ಲಾಭದಾಯಕವಲ್ಲದ ವೃತ್ತಿ ಜೀವನ ಒಡ್ಡಿದ್ದ ಆರಂಭಿಕ ಸವಾಲುಗಳನ್ನು ನೆನೆದ ನ್ಯಾ. ಶಿವಶಂಕರೇಗೌಡ

ಕರ್ನಾಟಕ ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಆಯೋಜಿಸಲಾಗಿದ್ದ ನೂತನವಾಗಿ ನೇಮಕವಾದ ಹೆಚ್ಚುವರಿ ನ್ಯಾಯಮೂರ್ತಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
Justice T G Shivashankare Gowda
Justice T G Shivashankare Gowda

ಕರ್ನಾಟಕ ಹೈಕೋರ್ಟ್‌ಗೆ ನೂತನವಾಗಿ ನೇಮಕವಾದ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಅಭಿನಂದಿಸಿ ಸ್ವಾಗತಿಸಲು ರಾಜ್ಯ ವಕೀಲರ ಪರಿಷತ್‌ ಬುಧವಾರ ಆಯೋಜಿಸಿದ್ದ ಸ್ವಾಗತ ಸಮಾರಂಭ ನೂತನ ನ್ಯಾಯಮೂರ್ತಿಗಳು ತಾವು ಸಾಗಿಬಂದ ಹಾದಿಯನ್ನು ನೆನೆಯಲು ವೇದಿಕೆಯಾಯಿತು. ನೂತನವಾಗಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಟಿ ಜಿ ಶಿವಶಂಕರೇಗೌಡ, ಅನಿಲ್‌ ಕಟ್ಟಿ, ಸಿ ಎಂ ಜೋಶಿ, ಜಿ ಬಸವರಾಜ, ಉಮೇಶ್‌ ಮಂಜುನಾಥ್‌ ಭಟ್‌ ಅಡಿಗ ಅವರು ಸ್ವಾಗತ ಸಮಾರಂಭದಲ್ಲಿ ತಮ್ಮ ವೃತ್ತಿ ಬದುಕು ನೆನೆದರು.

ಈ ವೇಳೆ ನ್ಯಾ. ಶಿವಶಂಕರೇಗೌಡರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಎದುರಿಸಿದ ಸವಾಲುಗಳು, ಸಾಗಿ ಬಂದ ಹಾದಿಯನ್ನು ನೆನೆದದ್ದು ಸಮಾರಂಭದಲ್ಲಿ ಹಾಜರಿದ್ದ ನ್ಯಾಯಮೂರ್ತಿಗಳು ಹಾಗೂ ವಕೀಲ ಸಮುದಾಯದಲ್ಲಿ ವಿಶೇಷ ಆಸಕ್ತಿಗೆ ಕಾರಣವಾಯಿತು.

“ಅನಕ್ಷರಸ್ಥ ಕೃಷಿಕನ ಮಗನಾಗಿ, ಕಾವೇರಿ ನದಿಯ ತಟದಲ್ಲಿರುವ ತಲಕಾಡು ಗ್ರಾಮದ (ಟಿ ನರಸೀಪುರ ತಾಲ್ಲೂಕು) ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಎಲ್ಲಾ ಅಡೆತಡೆಗಳನ್ನು ಮೀರಿ ಈ ಮಟ್ಟಕ್ಕೆ ಏರುವುದು ಅತ್ಯಂತ ಕಠಿಣ ಹಾದಿಯಾಗಿತ್ತು. ಶ್ರದ್ಧೆ ಮತ್ತು ಎಲ್ಲರ ಸಹಕಾರ ಮತ್ತು ಬೆಂಬಲದಿಂದ ಇದು ಸಾಧ್ಯವಾಗಿದೆ. ವಿಶೇಷವಾಗಿ ನನ್ನ ತಂದೆ ಗಿರಿಗೌಡ ಮತ್ತು ತಾಯಿ ಭಾಗೀರಥಮ್ಮನವರು ನನ್ನ ವ್ಯಕ್ತಿತ್ವ ರೂಪಿಸಲು ಅಪಾರವಾಗಿ ಶ್ರಮಿಸಿದ್ದಾರೆ” ಎಂದು ಶಿವಶಂಕರೇಗೌಡ ವಿವರಿಸಿದರು.

“ವಕೀಲಿಕೆ ವೃತ್ತಿ ಲಾಭದಾಯಕವಲ್ಲ. 1989ನೇ ಇಸವಿಯಲ್ಲಿ ನಾನು ವಕೀಲಿಕೆ ಆರಂಭಿಸಿದಾಗ ಕಾಯಂ ಆಗಿ ನಿರ್ದಿಷ್ಟ ಆದಾಯವಿಲ್ಲದ ಕಾರಣ ಹಲವು ಪೋಷಕರು ನನಗೆ ಹೆಣ್ಣು ನೀಡಲು ಹಿಂದೇಟು ಹಾಕಿದ್ದರು. ಆದರೆ, ನಮ್ಮ ಅತ್ತೆ ಶಾರದಮ್ಮ ಅವರು ತಮ್ಮ ಪುತ್ರಿಯನ್ನು ಕೊಟ್ಟು ವಿವಾಹ ಮಾಡಿಕೊಡುವ ಮೂಲಕ ಉದಾರತೆ ತೋರಿದರು” ಎಂದು ಅವರು ವಕೀಲಿಕೆ ವೃತ್ತಿಯ ಆರಂಭಿಕ ದಿನಗಳಲ್ಲಿ ತಾವು ಎದುರಿಸಿದ ಸವಾಲುಗಳಿಗೆ ಕನ್ನಡಿ ಹಿಡಿದರು.

“ಪತ್ನಿ ಎಂ ಎಸ್‌ ವೇದಾವತಿ ಅವರು ನಾನು ನ್ಯಾಯಾಂಗ ಸೇವೆಗೆ ಅಡಿ ಇಡಲು ಪ್ರೇರೇಪಿಸಿದರು. ತಮ್ಮ ವೃತ್ತಿ ಬದುಕನ್ನು ಮೊಟಕುಗೊಳಿಸಿ, ಕುಟುಂಬದ ಹೊಣೆ ಹೊರುವ ಮೂಲಕ ನೆರವಾದರು” ಎಂದು ನೆನೆಪಿಸಿಕೊಂಡರು.

Also Read
ಕರ್ನಾಟಕ ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ರಾಜ್ಯಪಾಲರಿಂದ ಪ್ರಮಾಣ ವಚನ ಬೋಧನೆ

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ, ಹಲವು ನ್ಯಾಯಮೂರ್ತಿಗಳು, ಹಿರಿ-ಕಿರಿಯ ವಕೀಲರು ಭಾಗವಹಿಸಿದ್ದರು.

Kannada Bar & Bench
kannada.barandbench.com