ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದಿದ್ದ ಹಿಂಸಾಚಾರದಲ್ಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಪಾತ್ರ ಇರುವುದನ್ನು ಬಿಂಬಿಸುವ ಕೆಲವು ಧ್ವನಿ ಮುದ್ರಿಕೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.
ಸಂಭಾಷಣೆಯ ಸತ್ಯಾಸತ್ಯತೆ ಸಾಬೀತುಪಡಿಸುವುದಕ್ಕಾಗಿ ಆಡಿಯೊ ಟೇಪ್ ಮತ್ತು ದಾಖಲೆಗಳ ಮೂಲ ವಿವರಗಳನ್ನು ಅರ್ಜಿ ಸಲ್ಲಿಸಿರುವ ಕುಕಿ ಮಾನವ ಹಕ್ಕು ಸಂಘಟನೆ ಟ್ರಸ್ಟ್ ಒದಗಿಸುವಂತೆ ಸಿಜೆಐ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ಗಲಭೆಗೆ ಕುಮ್ಮಕ್ಕು ನೀಡಿದ್ದಾಗಿ ಮತ್ತು ಶಸ್ತ್ರಾಸ್ತ್ರ ಲೂಟಿ ಮಾಡಿದವರನ್ನು ರಕ್ಷಿಸಿದ್ದಾಗಿ ಒಪ್ಪಿಕೊಂಡ ಸಿಎಂ ಬಿರೇನ್ ಸಿಂಗ್ ಅವರ ಹೇಳಿಕೆಯನ್ನು ಅರ್ಜಿ ಸಲ್ಲಿಸಿರುವ ಟ್ರಸ್ಟ್ ರೆಕಾರ್ಡ್ ಮಾಡಿಕೊಂಡಿದೆ ಎಂದು ಟ್ರಸ್ಟ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ತಿಳಿಸಿದರು.
ಸ್ವತಃ ಮುಖ್ಯಮಂತ್ರಿಗಳೇ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿರುವಾಗ ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಘಟನೆಯ ತನಿಖೆ ನಡೆಸಬಹುದು ಎಂದು ಅವರು ಪ್ರಶ್ನಿಸಿದರು.
ಟೇಪ್‌ಗಳನ್ನು ಲಾಂಬಾ ಆಯೋಗಕ್ಕೆ ಸಲ್ಲಿಸಲಾಗಿದೆ. ಈ ನ್ಯಾಯಾಲಯ ಮಣಿಪುರ ಹಿಂಸಾಚಾರ ಪ್ರಕರಣ ಆಲಿಸುತ್ತಿದೆ. ಇದು ಸಾಮಾನ್ಯ ಪ್ರಕರಣವಲ್ಲ," ಎಂದು ಭೂಷಣ್ ಹೇಳಿದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆ ನಡೆಯುತ್ತಿದೆ. ಶಾಂತಿ ಕಾಪಾಡಲು ಸಿಎಂ ಎಲ್ಲಾ ಕುಕಿ ಸಮುದಾಯದ ಶಾಸಕರನ್ನು ಭೇಟಿಯಾಗಿದ್ದಾರೆ. ಆದರೆ ಟ್ರಸ್ಟ್ ಶಾಂತಿ ಬಯಸುತ್ತಿಲ್ಲ. ಬೆಂಕಿಯಾಡುತ್ತಲೇ ಇರುವಂತೆ ನೋಡಿಕೊಳ್ಳುವುದು ಅದರ ಉದ್ದೇಶ. ಅಲ್ಲದೆ ಹೈಕೋರ್ಟ್‌ನ ಘನತೆಗೆ ಧಕ್ಕೆ ತರಬಾರದು ಎಂಬುದು ನನ್ನ ಸಲಹೆ. ಅರ್ಜಿದಾರರು ಹೈಕೋರ್ಟ್‌ಗೆ ತೆರಳಲಿ ಎಂದರು.
ಆದರೆ ಟೇಪ್‌ಗಳ ಸತ್ಯಾಸತ್ಯತೆ ಪರೀಕ್ಷಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಮೆಹ್ತಾ ನ್ಯಾಯಾಲಯದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದರು.ವಾಸ್ತವ ಪರಿಶೀಲಿಸದೆ ನ್ಯಾಯಮೂರ್ತಿಗಳು ದಂತಗೋಪುರದಲ್ಲಿ ಕುಳಿತು ತೀರ್ಪಿತ್ತಿದ್ದಾರೆ. ಆದರೆ ಈ ಮಾತನ್ನು ಅವಹೇಳನಕರ ರೀತಿಯಲ್ಲಿ ಹೇಳುತ್ತಿಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ಮಣಿಪುರದಲ್ಲಿ ಏನಾಯಿತು ಎಂಬುದು ನಮಗೂ ತಿಳಿದಿದೆ. ನಾವು ದಂತದ ಗೋಪುರಗಳಲ್ಲಿಲ್ಲದ ಕಾರಣ ಪ್ರಕರಣ ಆಲಿಸುತ್ತಿದ್ದೇವೆ. ನಿರ್ದಿಷ್ಟವಾಗಿ ದೂರುವ ಅಗತ್ಯವಿಲ್ಲ ಎಂದರು. ಆಗ ಅವಹೇಳನಕಾರಿ ಅರ್ಥದಲ್ಲಿ ತಾನು ದಂತಗೋಪುರದ ಉಲ್ಲೇಖ ಮಾಡಿಲ್ಲ ಎಂದು ಮೆಹ್ತಾ ಮನವರಿಕೆ ಮಾಡಿಕೊಟ್ಟರು. ʼಆಗಲಿ ಧನ್ಯವಾದಗಳುʼ ಎಂದು ಸಿಜೆಐ ಪ್ರತಿಕ್ರಿಯಿಸಿದರು.