ಮಣಿಪುರ ಹಿಂಸಾಚಾರ: ರಾಜ್ಯ ಡಿಜಿಪಿಗೆ ಸುಪ್ರೀಂ ಸಮನ್ಸ್; ನ್ಯಾಯಾಂಗ ಸಮಿತಿ ರಚನೆಯ ಪ್ರಸ್ತಾಪ

"ತನಿಖೆಯ ಸ್ವರೂಪವನ್ನು ನಿರ್ಧರಿಸುವುದಕ್ಕಾಗಿ ನ್ಯಾಯಾಲಯಕ್ಕೆ ಸಹಾಯ ಮಾಡಲು, ಮಣಿಪುರ ಡಿಜಿಪಿ ಸೋಮವಾರ, ಆಗಸ್ಟ್ 7ರಂದು ಸುಪ್ರೀಂ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸುತ್ತಿದ್ದೇವೆ" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
Manipur Violence, Supreme Court
Manipur Violence, Supreme Court

ಮಣಿಪುರವನ್ನು ಕಾಡುತ್ತಿರುವ ಹಿಂಸಾಚಾರದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳು ಮುಂದಿನ ವಿಚಾರಣೆ ನಡೆಯುವ ದಿನದಂದು ಅಂದರೆ ಆಗಸ್ಟ್ 7ರಂದು ಮಣಿಪುರ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ನ್ಯಾಯಾಲಯಕ್ಕೆ ಖುದ್ದು ಹಾಜರಿರಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸರ ವೈಫಲ್ಯವನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿತು.

"ಪ್ರಾಥಮಿಕ ಮಾಹಿತಿ ಆಧಾರದ ಮೇಲೆ, ಘಟನೆ  ನಡೆದಿರುವುದಕ್ಕೂ ಎಫ್‌ಐಆರ್‌  ದಾಖಲಾತಿ, ಸಾಕ್ಷಿಗಳ ಹೇಳಿಕೆ ದಾಖಲು ಹಾಗೂ ಬಂಧನವಾಗಿರುವುದಕ್ಕೂ ನಡುವೆ ಸಾಕಷ್ಟು ವಿಳಂಬ ಉಂಟಾಗಿರುವುದರಿಂದ ತನಿಖೆ ಕುಂಟುತ್ತಾ ಸಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತನಿಖೆಯ ಸ್ವರೂಪ ನಿರ್ಧರಿಸಲು ನ್ಯಾಯಾಲಯಕ್ಕೆ ಸಹಾಯ ಮಾಡುವುದಕ್ಕಾಗಿ, ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾಗುವಂತೆ ನಾವು ಮಣಿಪುರ ಡಿಜಿಪಿಗೆ ನಿರ್ದೇಶಿಸುತ್ತಿದ್ದೇವೆ," ಎಂದು ನ್ಯಾಯಾಲಯ ನುಡಿದಿದೆ.

ಆರೋಪ ಮತ್ತು ಪ್ರಕರಣಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರುಗಳನ್ನು ಒಳಗೊಂಡ ನ್ಯಾಯಾಂಗ ಸಮಿತಿ ರಚಿಸುವ ಕುರಿತು ಸಹ ನ್ಯಾಯಾಲಯ ಪ್ರಸ್ತಾಪಿಸಿದೆ. ಪ್ರಕರಣಗಳನ್ನು ಯಾರು ತನಿಖೆ ಮಾಡಬೇಕು ಎಂಬುದರ ಕುರಿತು (ಕೇಂದ್ರ ಸರ್ಕಾರದಿಂದ) ಸೂಚನೆಗಳನ್ನು ಪಡೆಯುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನ್ಯಾಯಾಲಯ ಸೂಚಿಸಿದೆ. ಈ ನಿಟ್ಟಿನಲ್ಲಿ ತನಿಖೆಗೆ ಹೇಗೆ ಮಾರ್ಗದರ್ಶನ ಮಾಡಬಹುದು ಎಂಬ ಕುರಿತು ತನ್ನ ಬಳಿ ಕೆಲ ಸಲಹೆಗಳು ಇರುವುದಾಗಿ ಅದು ತಿಳಿದೆ.

"6,500 ಎಫ್‌ಐಆರ್‌ಗಳು ದಾಖಲಾಗಿವೆ.. ಅವಷ್ಟನ್ನೂ ಸಿಬಿಐಗೆ ವರ್ಗಾಯಿಸಲಾಗುವುದಿಲ್ಲ. ಹಾಗೆ ಮಾಡಿದರೆ ಸಿಬಿಐ ನಿಷ್ಕ್ರಿಯಗೊಳ್ಳುತ್ತದೆ... ಈ ಎಲ್ಲಾ ಎಫ್‌ಐಆರ್‌ಗಳ ತನಿಖೆಯನ್ನು ಹೇಗೆ ಮುನ್ನಡೆಸಬೇಕು ಎಂಬುದರ ಕುರಿತು ನಮ್ಮ ಬಳಿ ಕೆಲ ಸಲಹೆಗಳಿವೆ. 6,500 ಎಫ್‌ಐಆರ್‌ಗಳ ತನಿಖೆಯನ್ನು ಸಿಬಿಐಗೆ ವಹಿಸುವುದು ಅಸಾಧ್ಯ ಮತ್ತು ರಾಜ್ಯ ಪೊಲೀಸರು ಇವುಗಳನ್ನು ತನಿಖೆ ನಡೆಸಲು ಸಾಧ್ಯವಿಲ್ಲ. ನಾವು ನಿಮ್ಮ ವಾದ ಆಲಿಸಿ ಆದೇಶ ನೀಡುತ್ತೇವೆ… ”ಎಂದು ನ್ಯಾಯಾಲಯ ಸಾಲಿಸಿಟರ್ ಜನರಲ್‌ ಅವರಿಗೆ ತಿಳಿಸಿದೆ.

ಜುಲೈ 25, 2023 ರಂತೆ ಇತ್ತೀಚಿನ ಹಿಂಸಾಚಾರದ ಕುರಿತು ರಾಜ್ಯದಲ್ಲಿ 6,496 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಾಲಯಕ್ಕೆ ಇಂದು ತಿಳಿಸಲಾಯಿತು. ಅಧಿಕೃತ ಅಂಕಿಅಂಶಗಳ ಪ್ರಕಾರ, ಜೂನ್ 9 ರವರೆಗೆ 150 ಸಾವುಗಳು ಸಂಭವಿಸಿವೆ 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ  ಎಂಬ ಅಂಶಗಳನ್ನು ನ್ಯಾಯಾಲಯ ಗಮನಿಸಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ 11 ಎಫ್‌ಐಆರ್‌ಗಳು ದಾಖಲಾಗಿದ್ದು ಅಂತಹ ಪ್ರಕರಣಗಳಲ್ಲಿ ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೀಠ ಹೇಳಿದೆ.

ರಾಜ್ಯದ 6,500 ಎಫ್‌ಐಆರ್‌ಗಳನ್ನು ವರ್ಗವಾರು ವಿಂಗಡಣೆ ಮಾಡದೇ ಇರುವುದರಿಂದ ಇದುವರೆಗೆ ತಿಳಿದುಬಂದಿರುವ ಮಾಹಿತಿ ಅಸಮರ್ಪಕವಾಗಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ಕೊಲೆ, ಅತ್ಯಾಚಾರ, ಬೆಂಕಿಹಚ್ಚುವಿಕೆ, ಲೂಟಿ, ಆಸ್ತಿನಾಶ, ಮಹಿಳೆಯರ ಮಾನಭಂಗ, ಧಾರ್ಮಿಕ ಸ್ಥಳಗಳ ಧ್ವಂಸ ಮತ್ತು ಗಂಭೀರ ಸ್ವರೂಪದ ಗಾಯದ ಬಗ್ಗೆಎಷ್ಟುಎಫ್‌ಐಆರ್‌ಗಳು ದಾಖಲಾಗಿವೆ ಎಂಬುದರ ಕುರಿತು ರಾಜ್ಯ ಸರ್ಕಾರ ವಿಂಗಡಣೆ ಮಾಡಿ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಲಯ ಇಂದು ಆದೇಶ ನೀಡಿದೆ.

ನಿನ್ನೆಯ ವಿಚಾರಣೆ ವೇಳೆ ನ್ಯಾಯಾಲಯ ಗರಂ

ಮಣಿಪುರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ. ರಾಜ್ಯ ಪೊಲೀಸರು ತನಿಖೆಗೆ ಅಸಮರ್ಥರು ಎಂದು ಸುಪ್ರೀಂ ಕೋರ್ಟ್ ಸೋಮವಾರದ ವಿಚಾರಣೆ ವೇಳೆ ಕಟುಮಾತುಗಳಿಂದ ಅಸಮಾಧಾನ ವ್ಯಕ್ತಪಡಿಸಿತ್ತು. 6,000ಕ್ಕೂ ಹೆಚ್ಚು ಎಫ್‌ಐಆರ್‌ಗಳು ನೋಂದಣಿಯಾಗಿದ್ದರೂ ಕೆಲವೇ ಮಂದಿಯನ್ನು ಬಂಧಿಸಲಾಗಿದೆ ಎಂಬ ಅಂಶವನ್ನು ಗಮನಿಸಿ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

ಮಹಿಳೆಯರ ವಿರುದ್ಧ ಲೈಂಗಿಕ ಅಪರಾಧ ಸೇರಿದಂತೆ ರಾಜ್ಯದೆಲ್ಲೆಡೆ ನಡೆಯುತ್ತಿರುವ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ವಿಫಲವಾಗಿದ್ದು ಕಾನೂನು ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

"ತನಿಖೆ ತುಂಬಾ ಜಡವಾಗಿದೆ. ಯಾವುದೇ ಬಂಧನ ನಡೆದಿಲ್ಲ. ಇಷ್ಟು ಸಮಯ ಕಳೆದ ನಂತರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಇದು ಯಾವುದೇ ಕಾನೂನು ಮತ್ತು ಸಾಂವಿಧಾನಿಕ ವ್ಯವಸ್ಥೆ ಸ್ಥಗಿತಗೊಂಡಿದೆ ಎಂಬ ಭಾವನೆ ಮೂಡಿಸುತ್ತದೆ. ಸ್ಥಳಕ್ಕೆ ತೆರಳಲು ಸಾಧ್ಯವಾಗದ ಕಾರಣ ಪೊಲೀಸರು ಜನರನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎಂಬ ವಾದ ಸರಿ ಇರಬಹುದು. ಆದರೆ ನಂತರವೂ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು" ಎಂದು ನ್ಯಾಯಾಲಯ ಕಿಡಿಕಾರಿತ್ತು.

Related Stories

No stories found.
Kannada Bar & Bench
kannada.barandbench.com