ಮಣಿಪುರ ಹಿಂಸಾಚಾರ: ವಿಷಯ ಗಂಭೀರವಾಗಿದೆ ಎಂದ ಸುಪ್ರೀಂ; ಸೇನೆ ನಿಯೋಜನೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಕಾರ

ಕೇಂದ್ರ ಸರ್ಕಾರದ ಭರವಸೆಯ ಹೊರತಾಗಿಯೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಎಪ್ಪತ್ತು ಜನರನ್ನು ಕೊಲ್ಲಲಾಗಿದೆ ಎಂದು ವಿವರಿಸಿ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು.
Supreme Court, Manipur
Supreme Court, Manipur
Published on

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿರುವ ಭರವಸೆ ಪೊಳ್ಳಾಗಿದ್ದು, ಗಂಭೀರತೆಯನ್ನು ಹೊಂದಿಲ್ಲ ಎಂದು ಆರೋಪಿಸಿ ಮಣಿಪುರ ಬುಡಕಟ್ಟು ವೇದಿಕೆ ಸಲ್ಲಿಸಿದ್ದ ವಾದಕಾಲೀನ ಅರ್ಜಿಯ (ಐಎ) ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಹಿಂಸಾಚಾರವನ್ನು ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ಸಮಸ್ಯೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎಂ ಎಂ ಸುಂದರೇಶ್ ಅವರನ್ನೊಳಗೊಂಡ ರಜಾಕಾಲೀನ ಪೀಠ ಪರಿಗಣಿಸಿದ್ದು ಬೇಸಿಗೆ ವಿರಾಮದ ನಂತರ ನ್ಯಾಯಾಲಯದ ಸಾಮಾನ್ಯ ಕಾರ್ಯಚಟುವಟಿಕೆ ಆರಂಭವಾದ ಬಳಿಕವೇ ಪ್ರಕರಣ ಆಲಿಸುವುದಾಗಿ ಹೇಳಿದೆ.

"ಇದು ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ಸಮಸ್ಯೆ. ಸೇನೆಯ ಮಧ್ಯಸ್ಥಿಕೆ ಇತ್ಯಾದಿಗಳಿಗೆ ನ್ಯಾಯಾಲಯ ಆದೇಶ ಹೊರಡಿಸುವ ಅಗತ್ಯವಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅರ್ಜಿಯನ್ನು ಬುಡಕಟ್ಟು ಪ್ರದೇಶಗಳ ಭದ್ರತೆಗಾಗಿ ಸಲ್ಲಿಸಿದ್ದು  ಕೇಂದ್ರ ಸರ್ಕಾರದ ಭರವಸೆಯ ನಂತರವೂ ಬುಡಕಟ್ಟು ಸಮುದಾಯಕ್ಕೆ ಸೇರಿದ ಎಪ್ಪತ್ತು ಮಂದಿಯನ್ನು ಕೊಲ್ಲಲಾಗಿದೆ ಎಂದು ದೂರಿದರು.

“ಈ ಸಂಸ್ಥೆ (ನ್ಯಾಯಾಲಯ) ನಮ್ಮ ಕೊನೆಯ ಭರವಸೆಯಾಗಿದ್ದು ಭರವಸೆ ನೀಡಿದ ನಂತರವೂ ಆದಿವಾಸಿಗಳನ್ನು ಕೊಲ್ಲಲಾಗುತ್ತಿದೆ” ಎಂದು ಅವರು ಹೇಳಿದರು.

ಇತ್ತ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಭದ್ರತಾ ಸಂಸ್ಥೆಗಳು ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಆದರೂ ಇದನ್ನು ಹೇಳುತ್ತಿರುವುದು ವಿಷಾದನೀಯ” ಎಂದರು.

ಅಂತಿಮವಾಗಿ ನ್ಯಾಯಾಲಯವು "ನಾವು ಜುಲೈ 3ರಂದು ಪ್ರಕರಣದ ವಿಚಾರಣೆ ನಡೆಸುತ್ತೇವೆ, ಅದಕ್ಕಿಂತ ಮೊದಲು ಅಲ್ಲ" ಎಂದಿತು.

Kannada Bar & Bench
kannada.barandbench.com