ಮಣಿಪುರದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರ ಗುರುತು ಪತ್ತೆಯಾಗದ ಮತ್ತು ವಾರಸುದಾರರಿಲ್ಲದ ಶವಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಣಿಪುರ ಸರ್ಕಾರಕ್ಕೆ ಆದೇಶಿಸಿದೆ.
ಮೇ 2023 ರಿಂದ ಹಿಂಸಾಚಾರ ನಡೆದಿದ್ದು ಶವಗಳನ್ನು ಅನಿರ್ದಿಷ್ಟವಾಗಿ ಶವಾಗಾರಗಳಲ್ಲಿ ಇಡುವುದು ಸೂಕ್ತವಲ್ಲ ಎಂಬುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಅದರಂತೆ, ಗುರುತು ಸಿಕ್ಕ ಶವಗಳನ್ನು ಹತ್ತಿರದ ಸಂಬಂಧಿಕರಿಗೆ ತಿಳಿಸಬೇಕು ಮತ್ತು ಸಮುದಾಯದ ಧಾರ್ಮಿಕ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಘನತೆಯೊಂದಿಗೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಕ್ರಿಮಿನಲ್ ತನಿಖೆ ನಡೆಯುತ್ತಿರುವ ಕಾರಣ ಅಂತ್ಯಕ್ರಿಯೆ ನಡೆಸುವ ಮೊದಲು ಶವಗಳ ಡಿಎನ್ಎ ಮಾದರಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಅದು ಹೇಳಿದ್ದು ಈ ಸಂಬಂಧ ಏಳು ನಿರ್ದೇಶನಗಳನ್ನು ನೀಡಿದೆ.
ಪರಿಹಾರ ಶಿಬಿರಗಳಲ್ಲಿರುವ ಹತ್ತಿರದ ಸಂಬಂಧಿಕರು ಶವಗಳನ್ನು ಗುರುತಿಸಲು ಮತ್ತು ಅಂತಿಮ ವಿಧಿವಿಧಾನ ನೆರವೇರಿಸಲು ಅನುಕೂಲವಾಗುವಂತಹ ಕ್ರಮ ಕೈಗೊಳ್ಳಬೇಕು ಎಂದು ಕೂಡ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು ಈ ಸಂಬಂಧ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿತು.ಹಿಂಸಾಚಾರದ ಬಗ್ಗೆ ನಡೆಯುತ್ತಿರುವ ತನಿಖೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದಲ್ಲಿ ಮಹಿಳಾ ಸಮಿತಿ ರಚಿಸಿತ್ತು.