[ವೈವಾಹಿಕ ಅತ್ಯಾಚಾರ] ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ಸುಪ್ರೀಂ

ಮೇ 29 ರಂದು ಆರಂಭವಾಗಲಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್.
Supreme Court
Supreme Court

ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪತಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ನೀಡಿದೆ. [ಹೃಷಿಕೇಶ್ ಸಾಹೂ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಆದರೆ ಪ್ರಕರಣದ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ನಿರಾಕರಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ದವೆ, “ಮೇ 29ರಂದು ವಿಚಾರಣೆ ಆರಂಭವಾಗಲಿದ್ದು, ವಿಚಾರಣೆಗೆ ತಡೆ ನೀಡುವಂತೆ ಪೀಠವನ್ನು ಒತ್ತಾಯಿಸಿದರು. ಆದರೆ, “ಈಗ ನೋಟಿಸ್‌ ನೀಡುತ್ತೇವೆ. ನಾವು ಈ ಪ್ರಕರಣ ಆಲಿಸುತ್ತೇವೆ ಎಂದು ನೀವು ಅವರಿಗೆ ಹೇಳಬಹುದು” ಎಂದ ಸಿಜೆಐ ರಮಣ ಅವರು ಹೇಳುವ ಮೂಲಕ ಪೀಠ ಅದಕ್ಕೆ ಹಿಂದೇಟು ಹಾಕಿತು.

Also Read
ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯವೂ ಅತ್ಯಾಚಾರ: ಕರ್ನಾಟಕ ಹೈಕೋರ್ಟ್‌

ಜುಲೈ ಮೂರನೇ ವಾರಕ್ಕೆ ಪ್ರಕರಣ ಪಟ್ಟಿ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಕೇವಿಯಟ್‌ ಸಲ್ಲಿಸಿದ್ದ ಪತ್ನಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ವಾದ ಮಂಡಿಸಿದರು.

ಪತ್ನಿ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ಗುಲಾಮಳ ರೀತಿ ಬಳಸಿಕೊಂಡಿದ್ದ ಆರೋಪದ ಮೇಲೆ ಐಪಿಸಿ ಸೆಕ್ಷನ್ 376ರ ಅಡಿ ಹೂಡಿದ್ದ ಪ್ರಕರಣ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ಮಾರ್ಚ್ 23ರಂದು ನಿರಾಕರಿಸಿತ್ತು.

“ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯದ ಕ್ರೂರ ಕೃತ್ಯವನ್ನು ಅತ್ಯಾಚಾರ ಎಂದೇ ಕರೆಯಲಾಗುತ್ತದೆ. ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯವು ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಂಡಂದಿರ ಇಂತಹ ಕೃತ್ಯಗಳು ಪತ್ನಿಯರ ಆತ್ಮದಲ್ಲಿ ಮಾಸದ ನೋವುಗಳನ್ನು ಉಳಿಸುತ್ತವೆ” ಎಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿತ್ತು.

Related Stories

No stories found.
Kannada Bar & Bench
kannada.barandbench.com