[ಮರಾಠಾ ಮೀಸಲಾತಿ ಪ್ರಕರಣ] ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಯಲಿದೆ? ಸುಪ್ರೀಂ ಕೋರ್ಟ್‌ ಪ್ರಶ್ನೆ

“ಶೇ. 50 ಮೀಸಲಾತಿ ಅಥವಾ ಮಿತಿ ನಿಗದಿಗೊಳಿಸದೇ ಇದ್ದರೆ ನೀವು ಸಲಹೆ ನೀಡಿದಂತೆ ಸಮಾನತೆ ತತ್ವ ಸಾಧಿಸಲಾಗುತ್ತದೆಯೇ? ಅಂತಿಮವಾಗಿ ನಾವು ಆ ಬಗ್ಗೆ ಚರ್ಚಿಸಬೇಕು… ಈ ಬಗ್ಗೆ ನಿಮ್ಮ ಆಲೋಚನೆ ಏನು?” ಎಂದು ರೋಹಟ್ಗಿ ಅವರನ್ನು ನ್ಯಾಯಾಲಯ ಪ್ರಶ್ನಿಸಿತು.
Supreme Court
Supreme Court

ಇಂದಿರಾ ಸಾಹ್ನಿ ತೀರ್ಪಿನ ಮೂಲಕ ಹಿಂದುಳಿದ ವರ್ಗಗಳಿಗೆ ಶೇ. 50 ಮೀಸಲಾತಿ ಮಿತಿ ನಿಗದಿಗೊಳಿಸಿರುವುದನ್ನು ಪುನರ್‌ ಪರಿಶೀಲಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರ ವಾದದ ಮಧ್ಯೆ ಎಲ್ಲಿಯವರೆಗೆ ಮೀಸಲಾತಿ ಯೋಜನೆ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್‌ ಗಂಭೀರವಾಗಿ ಪ್ರಶ್ನಿಸಿತು.

ಕಳೆದ ಸೋಮವಾರದಿಂದಲೂ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಲ್‌ ನಾಗೇಶ್ವರ್‌ ರಾವ್‌, ಎಸ್‌ ಅಬ್ದುಲ್‌ ನಜೀರ್‌, ಹೇಮಂತ್‌ ಗುಪ್ತಾ ಮತ್ತು ರವೀಂದ್ರ ಭಟ್‌ ಅವರಿದ್ದ ಸಾಂವಿಧಾನಿಕ ಪೀಠವು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಇಂದಿರಾ ಸಾಹ್ನಿ ವರ್ಸಸ್‌ ಭಾರತ ಸರ್ಕಾರ ಪ್ರಕರಣವನ್ನು ಪುನರ್‌ ಪರಿಶೀಲಿಸಬೇಕೆ ಎಂಬ ಪ್ರಶ್ನೆಯೂ ಸೇರಿದೆ.

ಇಂದಿರಾ ಸಾಹ್ನಿ ಪ್ರಕರಣದಲ್ಲಿ ನಿಗದಿಗೊಳಿಸಲಾಗಿದ್ದ ಶೇ. 50 ಮೀಸಲಾತಿಯು ಆಗಾಗ್ಗೆ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಬದಲಾವಣೆಗೆ ಒಳಪಟ್ಟಿದೆ ಮತ್ತು ಪ್ರಕರಣದ ಕಾನೂನುಗಳು ಮತ್ತು ಮೀಸಲಾತಿ ಕಲ್ಪಿಸಬಹುದಾದ ಮಿತಿಯನ್ನು ಪುನರ್‌ ಪರಿಶೀಲಿಸಲು ಸರ್ಕಾರವು ಅನುಮತಿಸಬೇಕು ಎಂದು ರೋಹಟ್ಗಿ ಹೇಳಿದರು.

ಈ ವೇಳೆ ನ್ಯಾಯಾಲಯವು, “ನೀವು ಸಲಹೆ ನೀಡಿದಂತೆ ಶೇ. 50 ಮಿತಿ ಇಲ್ಲದೇ ಇದ್ದರೆ, ಸಮಾನತೆ ತತ್ವಕ್ಕೆ ಅರ್ಥವೆಲ್ಲಿದೇ? ಅಂತಿಮವಾಗಿ ನಾವು ಅದರ ಬಗ್ಗೆ ಚರ್ಚಿಸಬೇಕು… ಇದರ ಬಗ್ಗೆ ನಿಮ್ಮ ಚಿಂತನೆ ಏನು? 14ನೇ ವಿಧಿಯ ಕತೆಯೇನು? ಇದರಿಂದ ಉಂಟಾಗುವ ಅಸಮಾನತೆಯ ಪಾಡೇನು? ಎಷ್ಟು ತಲೆಮಾರುಗಳವರೆಗೆ ಇದು ಮುಂದುವರೆಯಲಿದೆ…?” ಎಂದು ಪೀಠ ಗಂಭೀರವಾಗಿ ಪ್ರಶ್ನಿಸಿತು.

ಇದಕ್ಕೂ ಮುನ್ನ ನ್ಯಾಯಾಲಯವು “ಸ್ವಾತಂತ್ರ್ಯದ ನಂತರ 70 ವರ್ಷಗಳೇ ಕಳೆದಿವೆ. ಸರ್ಕಾರಗಳು ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿವೆ… ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳೋಣವೇ, ಯಾವುದೇ ಹಿಂದುಳಿದ ವರ್ಗ ಮುಂದುವರಿದಿಲ್ಲ ಎನ್ನೋಣವೇ?” ಎಂದು ಪ್ರಶ್ನಿಸಿತು.

“ಹೌದು, ನಾವು ಅಭಿವೃದ್ಧಿ ಹೊಂದಿದ್ದೇವೆ. ಆದರೆ, ಹಿಂದುಳಿದ ವರ್ಗಗಳು ಶೇ. 50 ರಿಂದ 20ಕ್ಕೆ ಇಳಿಕೆಯಾಗಿಲ್ಲ. ಈ ದೇಶದಲ್ಲಿ ಹಸಿವಿನಿಂದ ಸಾವುಗಳಾಗುತ್ತಿವೆ. ಇಂದಿರಾ ಸಾಹ್ನಿ ತೀರ್ಪು ಸಂಪೂರ್ಣವಾಗಿ ತಪ್ಪು, ಅದನ್ನು ಕಸದ ಬುಟ್ಟಿಗೆ ಎಸೆಯಿರಿ ಎಂದು ನಾನು ಹೇಳುತ್ತಿಲ್ಲ. ಮೂವತ್ತು ವರ್ಷಗಳು ಪೂರ್ಣಗೊಡಿದ್ದು, ಕಾನೂನು ಬದಲಾಗಿದೆ, ಜನಸಂಖ್ಯೆ ಹೆಚ್ಚಳವಾಗಿದೆ, ಹಿಂದುಳಿದವರ ಸಂಖ್ಯೆಯೂ ಹೆಚ್ಚಾಗಿರಬಹುದು ಎಂಬ ವಿಚಾರಗಳನ್ನು ನಾನು ಎತ್ತುತ್ತಿದ್ದೇನೆ” ಎಂದು ರೋಹಟ್ಗಿ ಪ್ರತಿಕ್ರಿಯಿಸಿದರು.

ಜಾರಿಯಲ್ಲಿರುವ ಮೀಸಲಾತಿ ಯೋಜನೆಯ ಹೊರತಾಗಿಯೂ, ದೇಶದಲ್ಲಿ ಅಸಮಾನತೆ ಮತ್ತು ಹಿಂದುಳಿದಿರುವಿಕೆಯ ನಿರಂತರತೆಯ ಬಗ್ಗೆ ಅವರು ತಮ್ಮ ವಾದ ಮಂಡಿಸಿದರು. “ಎಪ್ಪತ್ತು ವರ್ಷಗಳಾದರೂ ನಾವು ಆದರ್ಶಮಯವಾಗಿ ಇರಿಸಿಕೊಂಡ ಗುರಿಯನ್ನು ತಲುಪಿಲ್ಲ. ಇದಕ್ಕಾಗಿಯೇ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ” ಎಂದ ರೋಹಟ್ಗಿ ಅವರು ಇಂದಿರಾ ಸಾಹ್ನಿ ತೀರ್ಪಿನಲ್ಲಿ ಸಂವಿಧಾನದ 15 ಮತ್ತು 16ನೇ ವಿಧಿಗೆ ತರಲಾಗಿರುವ ತಿದ್ದುಪಡಿಗಳತ್ತ ಬೆರಳು ಮಾಡಿದರು.

“ಕಳೆದ 30-40 ವರ್ಷಗಳಲ್ಲಿ ಈ ಎಲ್ಲ ನಿಬಂಧನೆಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ ಎಂಬುದು ನಾವು ಹಿಂದುಳಿದವರಿಗೆ, ಎಸ್‌ಸಿ/ಎಸ್‌ಟಿಗೆ ಅಗತ್ಯವಿರುವ ವಿಮೋಚನೆಯನ್ನು ಕಲ್ಪಿಸುವಲ್ಲಾಗಲಿ, ಉಳ್ಳವರ ಹೋಲಿಕೆಯಲ್ಲಿ ಏನೂ ಇಲ್ಲದವರನ್ನು ವಿಮೋಚನೆಗೊಳಿಸುವ ಸಮೀಪವಾಗಲಿ ತಲುಪಿಲ್ಲ ಎನ್ನುವುದನ್ನು ಸೂಚಿಸುತ್ತದೆ” ಎಂದು ಹೇಳಿದರು.

ಜನಸಂಖ್ಯೆಯು ಹೆಚ್ಚಳವಾಗಿರುವುದರಿಂದ ಹಿಂದುಳಿದ ವರ್ಗಗಳ ಜನಸಂಖ್ಯೆಯೂ ಹೆಚ್ಚಾಗಿರಬಹುದು ಎಂದು ರೋಹಟ್ಗಿ ಹೇಳಿದರು. “ಜನಸಂಖ್ಯೆಯು 35 ರಿಂದ 135 ಕೋಟಿಗೆ ಹೆಚ್ಚಳಗೊಂಡಿದೆ. (ಏನೂ ಇಲ್ಲದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಇನ್ನೂ ಬಗೆಹರಿಸಲಾಗಿಲ್ಲ) ಹಾಗಾಗಿ ಯಾವುದೇ ನ್ಯಾಯಾಲಯವು ಶೇ. 50 ಮಿತಿಯಾಗಬಾರದು ಎಂದು ಹೇಳಬಹುದು ಎಂದು ನಾನು ಖಚಿತವಾಗಿ ಹೇಳಬಲ್ಲೆ. ನ್ಯಾಯಮೂರ್ತಿ ಫಜಲ್‌ ಅಲಿ ಅವರು ಹೇಳಿದಂತೆ… ಶೇ. 50 ಮೀಸಲಾತಿಯು ದೀವಿಗೆ ತತ್ವವಾಗದು. ಏಕೆಂದರೆ ಕಳೆದ 40 ವರ್ಷಗಳಿಂದ ನಮ್ಮ ಗುರಿ ತಲುಪುವಲ್ಲಿ ನಾವು ದಯನೀವಾಗಿ ಸೋತಿದ್ದೇವೆ” ಎಂದು ರೋಹಟ್ಗಿ ವಾದಿಸಿದರು.

ಹೀಗಾಗಿ, ಮೀಸಲಾತಿ ನಿಗದಿಗೊಳಿಸುವ ವಿಚಾರವನ್ನು ನ್ಯಾಯಾಲಯಗಳು ರಾಜ್ಯಗಳಿಗೆ ಬಿಡಬೇಕು. ಸಂವಿಧಾನವೂ ಅದನ್ನು ರಾಜ್ಯಗಳಿಗೆ ಬಿಟ್ಟುಕೊಟ್ಟಿದೆ. ಆದ್ದರಿಂದ ನ್ಯಾಯಾಲಯಗಳು ಮೀಸಲಾತಿ ನೀಡುವುದಕ್ಕೆ ಮಿತಿ ನಿಗದಿಗೊಳಿಸಬಾರದು ಎಂದರು.

ಮೀಸಲಾತಿಯನ್ನು ಹೇಗೆ ನಿಗದಿಗೊಳಿಸಬೇಕು ಎಂಬುದನ್ನು ಪರಿಶೀಲಿಸಲು ರಾಜ್ಯಗಳು ಸಮರ್ಥವಾಗಿವೆ ಎಂದ ರೋಹಟ್ಗಿ ಅವರು ಉತ್ತರಾಖಂಡ ಹೈಕೋರ್ಟ್‌ ತೀರ್ಪನ್ನೂ ಉಲ್ಲೇಖಿಸಿದರು. “ಉತ್ತರಾಖಂಡ ರಾಜ್ಯವು ಶೇ. 50 ಮೀಸಲಾತಿ ನಿಯಮಕ್ಕೆ ಸಮೀಪದಲ್ಲಿ ಇಲ್ಲ. ಮತ್ತೊಂದೆಡೆ ಹಲವು ರಾಜ್ಯಗಳಲ್ಲಿ ಶೇ. 50 ರಷ್ಟು ಮೀಸಲಾತಿ ಮೀರಿದೆ. ಉತ್ತರಾಖಂಡ ಇದಕ್ಕೆ ಅಪವಾದ, ಅವರಿಗೆ ಮೀಸಲಾತಿ ಬೇಕಿಲ್ಲ. ಏಕೆಂದರೆ ಅಲ್ಲಿ ಯಾರೂ ಹಿಂದುಳಿದವರು ಇಲ್ಲ. ಇತರೆ ರಾಜ್ಯಗಳಲ್ಲಿ ಕೆಲವು ಕಡೆ ಶೇ. 50, ಮತ್ತೆ ಕೆಲವು ಕಡೆ ಶೇ. 60 ಇದೆ” ಎಂದು ಅವರು ವಿವರಿಸಿದರು.

ಸಾಂವಿಧಾನಿಕ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲುಎಸ್‌) ಶೇ. 10 ಮೀಸಲಾತಿ ಕಲ್ಪಿಸಿದ ಕೇಂದ್ರ ಸರ್ಕಾರದ ನಿರ್ಣಯವು ಮೀಸಲಾತಿಯ ಶೇ. 50ರ ಮಿತಿಯನ್ನು ಉಲ್ಲಂಘಿಸಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಹಲವು ವಕೀಲರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅದು ಶೇ. 50 ಮಿತಿಗೆ ಒಳಪಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Also Read
ಮರಾಠಾ ಮೀಸಲಾತಿ ಪ್ರಕರಣದಲ್ಲಿ ಎದ್ದಿರುವ ಪ್ರಮುಖ ಕಾನೂನು ಪ್ರಶ್ನೆಗಳ ಬಗ್ಗೆ ಬೆಳಕು ಚೆಲ್ಲಿದ ಎಜಿ ವೇಣುಗೋಪಾಲ್

ಸಂವಿಧಾನಕ್ಕೆ 103ನೇ ತಿದ್ದುಪಡಿಯನ್ನು ತರುವ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ (ಇಡಬ್ಲ್ಯುಎಸ್‌೦ ಮೀಸಲಾತಿಯು‌ ಜಾರಿ ಮಾಡಿರುವ ಕ್ರಮವೇ ಸಾಕು ಶೇ. 50 ಮೀಸಲಾತಿ ಮಿತಿಯನ್ನು ಸಂಸತ್ತು ತಳ್ಳಿಹಾಕಿದೆ ಎನ್ನುವುದನ್ನು ನಿರೂಪಿಸಲು ಎಂದು ರೋಹಟ್ಗಿ ವಾದಿಸಿದರು. “ಮೀಸಲಾತಿ ಮಿತಿಯು ಶೇ. 50 ಎಂದು ಸಂಸತ್ತಿಗೆ ಗೊತ್ತಿದ್ದೂ ಇಡಬ್ಲ್ಯುಎಸ್‌ ವರ್ಗಕ್ಕೆ ಶೇ. 10 ಮೀಸಲಾತಿ ನೀಡಿದೆ. ಆದರೆ, ಶೇ. 50ರಷ್ಟು ಮೀಸಲಾತಿ ಮಿತಿ ಮೀರುವಂತಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿಲ್ಲ… ಶೇ. 50 ಮಿತಿ ಮೀರುವುದಕ್ಕೆ ಸಂವಿಧಾನಕ್ಕೆ ತರಲಾದ 103ನೇ ತಿದ್ದುಪಡಿ ಸ್ಪಷ್ಟವಾಗಿದೆ” ಎಂದು ರೋಹಟ್ಗಿ ಹೇಳಿದ್ದಾರೆ. ಹೀಗಾಗಿ ಇಂದಿರಾ ಸಾಹ್ನಿ ತೀರ್ಪನ್ನು ಮರುಪರಿಶೀಲಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

“ಗೌರವಾನ್ವಿತ ನ್ಯಾಯಮೂರ್ತಿಗಳು ಇಂದಿರಾ ಸಾಹ್ನಿ ಪ್ರಕರಣವನ್ನು ಪುನರ್‌ ಪರಿಶೀಲಿಸಬೇಕಿದೆ. ನ್ಯಾಯಾಲಯವು ಮೀಸಲಾತಿ ಮಿತಿಯನ್ನು ನಿಗದಿಗೊಳಿಸಬಹುದೇ, ಟಿಎಂಎ ಪೈ ಪ್ರಕರಣದ ನಂತರ, ಈ ನಲವತ್ತು ವರ್ಷಗಳ ಬಳಿಕ ಹಾಗೂ 103ನೇ ತಿದ್ದುಪಡಿಯ ನಂತರ ಇಂದಿರಾ ಸಾಹ್ನಿ ತೀರ್ಪು ಸಿಂಧುವೇ? ಹಲವು ರಾಜ್ಯಗಳು ಶೇ. 50 ಮೀಸಲಾತಿ ಮಿತಿಯನ್ನು ಮೀರುತ್ತಿರುವಾಗ ಇದು ಪ್ರಮುಖ ವಿಷಯವಲ್ಲ ಎನ್ನಲು ಸಾಧ್ಯವೇ? ಇದನ್ನು ಮರುಪರಿಶೀಲಿಸುವ ಅಗತ್ಯವಿಲ್ಲವೇ?” ಎಂದು ರೋಹಟ್ಗಿ ಪ್ರಶ್ನಿಸಿದರು.

ಮರಾಠಾ ಮೀಸಲಾತಿ ಬೆಂಬಲಿಸಿರುವ ಗಾಯಕ್ವಾಡ್‌ ಸಮಿತಿ ವರದಿಯ ಅರ್ಹತೆಯ ಕುರಿತು ಹಿರಿಯ ವಕೀಲ ಪಿ ಎಸ್‌ ಪಟ್ವಾಲಿಯಾ ಸೋಮವಾರ ವಾದ ಮುಂದುವರೆಸಲಿದ್ದಾರೆ. ಆ ಬಳಿಕ ಹಿರಿಯ ವಕೀಲ ಕಪಿಲ್‌ ಸಿಬಲ್ ವಾದಿಸಲಿದ್ದಾರೆ.

Kannada Bar & Bench
kannada.barandbench.com