂಬಂಧಿಯಾದರೆ ಮತ್ತೊಬ್ಬ ಈಗಿನ ಮುಖ್ಯಮಂತ್ರಿಯ ಸಂಬಂಧಿ.

  • ಮಾದಕವಸ್ತು ದಂಧೆಕೋರರೂ ಆಗಿರುವ ರಾಜಕಾರಣಿಗಳು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಇಂತಹ ದಂಧೆಯ ಸೂತ್ರದಾರರು ಮತ್ತು ಫಲಾನುಭವಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಬುಡಕಟ್ಟು ಕೃಷಿಕರ ವಿರುದ್ಧ ಹಾನಿಕಾರಕ ಆರೋಪಗಳನ್ನು ಮಾಡುತ್ತಿದ್ದಾರೆ.

Kannada Bar & Bench
kannada.barandbench.com