ಮದುವೆಯಿಂದ ಆಧಾರ್‌ ಕಾಯಿದೆಯಡಿ ದೊರೆತಿರುವ ಪ್ರಕ್ರಿಯಾತ್ಮಕ ವಿಚಾರಣಾ ಹಕ್ಕು ಹೋಗದು: ಹೈಕೋರ್ಟ್‌

ಪತಿಯ ಆಧಾರ್‌ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಇದನ್ನು ಆಧಾರ್‌ ಕಾಯಿದೆ ಸೆಕ್ಷನ್‌ 33ರ ಅಡಿ ಹೈಕೋರ್ಟ್‌ ನಿರ್ಧರಿಸಬೇಕಾಗುತ್ತದೆ ಎಂದು ಯುಐಡಿಎಐ ಪತ್ನಿಯ ಮನವಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು.
High Court of Karnataka, Dharwad Bench
High Court of Karnataka, Dharwad Bench
Published on

ಮದುವೆಯ ಸಂಬಂಧದಿಂದ ಆಧಾರ್‌ ಕಾರ್ಡ್‌ ಸಂಖ್ಯೆ ಹೊಂದಿರುವವರ ಖಾಸಗಿ ಹಕ್ಕು ಇಲ್ಲವೇ ಆಧಾರ್‌ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಸಹಾಯಧನ ಮತ್ತು ಸೇವೆಗಳ ಗುರಿಕೇಂದ್ರಿತ ತಲುಪಿಸುವಿಕೆ) ಕಾಯಿದೆ 2016ರ ಅಡಿಯ ಕಾರ್ಯವಿಧಾನದ ಹಕ್ಕು ಮೊಟಕಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಹೇಳಿದೆ.

ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಉಪ ಮಹಾನಿರ್ದೇಶಕರು ಮತ್ತು ಎಫ್‌ಎಎ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಸುನಿಲ್‌ ದತ್‌ ಯಾದವ್ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

ಹಾಲಿ ಪ್ರಕರಣದಲ್ಲಿ ಪತ್ನಿಯು ಪತಿಯ ಆಧಾರ್‌ ಕಾರ್ಡ್‌ನಲ್ಲಿನ ಮಾಹಿತಿ ಕೋರಿದ್ದರು. ಹುಬ್ಬಳ್ಳಿಯ ನಿವಾಸಿಯಾದ ಪತ್ನಿಯು 2005ರ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ದಂಪತಿಗೆ ಹೆಣ್ಣು ಮಗುವಿದೆ. ಪತಿಯ ವಿರುದ್ಧ ದಾವೆ ಹೂಡಿದ್ದ ಪತ್ನಿಗೆ ಕೌಟುಂಬಿಕ ನ್ಯಾಯಾಲಯವು 10,000 ಜೀವನಾಂಶ ಹಾಗೂ ಹೆಣ್ಣು ಮಗುವಿಗೆ 5,000 ಜೀವನಾಂಶ ನೀಡಲು ಆದೇಶಿಸಿತ್ತು. ಪತಿ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲಾಗದಿರುವುದರಿಂದ ನ್ಯಾಯಾಲಯದ ಆದೇಶ ಜಾರಿಗೊಳಿಸಲಾಗಿರಲಿಲ್ಲ. ಹೀಗಾಗಿ, ಪತ್ನಿಯು ಆರ್‌ಟಿಐ ಕಾಯಿದೆ ಅಡಿ ಯುಐಡಿಎಐ ಮೆಟ್ಟಿಲೇರಿದ್ದರು.

ಪತಿಯ ಆಧಾರ್‌ ಕಾರ್ಡ್‌ನಲ್ಲಿನ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಇದನ್ನು ಆಧಾರ್‌ ಕಾಯಿದೆ ಸೆಕ್ಷನ್‌ 33ರ ಅಡಿ ಹೈಕೋರ್ಟ್‌ ನಿರ್ಧರಿಸಬೇಕಾಗುತ್ತದೆ ಎಂದು ಯುಐಡಿಎಐ 2021ರ ಫೆಬ್ರವರಿ 25ರಂದು ಪತ್ನಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಕದತಟ್ಟಿದ್ದು, ಪತಿಗೆ ನೋಟಿಸ್‌ ಜಾರಿ ಮಾಡಿದ್ದ ನ್ಯಾಯಾಲಯವು ಆಕೆಯ ಅರ್ಜಿಯನ್ನು ಪರಿಗಣಿಸುವಂತೆ ಯುಐಡಿಎಐಗೆ 2023ರ ಫೆಬ್ರವರಿ 8ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಯುಐಡಿಎಐ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಆಧಾರ್‌ ಕಾಯಿದೆ ಸೆಕ್ಷನ್‌ 33 (1) ಅನ್ನು ಪಾಲಿಸುವುದು ಕಡ್ಡಾಯವಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಆದೇಶ ಮಾಡಿದ ಬಳಿಕ ಮಾತ್ರ ಮಾಹಿತಿ ಬಹಿರಂಗಪಡಿಸಬಹುದು ಎಂದು ಹೇಳಿದೆ ಎಂದು ವಾದಿಸಿತ್ತು.

ಪತ್ನಿಯ ಪರವಾಗಿ ವಾದಿಸಿದ್ದ ವಕೀಲರು, ಮದುವೆಯ ಬಳಿಕ ಪತಿ-ಪತ್ನಿಯ ಗುರುತು ಒಂದಕ್ಕೊಂದು ಮಿಳಿತವಾಗಿರುತ್ತದೆ. ದಂಪತಿಯಲ್ಲಿ ಒಬ್ಬರು ಮತ್ತೊಬ್ಬರ ಮಾಹಿತಿ ಕೋರುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ. ಮೂರನೇ ವ್ಯಕ್ತಿ ಮಾಹಿತಿ ಕೋರಿದಾಗ ನಿರ್ಬಂಧ ವಿಧಿಸುವುದನ್ನು ಹಾಲಿ ಪ್ರಕರಣಕ್ಕೆ ಅನ್ವಯಿಸಲಾಗದು ಎಂದು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ್ದ ವಿಭಾಗೀಯ ಪೀಠವು “ಸುಪ್ರೀಂ ಕೋರ್ಟ್‌ ಕೆ ಎಸ್‌ ಪುಟ್ಟಸ್ವಾಮಿ ಅವರ ಪ್ರಕರಣದಲ್ಲಿ ವ್ಯಕ್ತಿಯ ಮಾಹಿತಿ ಕೋರಿದರೆ ಅಂಥ ಮಾಹಿತಿ ಬಹಿರಂಗದ ವಿರುದ್ಧ ದಾವೆ ಹೂಡಲು ಆಧಾರ್‌ ಕಾಯಿದೆ ಸೆಕ್ಷನ್‌ 33(1)ರ ಅಡಿ ಆ ವ್ಯಕ್ತಿ ಹಕ್ಕು ಹೊಂದಿದ್ದಾರೆ ಎಂದು ಹೇಳಿದೆ” ಎಂದಿತ್ತು.

“ಆಧಾರ್ ಸಂಖ್ಯೆ ಹೊಂದಿರುವವರ ಗೌಪ್ಯತೆಯ ಹಕ್ಕು ವ್ಯಕ್ತಿಯ ಗೌಪ್ಯತೆಯ ಹಕ್ಕಿನ ಸ್ವಾಯತ್ತತೆಯನ್ನು ಸಂರಕ್ಷಿಸುತ್ತದೆ, ಇದಕ್ಕೆ ಯಾವುದೇ ವಿನಾಯಿತಿ ಇರುವುದಿಲ್ಲ. ಮದುವೆಯಾಗುವುದರಿಂದ ವ್ಯಕ್ತಿಗತವಾಗಿರುವ ಖಾಸಗಿ ಹಕ್ಕನ್ನು ಮೊಟಕುಗೊಳ್ಳುವುದಿಲ್ಲ. ಇದು ಕಾಯಿದೆಯ ಸೆಕ್ಷನ್‌ 33ರ ಅಡಿ ಅಂಥ ವ್ಯಕ್ತಿಗತ ಹಕ್ಕಿಗೆ ಪ್ರಕ್ರಿಯೆಯ ಮೂಲಕ ರಕ್ಷಣೆ ಇದೆ. ಮದುವೆಯಾಗುವುದರಿಂದ ಆಧಾರ್‌ ಕಾಯಿದೆ ಸೆಕ್ಷನ್‌ 33ರ ಅಡಿ ದೊರೆತಿರುವ ಪ್ರಕ್ರಿಯೆ ಭಾಗವಾದ ವಿಚಾರಣಾ ಆಲಿಕೆಯ ಹಕ್ಕು ಹೋಗುವುದಿಲ್ಲ” ಎಂದು ವಿಭಾಗೀಯ ಪೀಠ ಹೇಳಿದೆ.

ಈ ನೆಲೆಯಲ್ಲಿ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಏಕಸದಸ್ಯ ಪೀಠಕ್ಕೆ ವಿಭಾಗೀಯ ಪೀಠ ನಿರ್ದೇಶಿಸಿದೆ. ಅದರಲ್ಲಿ ಪತಿಯನ್ನು ಪ್ರತಿವಾದಿಯನ್ನಾಗಿಸುವಂತೆ ಸೂಚಿಸಲಾಗಿದೆ.

Kannada Bar & Bench
kannada.barandbench.com