ಮಣಿಪುರದ ಪರಿಹಾರ ಶಿಬಿರಗಳಲ್ಲಿರುವವರಿಗೆ ಕ್ರಿಸ್‌ಮಸ್‌ ಆಚರಣೆಗೆ ಅನುವು: ಸುಪ್ರೀಂ ಕೋರ್ಟ್‌ಗೆ ಸರ್ಕಾರದ ಭರವಸೆ

ಹಿಂಸಾಚಾರದಲ್ಲಿ ಮನೆಗಳನ್ನು ಕಳೆದುಕೊಂಡವರ ಪುನರ್ವಸತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಮಣಿಪುರ ಹಿಂಸಾಚಾರ ಮತ್ತು ಸುಪ್ರೀಂ ಕೋರ್ಟ್
ಮಣಿಪುರ ಹಿಂಸಾಚಾರ ಮತ್ತು ಸುಪ್ರೀಂ ಕೋರ್ಟ್

ಮಣಿಪುರ ಗಲಭೆ ಹಿನ್ನೆಲೆಯಲ್ಲಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಗಳು ಕ್ರಿಸ್‌ಮಸ್‌ ಹಬ್ಬದ ವೇಳೆ ಸಮಾರಂಭ ಮತ್ತು ಪ್ರಾರ್ಥನೆಗಳಿಗೆ ಹಾಜರಾಗುವಂತೆ ನೋಡಿಕೊಳ್ಳಲಾಗುವುದು ಎಂಬ ಮಣಿಪುರ ಸರ್ಕಾರದ ಭರವಸೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ದಾಖಲಿಸಿಕೊಂಡಿದೆ.

ಕ್ರಿಸ್‌ಮಸ್ ಆಚರಿಸಲು ರಾಜ್ಯದ ಜನರು ಒಟ್ಟುಗೂಡಲು ಯಾವುದಾದರೂ ಸ್ಥಳ ಇರಬೇಕು ಎಂದು ಮೈತೇಯಿ ಕ್ರೈಸ್ತ ಚರ್ಚ್‌ಗಳ ಮಂಡಳಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಹುಜೇಫಾ ಅಹ್ಮದಿ ವಿನಂತಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ ಭರವಸೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತನ್ನ ಆದೇಶದಲ್ಲಿ ದಾಖಲಿಸಿತು.

ಆಗ ಒಂದು ಸಮುದಾಯದ ಸಭೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಕಳವಳ ವ್ಯಕ್ತಪಡಿಸಿದರು.

"ಹಾಗಾದರೆ ಕ್ರಿಸ್‌ಮಸ್‌ ಆಚರಿಸುವವರ ಹಕ್ಕಿನ ಬಗ್ಗೆ ಏನು ಹೇಳುವಿರಿ?" ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಆಗ ಎಸ್‌ಜಿ ʼಅವರಿಗೆ ಹಕ್ಕಿದೆ ಆದರೆ ಕ್ರಿಸ್‌ಮಸ್‌ಗಾಗಿ ಸಭೆ ಸೇರುವುದಾಗಿ ಎಂದಿಗೂ ಅರ್ಜಿದಾರರು ಮನವಿ ಸಲ್ಲಿಸಿರಲಿಲ್ಲʼ ಎಂದು ನುಡಿದರು. ಆದರೂ ಹಿಂಸಾಚಾರ ಪೀಡಿತ ವ್ಯಕ್ತಿಗಳಿಗೆ ಕ್ರಿಸ್‌ಮಸ್‌ ಆಚರಿಸುವ ಹಕ್ಕಿದೆ ಎಂದು ನ್ಯಾಯಾಲಯ ನುಡಿಯಿತು.

"ಬರುವ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಜನ ಪರಿಹಾರ ಶಿಬಿರಗಳಲ್ಲಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಬ್ಬಕ್ಕೆ ಸಂಬಂಧಿಸಿದ ಎಲ್ಲಾ ಸಮಾರಂಭಗಳಿಗೆ ಶಿಬಿರದಲ್ಲಿರುವವರು ಹಾಜರಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಜಿ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಇಬ್ಬರೂ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ" ಎಂದು ನ್ಯಾಯಾಲಯ ತಿಳಿಸಿತು.

ಕೆಲ ತಿಂಗಳುಗಳ ಹಿಂದೆ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದ ಸಮಯದಲ್ಲಿ ಧ್ವಂಸಗೊಂಡ ಧಾರ್ಮಿಕ ಸ್ಥಳಗಳ ಪುನರ್‌ ಸ್ಥಾಪನೆಗೆ ಸಮಿತಿ ರಚಿಸುವ ನಿಟ್ಟಿನಲ್ಲಿ ಅಂತಹ ಸ್ಥಳಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ ಅದನ್ನು ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ಸಮಿತಿಗೆ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಿತು. ಪ್ರಾರ್ಥನಾ ಸ್ಥಳಗಳನ್ನು ಪುನಃಸ್ಥಾಪಿಸಲು ಕೈಗೊಂಡ ಕ್ರಮಗಳ ಬಗ್ಗೆ ಸಮಿತಿಗೆ ಮಾಹಿತಿ ನೀಡುವಂತೆಯೂ ಅದು ಆದೇಶಿಸಿದೆ.

ಈ ವರ್ಷದ ಆರಂಭದಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು .

ಹಿಂಸಾಚಾರದ ಬಗ್ಗೆ ನಡೆಯುತ್ತಿರುವ ತನಿಖೆಯನ್ನು ಪರಿಶೀಲಿಸಲು ಅದು ಈ ಹಿಂದೆ ನ್ಯಾಯಮೂರ್ತಿ ಮಿತ್ತಲ್ ನೇತೃತ್ವದ ಸಂಪೂರ್ಣ ಮಹಿಳಾ ನ್ಯಾಯಾಂಗ ಸಮಿತಿಯನ್ನು ರಚಿಸಿತ್ತು.

ಅಪರಿಚಿತ ಮತ್ತು ವಾರಸುದಾರರಿಲ್ಲದ ಶವಗಳ ಯೋಗ್ಯ ಮತ್ತು ಗೌರವಯುತ ಅಂತ್ಯಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ನವೆಂಬರ್‌ನಲ್ಲಿ ಮಣಿಪುರ ಸರ್ಕಾರಕ್ಕೆ ಆದೇಶಿಸಿತ್ತು.

ನ್ಯಾಯಮೂರ್ತಿ ಮಿತ್ತಲ್ ನೇತೃತ್ವದ ಸಮಿತಿಯ ಪರವಾಗಿ ಹಾಜರಾದ ವಕೀಲೆ ವಿಭಾ ದತ್ ಅವರು ಕೂಡ ವಿಚಾರಣೆ ವೇಳೆ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com