ವಿವಾಹ ಎಂಬುದು ಸಾಂವಿಧಾನಿಕ ಹಕ್ಕು ಕೇವಲ ಶಾಸನಬದ್ಧ ಹಕ್ಕು ಮಾತ್ರವೇ ಅಲ್ಲ ಎಂದು ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವಂತೆ ಕೋರಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ [ಸುಪ್ರಿಯೋ ಇನ್ನಿತರರು ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಮದುವೆಯ ಮೂಲ ಅಂಶಗಳು ಮತ್ತು ವಿವಾಹಿತ ದಂಪತಿ ಅರ್ಹರಾಗಿರುವ ರಕ್ಷಣೆಗಳನ್ನು ಗಣನೆಗೆ ತೆಗೆದುಕೊಂಡರೆ, ವಿವಾಹಗಳು ಸಾಂವಿಧಾನಿಕ ರಕ್ಷಣೆಗೆ ಅರ್ಹವಾಗಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ತಿಳಿಸಿತು.
"ಮದುವೆಯಾಗುವ ಹಕ್ಕು ಸಾಂವಿಧಾನಿಕ ಹಕ್ಕಲ್ಲ ಎನ್ನುವುದು ವಿಪರೀತವಾಗುತ್ತದೆ. ಮದುವೆಯ ಮೂಲಭೂತ ಅಂಶಗಳನ್ನು ನೋಡಿ: ಇಬ್ಬರು ವ್ಯಕ್ತಿಗಳಿಗೆ ಸಹಬಾಳ್ವೆ ಮಾಡುವ ಹಕ್ಕು ಅದರಲ್ಲಿದೆ. ಮದುವೆಯು ಕೌಟುಂಬಿಕ ಘಟಕವಾಗಿದ್ದು ಇದು ಸಾಂವಿಧಾನಿಕ ಮೌಲ್ಯಗಳ ಮೇಲೆ ಅಸ್ತಿತ್ವವನ್ನು ಹೊಂದಿದೆ. ಸಂತಾನ ಹೊಂದುವುದು ಮದುವೆಯ ಒಂದು ಪ್ರಮುಖ ಅಂಶವಾಗಿದೆ. ಹಾಗೆಂದು, ಮದುವೆಯ ಸಿಂಧುತ್ವ ಅಥವಾ ಕಾನೂನುಬದ್ಧತೆಗೆ ಸಂತಾನ ಹೊಂದಲೇಬೇಕು ಎನ್ನುವುದು ಷರತ್ತಲ್ಲ. ಮದುವೆಯನ್ನು ನಿಯಂತ್ರಿಸುವುದಕ್ಕೆ ಪ್ರಭುತ್ವಕ್ಕೆ ನ್ಯಾಯಸಮ್ಮತ ಆಸಕ್ತಿ ಇದೆ. ಹೀಗಾಗಿ ಕಾನೂನು ಮಾನ್ಯತೆಗಷ್ಟೇ ಅಲ್ಲ, ಸಾಂವಿಧಾನಿಕ ರಕ್ಷಣೆಗೂ ವಿವಾಹಗಳು ಅರ್ಹ” ಎಂದು ಸಿಜೆಐ ಹೇಳಿದರು.
ಭಿನ್ನಲಿಂಗೀಯತೆ ವಿವಾಹದ ಪ್ರಮುಖ ಅಂಶವೇ ಎಂಬುದು ಈಗ ನ್ಯಾಯಾಲಯ ನಿರ್ಧರಿಸಬೇಕಾದ ಸಂಗತಿ ಎಂದು ಕೂಡ ಅವರು ಹೇಳಿದರು.
ಸಂವಿಧಾನವು ಅನೇಕ ವಿಷಯಗಳಲ್ಲಿ ಸಂಪ್ರದಾಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ ಪೀಠ ಜಾತಿವಾದ ಮತ್ತು ಅಸ್ಪೃಶ್ಯತೆಯ ಉದಾಹರಣೆಗಳನ್ನು ಉಲ್ಲೇಖಿಸಿದೆ.
ಸಲಿಂಗ ದಂಪತಿಗಳಿಗೆ ಮದುವೆಯಾಗುವ ಮೂಲಭೂತ ಹಕ್ಕಿನ ವಿರುದ್ಧ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರ ವಾದವನ್ನು ಪೀಠ ಆಲಿಸಿತು.
ಆಗ ನ್ಯಾಯಮೂರ್ತಿ ಭಟ್, “… ಸಂವಿಧಾನ ಎಂಬುದು ಸಂಪ್ರದಾಯ ಭಂಜಕ. ನೀವು ಸಂವಿಧಾನದ 14, 19, 17ನೇ ವಿಧಿಯನ್ನು ಜಾರಿಗೆ ತಂದಾಗ ಸಂಪ್ರದಾಯಕ್ಕೆ ಧಕ್ಕೆಯಾದರೆ ಹಾಗೆ ಸಂಪ್ರದಾಯವನ್ನು ಮುರಿದಾಗ ನಮ್ಮ ಸಮಾಜದಲ್ಲಿ ಜಾತಿಯ ವಿಷಯದಲ್ಲಿ ಪವಿತ್ರವೆಂದು ಪರಿಗಣಿಸಲ್ಪಟ್ಟದ್ದನ್ನು ನಾವು ಪ್ರಜ್ಞಾಪೂರ್ವಕವಾಗಿ ಮುರಿದಿದ್ದೇವೆ. ಜೊತೆಗೆ ಅಸ್ಪೃಶ್ಯತೆಯನ್ನು ಕಾನೂನುಬಾಹಿರ ಎನ್ನುವ ಮಟ್ಟಕ್ಕೆ ತಲುಪಿದ್ದೇವೆ. ಆದ್ದರಿಂದ ಸಂಪ್ರದಾಯಗಳು ಇವೆ ಮತ್ತು ಅವು ಒಂದು ಮಟ್ಟಿಗೆ ಅಲ್ಲಿವೆ. ಆದರೆ ಇದೇ ವೇಳೆ ಮದುವೆಯ ಪರಿಕಲ್ಪನೆ ವಿಕಸನಗೊಂಡಿದೆ ಎಂಬ ಅಂಶಕ್ಕೆ ಕಣ್ತೆರೆದಿರೋಣ” ಎಂದು ನ್ಯಾಯಾಲಯ ನುಡಿಯಿತು.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯ ಎಂಟನೇ ದಿನವಾದ ನಿನ್ನೆ ಪ್ರತಿವಾದಿಗಳ ಪರ ವಕೀಲರು ತಮ್ಮ ವಾದ ಮುಂದುವರೆಸಿದರು. ದ್ವಿವೇದಿ ಅವರು ಸಲಿಂಗ ವಿವಾಹ ಕುರಿತು ನಿರ್ಧರಿಸುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ ಎಂದರೆ ಜಾಮಿಯತ್-ಉಲಾಮಾ- ಇ- ಹಿಂದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಷಯ ಸಂಸತ್ತಿನಲ್ಲಿ ಚರ್ಚೆಗಳ ಜೊತೆಗೆ ಸಾರ್ವಜನಿಕ ಚರ್ಚೆಯ ಭಾಗವಾಗಬೇಕಾಗಿದೆ ಎಂದು ಹೇಳಿದರು. ವಿಶೇಷ ವಿವಾಹ ಕಾಯಿದೆಯನ್ನು ಸಂಸತ್ತು ಯಾವ ಉದ್ದೇಶದಿಂದ ಜಾರಿಗೆ ತಂದಿದೆ ಎಂಬುದನ್ನು ಪರೀಕ್ಷಿಸಬೇಕು ಎಂದು ಹಿರಿಯ ವಕೀಲ ಅರವಿಂದ ದಾತಾರ್ ಹೇಳಿದ್ದಾರೆ.