ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಇತ್ತೀಚೆಗೆ ತೀರ್ಪು ನೀಡಿದ್ದ ಮಣಿಪುರ ಹೈಕೋರ್ಟ್ ಬುಧವಾರ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ.
ಈ ತೀರ್ಪಿನಿಂದಾಗಿ ಮಣಿಪುರದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವೆ ಹಿಂಸಾಚಾರ ಉಂಟಾಗಿತ್ತು.
ತೀರ್ಪು ನಿಜಕ್ಕೂ ವಾಸ್ತವಿಕವಾಗಿ ತಪ್ಪಿನಿಂದ ಕೂಡಿದೆ. ಯಾವುದೇ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಈ ಹಿಂದೆ ನೀಡಿರುವ ತೀರ್ಪುಗಳಿಗೆ ಈ ತೀರ್ಪು ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
“ನಾವು ಮಣಿಪುರ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕಿದೆ. ಇದು ವಾಸ್ತವಿಕವಾಗಿ ತಪ್ಪಾಗಿದೆ. ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ನ್ಯಾ. ಮುರಳೀಧರನ್ ಅವರಿಗೆ ಸಮಯಾವಕಾಶ ನೀಡಿದ್ದರೂ ಅವರು ತಿದ್ದಿಕೊಳ್ಳಲಿಲ್ಲ. ನಾವೀಗ ಅದರ ವಿರುದ್ಧ ಕಠಿಣ ಧೋರಣೆ ತಳೆಯಬೇಕಿದೆ. ಸಾಂವಿಧಾನಿಕ ಪೀಠದ ತೀರ್ಪುಗಳನ್ನು ಹೈಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರು ಪಾಲಿಸದೆ ಹೋದಲ್ಲಿ ನಾವೇನು ಮಾಡಬೇಕಾಗುತ್ತದೆ ಎನ್ನುವುದು ನಿಚ್ಚಳವಾಗಿದೆ… ಇದಂತೂ ಸ್ಪಷ್ಟ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಆದರೂ ಯಾವುದೇ ತಡೆಯಾಜ್ಞೆ ನೀಡದ ನ್ಯಾಯಾಲಯ ಏಕಸದಸ್ಯ ನ್ಯಾಯಮೂರ್ತಿಗಳ ಪೀಠದ ತೀರ್ಪಿನ ವಿರುದ್ಧ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿರುವುದರಿಂದ ಬಾಧಿತ ಪಕ್ಷಕಾರರು ವಿಭಾಗೀಯ ಪೀಠದೆದುರು ತಮ್ಮ ವಾದ ಮಂಡಿಸಬಹುದು ಎಂದಿತು.
ಹೈಕೋರ್ಟ್ ತೀರ್ಪಿನಿಂದಾಗಿ ಮಣಿಪುರ ರಾಜ್ಯದಲ್ಲಿ ಉಂಟಾದ ಘರ್ಷಣೆಯಿಂದಾಗಿ ಮಣಿಪುರಿ ಬುಡಕಟ್ಟು ಜನಾಂಗದವರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.