ವಕೀಲರನ್ನು ಅವರ ಧಾರ್ಮಿಕ ಹಿನ್ನೆಲೆ ಅಥವಾ ಇನ್ನಿತರ ಸಂಬಂಧಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹಾಜರಾಗದಂತೆ ತಡೆಯಲಾಗುತ್ತಿಲ್ಲ ಎಂಬುದನ್ನು ದೃಢೀಕರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಣಿಪುರ ವಕೀಲರ ಸಂಘದ ಅಧ್ಯಕ್ಷರಿಗೆ ರಾಜ್ಯ ಹೈಕೋರ್ಟ್ ಸೂಚಿಸಿದೆ.
ಎಲ್ಲಾ ಸಮುದಾಯಗಳ ವಕೀಲರು ಹಾಜರಾಗಿದ್ದಾರೆ ಎಂಬುದನ್ನು ತೋರಿಸುವ ಹೇಳಿಕೆಯನ್ನು ಸಿದ್ಧಪಡಿಸಿ ಹೈಕೋರ್ಟ್‌ನ ಆದೇಶಗಳನ್ನು ಸಲ್ಲಿಸುವಂತೆ ಸಂಘದ ಅಧ್ಯಕ್ಷರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿತು.
ರಾಜ್ಯದ ಆಡಳಿತದ ಪ್ರತಿಯೊಂದು ವಿವರವನ್ನು ಪರಿಶೀಲಿಸುವ ಉದ್ದೇಶ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂದು ಸಿಜೆಐ ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.
"ಸುಪ್ರೀಂ ಕೋರ್ಟ್‌ನಿಂದ ನಾವು ಮಣಿಪುರ ಆಡಳಿತ ನಡೆಸಲು ಪ್ರಸ್ತಾಪಿಸುವುದಿಲ್ಲ. ನಾವು ಪ್ರತಿ ವಾರ ಪ್ರಕರಣ ಆಲಿಸುವುದಿಲ್ಲ, ಪ್ರತಿ ನಾಲ್ಕು ವಾರಗಳಿಗೊಮ್ಮೆ ನಾವು ಪ್ರಕರಣದ ವಿಚಾರಣೆ ನಡೆಸುತ್ತೇವೆ. ಮಣಿಪುರದ ಹೈಕೋರ್ಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಮಗನ್ನಿಸುವುದಿಲ್ಲ" ಎಂದು ಅವರು ನುಡಿದರು.
ರಾಜ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಕಾರಣಗಳನ್ನು ವಿವರಿಸಲು ವಕೀಲರಿಗೆ ಹೈಕೋರ್ಟ್ ಹಾಜರಾಗಲು ಅವಕಾಶ ನೀಡುತ್ತಿಲ್ಲ ಎಂಬ ಸಲ್ಲಿಕೆಗಳಿಗೆ ಪ್ರತಿಕ್ರಿಯೆಯಾಗಿ ಪೀಠ ಈ ಅವಲೋಕನ ಮಾಡಿದೆ. ತಮಗೆ ಎರಡು ಸಂದರ್ಭದಲ್ಲಿ ಹಾಜರಾಗಲು ಅವಕಾಶ ನೀಡಲಿಲ್ಲ ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ತಿಳಿಸಿದರೆ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರು "ಎಲ್ಲಾ ಸಮುದಾಯಗಳ ವಕೀಲರು ಪ್ರಕರಣಗಳಲ್ಲಿ ಹಾಜರಾಗುತ್ತಿದ್ದಾರೆ" ಎಂದು ತಿಳಿಸಿದರು. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಈ ವಿಚಾರಗಳನ್ನು ತಿಳಿಸಲಾಯಿತು.