ಮನೀಶ್ ಸಿಸೋಡಿಯಾರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಜೈಲಿನೊಳಗೆ ಕನ್ನಡಕ, ಭಗವದ್ಗೀತೆ, ಡೈರಿ ಹಾಗೂ ಪೆನ್ನು ನೀಡುವಂತೆ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್ಪಾಲ್ ಸಮ್ಮತಿ ಸೂಚಿಸಿದ್ದಾರೆ.
Manish Sisodia, CBI
Manish Sisodia, CBI

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಎಎಪಿ ನಾಯಕ ಹಾಗೂ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿಯ ರವೂಜ್‌ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ.

ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಅಂದಿನಿಂದ ಈವರೆಗೆ ಅವರು ಸಿಬಿಐ ವಶದಲ್ಲಿದ್ದರು.

“ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸುವಂತೆ (ಸಿಬಿಐ ವತಿಯಿಂದ) ಅರ್ಜಿ ಸಲ್ಲಿಸಲಾಗಿದೆ. ಇನ್ನು ಮುಂದೆ ಅವರನ್ನು ಪೊಲೀಸ್‌ ಕಸ್ಟಡಿಯಲ್ಲಿಡುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವಿದ್ದರೆ ಕೋರಲಾಗುವುದು ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಮಾರ್ಚ್ 20ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗುತ್ತಿದೆ” ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.

ಜೈಲಿನೊಳಗೆ ಕನ್ನಡಕ, ಭಗವದ್ಗೀತೆ, ಡೈರಿ ಮತ್ತು ಪೆನ್ನು ನೀಡುವಂತೆ ಸಿಸೋಡಿಯಾ ಅವರು ಮಾಡಿದ್ದ ಮನವಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್‌ಪಾಲ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿಚಾರಣೆ ವೇಳೆ “ಎಎಪಿ ನಾಯಕರು ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದು ಸಾಕ್ಷಿಗಳು ಭೀತರಾಗಿದ್ದಾರೆ” ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದರು. ಆದರೆ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮೋಹಿತ್‌ ಮಾಥುರ್‌ ʼಇಂತಹ ವಾದದಿಂದ ದಿಗಲಾಗಿದೆ. ಅವರು ಮಾಧ್ಯಮದಿಂದ ಭಯಭೀತರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಮಾಧ್ಯಮ ವರದಿಗಳಲ್ಲಿ ಮತ್ತು ಶಾಂತಿಯುತ ಪ್ರತಿಭಟನೆಗಳಲ್ಲಿ ಸಿಸೋಡಿಯಾ ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಾಲಯ ಈ ಹಂತದಲ್ಲಿ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com