ದೆಹಲಿ ಅಬಕಾರಿ ನೀತಿ: ಸಿಬಿಐ, ಇ ಡಿ ಪ್ರಕರಣಗಳಲ್ಲಿ ಜಾಮೀನು ಕೋರಿ ಮನೀಶ್ ಸಿಸೋಡಿಯಾ ದೆಹಲಿ ಹೈಕೋರ್ಟ್‌ಗೆ ಅರ್ಜಿ

ದೆಹಲಿ ನ್ಯಾಯಾಲಯ ಎರಡೂ ಪ್ರಕರಣಗಳಲ್ಲಿ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎಪ್ರಿಲ್ 30ರಂದು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಕದ ತಟ್ಟಿದ್ದಾರೆ.
Manish Sisodia and Delhi HC
Manish Sisodia and Delhi HC Facebook
Published on

ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ  ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮನೀಶ್ ಸಿಸೋಡಿಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಪ್ರಕರಣಗಳೆರಡರಲ್ಲೂ ಸಿಸೋಡಿಯಾ ಜಾಮೀನು ಕೋರಿದ್ದಾರೆ.

ಎಪ್ರಿಲ್ 30 ರಂದು ದೆಹಲಿ ನ್ಯಾಯಾಲಯ  ಎರಡೂ ಪ್ರಕರಣಗಳಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಕದ ತಟ್ಟಿದ್ದಾರೆ.

ಇಂದು ತುರ್ತು ವಿಚಾರಣೆ ಕೋರಲಾಯಿತಾದರೂ ಮೇ 3ರ ಶುಕ್ರವಾರದಂದು ವಿಚಾರಣೆ ನಡೆಸುವುದಾಗಿ ಉಚ್ಚ ನ್ಯಾಯಾಲಯ ತಿಳಿಸಿದೆ.

ಫೆಬ್ರವರಿ 26, 2023ರಿಂದ ಸಿಸೋಡಿಯಾ ಬಂಧನದಲ್ಲಿದ್ದಾರೆ. ಲಂಚ ಪಡೆದು ಕೆಲವು ವ್ಯಾಪಾರಿಗಳಿಗೆ ಮದ್ಯದ ಪರವಾನಗಿ ನೀಡಲು ದೆಹಲಿ ಸರ್ಕಾರದ ಪ್ರಮುಖರು ಸಂಚು ರೂಪಿಸಿದ್ದಾರೆ ಎಂಬ ಆರೋಪವನ್ನು ಈ ಪ್ರಕರಣ ಒಳಗೊಂಡಿದೆ. ಆರೋಪಿಗಳು ಕೆಲವು ಮದ್ಯ ಮಾರಾಟಗಾರರಿಗೆ ಲಾಭ ಮಾಡಿಕೊಡಲು ಅಬಕಾರಿ ನೀತಿ ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ.

ವಿಚಾರಣಾ ನ್ಯಾಯಾಲಯ ಸಿಸೋಡಿಯಾ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದು ಇದು ಎರಡನೇ ಬಾರಿ. ಸಿಬಿಐ ಪ್ರಕರಣದಲ್ಲಿ ಅವರ ಮೊದಲ ಜಾಮೀನು ಅರ್ಜಿಯನ್ನು ಮಾರ್ಚ್ 31, 2023ರಂದು ತಿರಸ್ಕರಿಸಲಾಗಿತ್ತು. ಏಪ್ರಿಲ್ 28, 2023ರಂದು ವಿಚಾರಣಾ ನ್ಯಾಯಾಲಯ ಇ ಡಿ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತು. ಇದನ್ನು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳೆರಡೂ ಎತ್ತಿ ಹಿಡಿದಿದ್ದವು.

ತನ್ನ ಆದೇಶದ ವೇಳೆ ಸುಪ್ರೀಂ ಕೋರ್ಟ್‌, ಒಂದೊಮ್ಮೆ ವಿಚಾರಣೆ ಸುದೀರ್ಘವಾಗಿದ್ದರೆ ಮತ್ತು ಮುಂದಿನ ಮೂರು ತಿಂಗಳಲ್ಲಿಯೂ ಆಮೆಗತಿಯಲ್ಲಿ ಮುಂದುವರಿದರೆ ವಿಚಾರಣಾ ನ್ಯಾಯಾಲಯಕ್ಕೆ ಹೊಸ ಜಾಮೀನು ಅರ್ಜಿಯನ್ನು ಸಿಸೋಡಿಯಾ ಸಲ್ಲಿಸಬಹುದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಸಿಸೋಡಿಯಾ ಮತ್ತೆ ಜಾಮೀನು ಕೋರಿ ದೆಹಲಿ ವಿಚಾರಣಾ ನ್ಯಾಯಾಲಯದಲ್ಲಿ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅದೂ ಕೂಡ ತಿರಸ್ಕೃತವಾಗಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿ ನಾಯಕ ಸಂಜಯ್ ಸಿಂಗ್, ಎಎಪಿ ಸಂವಹನ ಮುಖ್ಯಸ್ಥ ವಿಜಯ್ ನಾಯರ್ ಮತ್ತು ಭಾರತ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಸೇರಿದಂತೆ ಅನೇಕರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

ಕೇಜ್ರಿವಾಲ್ ಮತ್ತು ಕವಿತಾ ಪ್ರಸ್ತುತ ಜೈಲಿನಲ್ಲಿದ್ದರೆ, ಸಂಜಯ್ ಸಿಂಗ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Kannada Bar & Bench
kannada.barandbench.com