ವೈವಾಹಿಕ ಅತ್ಯಾಚಾರ: ಪತಿಯ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

ಪತಿ ವಿರುದ್ಧ ಹೆಚ್ಚುವರಿ ನಗರ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಫ್ಐಆರ್‌ನಿಂದ ಉಂಟಾಗುವ ಪ್ರಕ್ರಿಯೆಗಳಿಗೆ ಕೂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ತಡೆ ನೀಡಿತು.
Marital Rape
Marital Rape

ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಲೈಂಗಿಕ ಗುಲಾಮಳನ್ನಾಗಿ ಬಳಸುತ್ತಿದ್ದ ಆರೋಪಿಯೊಬ್ಬನ ವಿರುದ್ಧ ಐಪಿಸಿ ಸೆಕ್ಷನ್‌ 376ರ ಅಡಿ ಹೂಡಿದ್ದ ಅತ್ಯಾಚಾರ ಆರೋಪ ರದ್ದುಗೊಳಿಸಲು ನಿರಾಕರಿಸಿ ಕರ್ನಾಟಕ ಹೈಕೋರ್ಟ್‌ ಮಾರ್ಚ್ 23ರಂದು ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ [ಹೃಷಿಕೇಶ್‌ ಸಾಹೂ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಪತಿ ವಿರುದ್ಧ ಹೆಚ್ಚುವರಿ ನಗರ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಫ್‌ಐಆರ್‌ನಿಂದ ಉಂಟಾಗುವ ಪ್ರಕ್ರಿಯೆಗಳಿಗೆ ಕೂಡ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರಿದ್ದ ಪೀಠ ತಡೆ ನೀಡಿತು. ಒಂದು ವಾರದ ಬಳಿಕ ತೀರ್ಪಿನ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯದ ಕ್ರೂರ ಕೃತ್ಯವನ್ನು ಅತ್ಯಾಚಾರ ಎಂದೇ ಕರೆಯಲಾಗುತ್ತದೆ. ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯವು ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಂಡಂದಿರ ಇಂತಹ ಕೃತ್ಯಗಳು ಪತ್ನಿಯರ ಆತ್ಮದಲ್ಲಿ ಮಾಸದ ನೋವುಗಳನ್ನು ಉಳಿಸುತ್ತವೆ” ಎಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿತ್ತು.

ಯುಗಯುಗಗಳಿಂದ ಪತಿಯ ವೇಷಧಾರಿಯಾದ ಪುರುಷ ಪತ್ನಿಯನ್ನು ತನ್ನ ಚರಾಸ್ತಿಯನ್ನಾಗಿ ಬಳಸಿದ್ದಾನೆ. ತನ್ನ ಹೆಂಡತಿ, ಆಕೆಯ ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಆತನಿಗೆ ಅಧಿಕಾರವಿದೆ ಎಂಬ ಈ ಹಳೆಯ ಕಾಲದ ಯೋಚನೆ ಮತ್ತು ಸಂಪ್ರದಾಯವನ್ನು ಮುರಿಯಬೇಕಿದೆ ಎಂದು ಪೀಠ ತಿಳಿಸಿತ್ತು. ತೀರ್ಪನ್ನು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಪ್ರಕರಣದ ಹಿನ್ನೆಲೆ

ವಿವಾಹದ ನಂತರ ಕೆಲವು ವರ್ಷ ಒಟ್ಟಾಗಿ ಜೀವನ ನಡೆಸಿದ್ದ‌ ದಂಪತಿಯ ಬದುಕಿನಲ್ಲಿ ಬಿರುಕು ಮೂಡಿತ್ತು. ತನಗೆ ಮತ್ತು ಮಗುವಿಗೆ ಪತಿಯು ಹಲವು ಬಾರಿ ಮಾನಸಿಕ ಮತ್ತು ದೈಹಿಕ ತೊಂದರೆ ನೀಡಿದ್ದಾರೆ ಎಂದು ಪತ್ನಿಯು ಪತಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506 (ಕ್ರಿಮಿನಲ್‌ ಬೆದರಿಕೆ) 498ಎ (ಪತ್ನಿಗೆ ಹಿಂಸೆ) 323 (ಸ್ವಯಂಪ್ರೇರಿತವಾಗಿ ನೋವು ನೀಡುವುದು) 377 (ಅನೈಸರ್ಗಿಕ ಅಪರಾಧಗಳು) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್‌ 10 (ಲೈಂಗಿಕ ದೌರ್ಜನ್ಯ) ಪ್ರಕರಣ ದಾಖಲಿಸಿದ್ದರು. ವಿಶೇಷ ನ್ಯಾಯಾಲಯವು ಪತಿಯ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 (ಅತ್ಯಾಚಾರ), 498ಎ ಮತ್ತು 506 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್‌ 5(ಎಂ) ಮತ್ತು (ಐ) ಜೊತೆಗೆ ಸೆಕ್ಷನ್‌ 6 ಅಡಿ ಆರೋಪ ನಿಗದಿ ಮಾಡಿತ್ತು.

“ಮದುವೆಯದ ಮೊದಲ ದಿನದಿಂದಲೂ ಪತಿಗೆ ನಾನು ಲೈಂಗಿಕ ಗುಲಾಮಗಳಾಗಿದ್ದೇನೆ. ಲೈಂಗಿಕ ಸಂಬಂಧಿತ ಸಿನಿಮಾಗಳನ್ನು ವೀಕ್ಷಿಸುವಂತೆ ಮಾಡಿ ಅಸಹಜವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಪತಿ ಒತ್ತಾಯ ಮಾಡಿದ್ದಾನೆ. ಗರ್ಭಿಣಿಯಾಗಿದ್ದಾಗ ಮತ್ತು ಗರ್ಭಪಾತವಾದ ಸಂದರ್ಭದಲ್ಲೂ ಪತಿ ಸಂಭೋಗ ನಡೆಸುವುದನ್ನು ನಿಲ್ಲಿಸಿರಲಿಲ್ಲ” ಎಂದು ಪತ್ನಿ ದೂರಿದ್ದರು.

“ಪತಿ ಅಮಾನುಷನಾಗಿ ನಡೆದುಕೊಂಡಿದ್ದು, ಪುತ್ರಿಯ ಮುಂದೆಯೇ ಅನೈಸರ್ಗಿಕ ಸಂಭೋಗದಲ್ಲಿ ತೊಡಗುವಂತೆ ಮಾಡುತ್ತಿದ್ದ. ಪುತ್ರಿಯ ಮೇಲೂ ಲೈಂಗಿಕ ದೌರ್ಜನ್ಯವೆಸಗಿ ಆಕೆಯ ಎದುರೇ ನನ್ನ‌ ಜೊತೆ ಸಂಭೋಗ ನಡೆಸುತ್ತಿದ್ದ. ಜಗತ್ತಿನಲ್ಲಿ ಯಾವುದೇ ಮಹಿಳೆ ವಿವರಿಸಲಾಗದ ರೀತಿಯಲ್ಲಿ ಪತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪುತ್ರಿಯನ್ನು ಮುಂಚಿತವಾಗಿ ಶಾಲೆಯಿಂದ ಕರೆತಂದು ಆಕೆಯ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ರೀತಿಯ ಚಿತ್ರ ಹಿಂಸೆ ಯಾವುದೇ ತಾಯಿ ಮತ್ತು ಮಗಳಿಗೆ ಬೇಡ” ಎಂದು ದೂರಿನಲ್ಲಿ ನೊಂದ ಪತ್ನಿ ಉಲ್ಲೇಖಿಸಿದ್ದರು.

Related Stories

No stories found.
Kannada Bar & Bench
kannada.barandbench.com