ವೈವಾಹಿಕ ಅತ್ಯಾಚಾರ ಅಪರಾಧೀಕರಿಸುವುದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಬುಧವಾರ ಭಿನ್ನ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ ಹರಿ ಶಂಕರ್ ಅವರು ಐಪಿಸಿ ಸೆಕ್ಷನ್ 375ರ ವಿನಾಯಿತಿ 2ಕ್ಕೆ ಸಂಬಂಧಿಸಿದ ಬಹುತೇಕ ಅಂಶಗಳನ್ನು ಒಪ್ಪಲಿಲ್ಲ. ಜೊತೆಗೆ ಅವರು ಪ್ರಕರಣವನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕು ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಕರಣದ ವಿಚಾರಗಳು ಕಾನೂನಿಗೆ ಸಂಬಂಧಿಸಿದ ಮಹತ್ವದ ಪ್ರಶ್ನೆ ಹುಟ್ಟುಹಾಕುತ್ತವೆ. ಇದನ್ನು ಸುಪ್ರೀಂ ಕೋರ್ಟ್ ನಿರ್ಧರಿಸುವ ಅಗತ್ಯವಿದೆ ಎಂದು ಇಬ್ಬರೂ ನ್ಯಾಯಮೂರ್ತಿಗಳು ಹೇಳಿದರು.
ಐಪಿಸಿಯ ಸೆಕ್ಷನ್ 375ರ ಎರಡನೇ ವಿನಾಯಿತಿ, ಸೆಕ್ಷನ್ 376 ಬಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 198 ಬಿ ಯು ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಪತಿ ಅಥವಾ ಬೇರ್ಪಟ್ಟ ಪತಿ ಲೈಂಗಿಕ ಸಂಭೋಗ ನಡೆಸುವುದಕ್ಕೆ ಸಂಬಂಧಿಸಿರುವುದರಿಂದ ಸಂವಿಧಾನದ 14, 15, 19 (1) (ಎ) ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಹೀಗಾಗಿ ತಡೆಹಿಡಿಯಲು ಅವು ಅರ್ಹವಾಗಿವೆ ಎಂದು ಸುಮಾರು 200 ಪುಟಗಳ ತೀರ್ಪಿನಲ್ಲಿ, ನ್ಯಾಯಮೂರ್ತಿ ಶಕ್ಧರ್ ತಿಳಿಸಿದರು.
ಆದರೆ ಇದಕ್ಕೂ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ 200 ಕ್ಕೂ ಹೆಚ್ಚು ಪುಟಗಳಿರುವ ನ್ಯಾ. ಹರಿ ಶಂಕರ್ ಅವರ ತೀರ್ಪು ಕಾನೂನನ್ನು ಪ್ರಶ್ನಿಸಲು ಅರ್ಜಿಗಳು ವಿಫಲಾವಾಗಿರುವುದರಿಂದ ಅವು ವಜಾಗೊಳ್ಳಲು ಅರ್ಹ ಎಂದಿತು.