ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಬೇಕು ಎಂದು ಕೋರಿರುವ ಅರ್ಜಿಗಳನ್ನು ವಿರೋಧಿಸಿ ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ [ಹೃಷಿಕೇಶ್ ಸಾಹೂ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಎನ್ಆರ್].
ವಕೀಲ ಎ ಕೆ ಶರ್ಮಾ ಮೂಲಕ ಸಲ್ಲಿಸಿದ ಪ್ರತಿ-ಅಫಿಡವಿಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಬಂಧಗಳಿಗೆ ವಿನಾಯಿತಿ ನೀಡುವ ಅತ್ಯಾಚಾರದ ಕುರಿತಾದ ಭಾರತದ ಕಾನೂನನ್ನು ಸಮರ್ಥಿಸಿದೆ.
ವೈವಾಹಿಕ ಅತ್ಯಾಚಾರದ ಕುರಿತಾದ ವಿಷಯವು ಕಾನೂನಿಗಿಂತಲೂ ಹೆಚ್ಚು ಸಾಮಾಜಿಕ ವ್ಯಾಪ್ತಿಗೆ ಬರುತ್ತದೆ ಎಂದು ಕೇಂದ್ರ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ. ಈ ವಿಚಾರವು ಸಾಮಾನ್ಯವಾಗಿ ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿರುವ ಕೇಂದ್ರವು ಒಂದೊಮ್ಮೆ 'ವೈವಾಹಿಕ ಅತ್ಯಾಚಾರ'ವನ್ನು ಅಪರಾಧ ಎಂದು ಪರಿಗಣಿಸಬೇಕಿದ್ದರೂ, ಹಾಗೆ ಮಾಡುವುದು ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲಿಲ್ಲ ಎಂದು ವಾದಿಸಿದೆ.
"ಎಲ್ಲಾ ಮಧ್ಯಸ್ಥಗಾರರೊಂದಿಗೆ ಸರಿಯಾದ ಸಮಾಲೋಚನೆಯಿಲ್ಲದೆ ಅಥವಾ ಎಲ್ಲಾ ರಾಜ್ಯಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ (ವಿಷಯವನ್ನು) ನಿರ್ಧರಿಸಲಾಗುವುದಿಲ್ಲ... ಆಡುಮಾತಿನಲ್ಲಿ 'ವೈವಾಹಿಕ ಅತ್ಯಾಚಾರ' ಎಂದು ಉಲ್ಲೇಖಿಸಲಾದ ಕ್ರಿಯೆಯು ಕಾನೂನುಬಾಹಿರ ಹಾಗೂ ಅಪರಾಧ ಎಂದು ಗುರುತಿಸಲ್ಪಡಬೇಕು. ಮದುವೆಯ ಮೂಲಕ ಮಹಿಳೆಯ ಸಮ್ಮತಿಯನ್ನು (ಲೈಂಗಿಕತೆಗೆ) ದಮನಮಾಡಲಾಗುವುದಿಲ್ಲ. ಅದರ ಉಲ್ಲಂಘನೆಯು ದಂಡದ ಪರಿಣಾಮಗಳಿಗೆ ಕಾರಣವಾಗಬಹುದು. ಆದಾಗ್ಯೂ, ಮದುವೆಯೊಳಗಿನ ಅಂತಹ ಉಲ್ಲಂಘನೆಗಳ (ಕಾನೂನಾತ್ಮಕ) ಪರಿಣಾಮಗಳು ಅದರ ಹೊರಗಿನ ಉಲ್ಲಂಘನೆಗಳಿಗಿಂತ ಭಿನ್ನವಾಗಿರುತ್ತವೆ" ಎಂದು ಕೇಂದ್ರ ಸರ್ಕಾರವು ಪ್ರತಿಪಾದಿಸಿದೆ.
ಸಮ್ಮತಿಯ ಉಲ್ಲಂಘನೆಯು ಮದುವೆಯ ಒಳಗೆ ನಡೆದಿದೆಯೇ ಅಥವಾ ಹೊರಗೆ ಅಂತಹ ಕೃತ್ಯವು ಸಂಭವಿಸುತ್ತದೆಯೇ ಎಂಬುದರ ಆಧಾರದ ಮೇಲೆ ವಿಭಿನ್ನವಾಗಿ ಶಿಕ್ಷೆ ವಿಧಿಸಬೇಕು ಎಂದು ಸ್ಪಷ್ಟಪಡಿಸಿದೆ.
ವೈವಾಹಿಕ ಸಂಬಂಧದಲ್ಲಿ, ಸಂಗಾತಿಯೊಂದಿಗೆ ಸಮಂಜಸವಾದ ಲೈಂಗಿಕ ಲಭ್ಯತೆಯ ನಿರೀಕ್ಷೆಯು ನಿರಂತರವಾಗಿ ಇರುತ್ತದೆ. ಹಾಗೆಂದು, ಇಂತಹ ನಿರೀಕ್ಷೆಗಳು ಪತಿಗೆ ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಲು ಅರ್ಹತೆ ನೀಡುವುದಿಲ್ಲ ಎಂದು ಕೇಂದ್ರ ತನ್ನ ಅಫಿಡವಿಟ್‌ನಲ್ಲಿ ಖಚಿತಾಗಿ ತಿಳಿಸಿದೆ. ಆದರೆ, ಅಂತಹ ಕೃತ್ಯಕ್ಕಾಗಿ ಅತ್ಯಾಚಾರ-ವಿರೋಧಿ ಕಾನೂನುಗಳ ಅಡಿಯಲ್ಲಿ ಪುರುಷನನ್ನು ಶಿಕ್ಷಿಸುವುದು ವಿಪರೀತವೂ ಹಾಗೂ ಅಸಮಂಜಸವೂ ಅಗುತ್ತದೆ ಎಂದು ಅದು ವಿವರಿಸಿದೆ.
ಇದೇ ವೇಳೆ ಕೇಂದ್ರವು, ವೈವಾಹಿಕ ಚೌಕಟ್ಟಿನೊಳಗೆ ವಿವಾಹಿತ ಮಹಿಳೆಯ ಸಮ್ಮತಿಯನ್ನು ರಕ್ಷಿಸಲು ಸಂಸತ್ತು ಈಗಾಗಲೇ ವಿಭಿನ್ನ ಪರಿಹಾರಗಳನ್ನು ಒದಗಿಸಿದೆ. ಈ ಪರಿಹಾರಗಳಲ್ಲಿ ವಿವಾಹಿತ ಮಹಿಳೆಯರು ವೈವಾಹಿಕ ಸಂಬಂಧದೊಳಗೆ ಎದುರಿಸುವ ಕ್ರೌರ್ಯವನ್ನು ಶಿಕ್ಷಿಸುವ ಕಾನೂನುಗಳನ್ನು (ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಿಭಾಗ 498A), ಮಹಿಳೆಯರ ಘನತೆಗೆ ವಿರುದ್ಧವಾದ ಕೃತ್ಯಗಳನ್ನು ಶಿಕ್ಷಿಸುವ ಕಾನೂನುಗಳು ಮತ್ತು ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯಿದೆ, 2005 ಮುಂತಾದವುಗಳನ್ನು ಹೊಂದಿದೆ ಎಂದು ತಿಳಿಸಿದೆ.
ವಿವಾಹವೆಂಬ ಸಾಮಾಜಿಕ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಯಂತೆ ಪರಿಗಣಿಸುವ ಅರ್ಜಿದಾರರ ವಿಧಾನವನ್ನು ಸಹ ಕೇಂದ್ರವು ಟೀಕಿಸಿತು, ಈ ದೃಷ್ಟಿಕೋನವು ಏಕರೂಪವಾಗಿದೆ ಎಂದು ಅದು ಹೇಳಿದೆ. ವಿವಾಹಿತ ಮಹಿಳೆ ಮತ್ತು ಆಕೆಯ ಗಂಡನ ನಡುವಿನ ಪ್ರಕರಣವನ್ನು ಇತರ ಪ್ರಕರಣಗಳಂತೆ ನಿಖರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳಿದೆ.
ಇದೇ ವೇಳೆ ಕೇಂದ್ರ ಸರ್ಕಾರವು ವಿವಿಧ ಸಂದರ್ಭಗಳಲ್ಲಿ ಲೈಂಗಿಕ ದೌರ್ಜನ್ಯದ ದಂಡದ ಪರಿಣಾಮಗಳನ್ನು ವಿಭಿನ್ನವಾಗಿ ವರ್ಗೀಕರಿಸುವುದು ಶಾಸಕಾಂಗಕ್ಕೆ ಬಿಟ್ಟದ್ದು ಎಂದು ಹೇಳಿದೆ. ಅಸ್ತಿತ್ವದಲ್ಲಿರುವ ಕಾನೂನು ಸಂಗಾತಿಗಳ ನಡುವಿನ ಲೈಂಗಿಕತೆಯು ಒಪ್ಪಿಗೆಯನ್ನು ಕಡೆಗಣಿಸುವುದಿಲ್ಲ, ಆದರೆ ಅದು ಮದುವೆ ವ್ಯಾಪ್ತಿಯೊಳಗೆ ಇದ್ದಾಗ ಅದನ್ನು ವಿಭಿನ್ನವಾಗಿ ಪರಿಗಣಿಸ ಬೇಕಾಗುತ್ತದೆ ಎಂದು ವಾದಿಸಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನೊಳಗೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿದೆ.