ಸಂತ್ರಸ್ತೆಯೊಂದಿಗೆ ಮದುವೆಯಾದ ಮಾತ್ರಕ್ಕೆ ಅತ್ಯಾಚಾರ, ಫೋಕ್ಸೋ ಅಡಿಯ ವಿಚಾರಣೆ ರದ್ದು ಮಾಡಲಾಗದು: ಕೇರಳ ಹೈಕೋರ್ಟ್‌

ಅತ್ಯಾಚಾರ ಎನ್ನುವುದು ಗಂಭೀರ ಅಪರಾಧವಾಗಿದೆ. ಇದು ಖಾಸಗಿ ಸ್ವರೂಪದ ಅಪರಾಧ ಮಾತ್ರವೇ ಅಲ್ಲ, ಸಮಾಜದೆಡೆಗಿನ ಅಪರಾಧ ಕೂಡ ಎಂದು ನ್ಯಾಯಾಲಯ ಹೇಳಿದೆ.
Kerala HC and Justice Shircy V
Kerala HC and Justice Shircy V

ಅತ್ಯಾಚಾರಿ ಹಾಗೂ ಸಂತ್ರಸ್ತೆಯ ನಡುವೆ ಒಪ್ಪಂದ ಅಥವಾ ಮದುವೆಯಾದ ಮಾತ್ರಕ್ಕೆ ಅದುವೇ ಆರೋಪಿಯ ವಿರುದ್ಧದ ಪ್ರಕರಣವನ್ನು ಕೈಬಿಡಲು, ಅದೂ ವಿಶೇಷವಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಕಾಯಿದೆ, 2012ರ (ಫೋಕ್ಸೊ) ನಿಬಂಧನೆಗಳಿಗೆ ಒಳಪಡುವಂತಹ ಪ್ರಕರಣವನ್ನು ರದ್ದುಪಡಿಸಲು ಆಧಾರವಾಗದು ಎಂದು ಇತ್ತೀಚೆಗೆ ಕೇರಳ ಹೈಕೋರ್ಟ್‌ ಹೇಳಿದೆ (ರಾಹುಲ್‌ ಪಿ ಆರ್‌ ವರ್ಸಸ್‌ ಕೇರಳ ಸರ್ಕಾರ).

ಅರೋಪಿಯು ಸಂತ್ರಸ್ತೆಯನ್ನು ಮದುವೆಯಾಗಿದ್ದರೂ ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಲೇಬೇಕು ಎಂದು ನ್ಯಾ. ಶಿರ್ಸಿ ವಿ ಅವರಿದ್ದ ಏಕಸದಸ್ಯ ಪೀಠವು ಆದೇಶಿಸಿದೆ. ಇದೇ ವೇಳೆ ನ್ಯಾಯಾಲಯವು ಅಪರಾಧ ಜರುಗಿದ ವೇಳೆ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದುದನ್ನು ವಿಶೇಷವಾಗಿ ಗಮನಿಸಿತು. ಹಾಗಾಗಿ ಪ್ರಕರಣವು ಫೋಕ್ಸೋ ಕಾಯಿದೆಯಡಿ ಬರುವುದರ ಜೊತೆಗೆ ಅಪರಾಧವು ಮತ್ತಷ್ಟು ಹೀನಕೃತ್ಯವಾಗಿ ಪರಿಣಮಿಸುತ್ತದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡಿತು.

ಈ ಬಗ್ಗೆ ತನ್ನ ಆದೇಶದಲ್ಲಿ ಪೀಠವು, “ಅಪರಾಧವು ಮಗುವಿನ ವಿರುದ್ಧ ನಡೆದಿರುವುದರಿಂದ ಅದರ ಗಂಭೀರತೆಯು ಮತ್ತಷ್ಟು ತೀವ್ರವೂ, ಘೋರವೂ ಆದುದಾಗಿರುತ್ತದೆ. ಘಟನೆಯು ಮಗುವಿನ ಆತ್ಮವಿಶ್ವಾಸ, ಘನತೆಯನ್ನು ಕುಂದಿಸುವುದಕ್ಕೆ ಕಾರಣವಾಗಬಹುದಾಗಿದ್ದು ಅಪ್ರಾಪ್ತರ ಮನಸ್ಸಿನ ಮೇಲೆ ಘೋರ ಪರಿಣಾಮವನ್ನು ಉಂಟು ಮಾಡಿ ದೂರಗಾಮಿ ಪರಿಣಾಮಗಳಿಗೆ ಕಾರಣವಾಗಬಹುದು. ಫೋಕ್ಸೋ ವಿಶೇಷ ಕಾಯಿದೆಯನ್ನು ಜಾರಿಗೆ ತಂದ ಉದ್ದೇಶವೇ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದಾಗಿದೆ,” ಎಂದು ದಾಖಲಿಸಿದೆ.

ಮುಂದುವರೆದು, “ಅಪರಾಧ ಕೃತ್ಯದ ತೀವ್ರತೆಯು ಇಷ್ಟೊಂದು ಗಂಭೀರವೂ, ಹೀನವೂ ಆಗಿದ್ದು, ನ್ಯಾಯಾಂಗದ ಸಂವೇದನೆಗೆ ಆಘಾತವುಂಟು ಮಾಡುವಂತಿರಬೇಕಾದರೆ ಪಕ್ಷಕಾರರ ನಡುವಿನ ಒಪ್ಪಂದವಾಗಲಿ, ಅವರ ನಡುವಿನ ಮದುವೆಯಾಗಲಿ ಕ್ರಿಮಿನಲ್‌ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಲು ಕಾರಣವಾದ ಅಂಶಗಳಾಗುವುದಿಲ್ಲ. ಸಂತ್ರಸ್ತೆಯು ಈಗ ವಯಸ್ಕರಾಗಿದ್ದಾರೆ, ಅರ್ಜಿದಾರರೊಂದಿಗೆ (ಆರೋಪಿ) ಸಂತೋಷದಿಂದ ಬಾಳುತ್ತಿದ್ದಾರೆ ಎನ್ನುವ ಅಂಶವು ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆಯನ್ನು ಕೈಬಿಡಲು ಸಾಧಾರವಾದ ಅಂಶವಾಗಲಿ, ನಿರ್ಧರಣಾ ವಿಷಯವಾಗಲಿ ಅಗುವುದಿಲ್ಲ. ಹಾಗಾಗಿ, ಪಕ್ಷಕಾರರ ನಡುವೆ ಆಗಿರುವ ಒಪ್ಪಂದವು ಅರ್ಜಿದಾರರ ವಿರುದ್ಧದ ಅರೋಪಗಳನ್ನು ಅಲ್ಲಗಳೆಯುತ್ತದೆ ಎನ್ನುವುದನ್ನು ಒಪ್ಪಲಾಗದು,” ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ವಿವರಿಸಿದ್ದಾರೆ.

ಹಿನ್ನೆಲೆ:

ಆರೋಪಿಯು ಹದಿನೇಳು ವಯಸ್ಸಿನ ಅಪ್ರಾಪ್ತೆಯನ್ನು ಬಲವಂತವಾಗಿ ಆಕೆಯ ಮನೆಯಿಂದ ಕರೆದೊಯ್ದು ಅತ್ಯಾಚಾರವೆಸಗಿದ್ದ. ಪ್ರಕರಣವು ಬೆಳಕಿಗೆ ಬಂದಾಗ ಸಂಬಂಧಪಟ್ಟ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸುವುದರ ಜೊತೆಗೆ ಫೋಕ್ಸೋ ಕಾಯಿದೆಯನ್ನು ಸಹ ದಾಖಲಿಸಲಾಗಿತ್ತು.

ಮುಂದೆ, ಪ್ರಕರಣದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಆರೋಪಿಯ ಪರ ವಕೀಲರು ಪಕ್ಷಕಾರರ ನಡುವೆ ಪ್ರಕರಣವು ಬಗೆಹರಿದಿದ್ದು, ಸಂತ್ರಸ್ತೆಯು ಅರ್ಜಿದಾರ (ಆರೋಪಿ) ವಿರುದ್ಧ ಪ್ರಕರಣವನ್ನು ಮುನ್ನಡೆಸುವ ಇಚ್ಛೆ ಹೊಂದಿಲ್ಲ ಎಂದು ಹೇಳಿಕೆ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಸಂತ್ರಸ್ತೆಯಿಂದ ಪ್ರಮಾಣೀಕೃತ ಅಫಿಡವಿಟ್ ಸಹ ಸಲ್ಲಿಸಲಾಗಿತ್ತು. ವಿಶೇಷ ವಿವಾಹ ಕಾಯಿದೆಯಡಿ ಸಂತ್ರಸ್ತೆ ಮತ್ತು ಅರ್ಜಿದಾರರು ಮದುವೆಯಾಗಿದ್ದು ಸಂತೋಷದಿಂದ ಬಾಳುತ್ತಿರುವುದಾಗಿ ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಅಡಿ (ಸಿಆರ್‌ಪಿಸಿ) ಬರುವ ಸೆಕ್ಷನ್‌ 482ರ ಅಧಿಕಾರವನ್ನು ಬಳಸುವ ಮುಖೇನ ಅತ್ಯಾಚಾರ ಪ್ರಕರಣದ ಎಫ್‌ಐಆರ್ ಅನ್ನು ನ್ಯಾಯಾಲಯವು ರದ್ದುಪಡಿಸಬೇಕು ಎಂದು ಕೋರಲಾಗಿತ್ತು. ಈ ಬಗ್ಗೆಯೂ ತನ್ನ ಆದೇಶದಲ್ಲಿ ಪ್ರಸ್ತಾಪಿಸಿರುವ ನ್ಯಾಯಾಲಯವು ಸೆಕ್ಷನ್ 482ರ ಅಡಿಯ ಅಧಿಕಾರವನ್ನು ಅತ್ಯಂತ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಅಪರೂಪವಾಗಿ ಬಳಸಬೇಕು. ಇದು ಒಂದು ಅಪವಾದವೇ ಹೊರತು ನಿಯಮವಲ್ಲ ಎಂದು ಅನೇಕ ತೀರ್ಪುಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿರುವುದನ್ನು ಉಲ್ಲೇಖಿಸಿತು.

Related Stories

No stories found.
Kannada Bar & Bench
kannada.barandbench.com