ತ್ರಿಷಾ, ಚಿರಂಜೀವಿ, ಖುಷ್ಬೂ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ ಮನ್ಸೂರ್ ಅಲಿ ಖಾನ್

ತಾನು ಮಾಡಿದ ತಮಾಷೆಯನ್ನು ಸಂದರ್ಭ ಲೆಕ್ಕಿಸದೆ ಪರಿಗಣಿಸಿದ ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ಸುಂದರ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಖಾನ್ ದೂರಿದ್ದಾರೆ.
ಮನ್ಸೂರ್ ಅಲಿ ಖಾನ್, ತ್ರಿಷಾ, ಚಿರಂಜೀವಿ ಮತ್ತು ಖುಷ್ಬೂ
ಮನ್ಸೂರ್ ಅಲಿ ಖಾನ್, ತ್ರಿಷಾ, ಚಿರಂಜೀವಿ ಮತ್ತು ಖುಷ್ಬೂInstagram

ನಟರಾದ ತ್ರಿಶಾ, ಚಿರಂಜೀವಿ ಹಾಗೂ ಬಿಜೆಪಿ ಸಂಸದೆಯೂ ಆಗಿರುವ ಅಭಿನೇತ್ರಿ ಖುಷ್ಬೂ ಸುಂದರ್ ವಿರುದ್ಧ ತಮಿಳು ನಟ ಮನ್ಸೂರ್ ಅಲಿ ಖಾನ್ ಮದ್ರಾಸ್ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಾನು ಮಾಡಿದ ತಮಾಷೆಗೆ ಬೇರೆಯದೇ ಅರ್ಥ ಕಲ್ಪಿಸುವ ಮೂಲಕ ಸತ್ಯ ಪರಿಶೀಲಿಸುವ ಯಾವುದೇ ಯತ್ನ ಮಾಡದೆ ತ್ರಿಷಾ ಮತ್ತಿತರರು ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಖಾನ್ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

"ಲಿಯೋ ಚಿತ್ರದಲ್ಲಿ ತ್ರಿಷಾ ನನ್ನ ಸಹನಟಿ. ಚಿತ್ರದಲ್ಲಿ ನಾನು ನಿರ್ವಹಿಸಿದ ನಕಾರಾತ್ಮಕ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದೆನೇ ಹೊರತು ವೈಯಕ್ತಿಕ ಟೀಕೆ ಮಾಡಿಲ್ಲ" ಎಂದು ಅವರು ಹೇಳಿದ್ದಾರೆ.

ನಾನು ವೈಯಕ್ತಿಕವಾಗಿ ಯಾವುದೇ ವ್ಯಕ್ತಿಯ ವಿರುದ್ಧ ತಪ್ಪು ಹೇಳಿಕೆ ನೀಡಿಲ್ಲ. ನಾನು ನಟಿಸಿದ ನಕಾರಾತ್ಮಕ (ಖಳ) ಪಾತ್ರಗಳ ಬಗ್ಗೆ ಮಾತ್ರ ಪ್ರತಿಕ್ರಿಯಿಸಿದ್ದೇನೆ. ಪ್ರತಿವಾದಿ ಅಥವಾ ನಿರ್ದಿಷ್ಟವಾಗಿ ಯಾವುದೇ ಮಹಿಳೆ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಲಿಯೋ ಚಿತ್ರದ ಪ್ರಚಾರದ ವೇಳೆಯ ಪತ್ರಿಕಾಗೋಷ್ಠಿಯಲ್ಲಿ ಮನ್ಸೂರ್‌ ಮಾಡಿದ್ದರು ಎನ್ನಲಾದ ಸ್ತ್ರೀ ವಿರೋಧಿ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಅವರು ತಾನು ಮತ್ತು ತ್ರಿಷಾ ಚಿತ್ರದ ಭಾಗವಾಗಿದ್ದರೂ, ತ್ರಿಷಾ ಅವರೊಂದಿಗೆ ತೆರೆ ಹಂಚಿಕೊಳ್ಳಲು ತನಗೆ ಸಾಧ್ಯವಾಗಲಿಲ್ಲ. ಅವರ ಜೊತೆಗಿನ ಯಾವುದೇ "ಬೆಡ್‌ರೂಂ ದೃಶ್ಯಗಳು" ಚಿತ್ರದಲ್ಲಿಲ್ಲ ಎಂದಿದ್ದರು ಎನ್ನಲಾಗಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ನಟಿ ತ್ರಿಷಾ ಮಾತ್ರವಲ್ಲದೆ ಚಿರಂಜೀವಿ, ಖುಷ್ಬೂ ಸುಂದರ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಹೇಳಿಕೆಯನ್ನು ಖಂಡಿಸಿದ್ದರು.

ಹೇಳಿಕೆ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಖಾನ್ ವಿರುದ್ಧ ಎಫ್ಐಆರ್ ಹೂಡಿದ್ದರು. ನಂತರ ತ್ರಿಷಾ ಅವರ ಬಹಿರಂಗ ಕ್ಷಮೆ ಯಾಚಿಸಿದ್ದ ಖಾನ್‌ ಇದೀಗ ಮಾನನಷ್ಟ ಮೊಕದ್ದಮೆಯೊಂದಿಗೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com