ಸಿಜೆಗಳ ಕೈಯಲ್ಲಿರುವ ಅನಿಯಂತ್ರಿತ ಮಾಸ್ಟರ್‌ ಆಫ್‌ ರೋಸ್ಟರ್‌ ಅಧಿಕಾರದಿಂದ ತೊಂದರೆ, ಅದನ್ನು ಸರಿಪಡಿಸಬೇಕು:‌ ರೋಹಟ್ಗಿ

ನಿಯಮಗಳನ್ನು ರೂಪಿಸುವ ಮೂಲಕ ಮಾಸ್ಟರ್‌ ಆಫ್‌ ರೋಸ್ಟರ್‌ ಅಧಿಕಾರಗಳನ್ನು ವ್ಯವಸ್ಥಿತವಾಗಿಸಬೇಕು ಎನ್ನುವ ಮೂಲಕ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ಅಭಿಪ್ರಾಯಕ್ಕೆ ಮುಕುಲ್‌ ರೋಹಟ್ಗಿ ಧ್ವನಿಗೂಡಿಸಿದರು.
Mukul Rohatgi
Mukul Rohatgi

ಸುಪ್ರೀಂ ಕೋರ್ಟ್ ನ‌ ಮುಖ್ಯ ನ್ಯಾಯಮೂರ್ತಿ ಹಾಗೂ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ 'ಮಾಸ್ಟರ್‌ ಆಫ್‌ ರೋಸ್ಟರ್'‌ ಅಧಿಕಾರದ ಮೂಲಕ ದೊರೆಯುವ ಅನಿಯಂತ್ರಿತವಾದ ಮತ್ತು ಸಂಪೂರ್ಣವಾದ ಅಧಿಕಾರವನ್ನು ಬಳಸಿ ಅವರು ನಿರ್ದಿಷ್ಟ ಪ್ರಕರಣಗಳನ್ನು ನಿರ್ದಿಷ್ಟ ಪೀಠಗಳಿಗೆ ವಿಚಾರಣೆಗೆ ನಿಗದಿಗೊಳಿಸುವುದು ಸಮಸ್ಯಾತ್ಮಕವಾಗಿದ್ದು, ಅದನ್ನು ಪರಿಹರಿಸಬೇಕಿದೆ ಎಂದು ಮಾಜಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಹೇಳಿದ್ದಾರೆ.

ದಿವಂಗತ ನ್ಯಾ. ರಾಜೇಂದ್ರ ಸಾಚಾರ್‌ ಅವರ "ಇನ್‌ ಪರ್ಸ್ಯೂಟ್‌ ಆಫ್‌ ಜಸ್ಟೀಸ್‌: ಅನ್‌ ಆಟೋಬಯಾಗ್ರಫಿ" (ನ್ಯಾಯದ ಅನ್ವೇಷಣೆ: ಒಂದು ಆತ್ಮಕತೆ) ಪುಸ್ತಕ ಬಿಡುಗಡೆ ಸಮಾರಂಭದ ಭಾಗವಾಗಿ “ವೈಯಕ್ತಿಕ ಸ್ವಾತಂತ್ರ್ಯ ಮತ್ತು ನ್ಯಾಯಾಂಗ” ಎಂಬ ವಿಷಯದ ಕುರಿತು ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಯಮಗಳನ್ನು ರೂಪಿಸುವ ಮೂಲಕ ಮಾಸ್ಟರ್‌ ಆಫ್‌ ರೋಸ್ಟರ್‌ ಮೂಲಕ ದೊರೆಯುವ ಅಧಿಕಾರಗಳನ್ನು ವ್ಯವಸ್ಥಿತವಾಗಿ ಕ್ರಮಬದ್ಧವಾಗಿಸಬೇಕಿದೆ ಎಂದು ರೋಹಟ್ಗಿ ಹೇಳಿದರು. ಈ ಮೂಲಕ ಮಾಸ್ಟರ್‌ ಆಫ್‌ ರೋಸ್ಟರ್‌ ಅಧಿಕಾರದಲ್ಲಿ ಹುಳುಕುಗಳಿದ್ದು, ಅದನ್ನು ಸರಿಪಡಿಸಬೇಕಿದೆ ಎಂಬ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ಅಭಿಪ್ರಾಯಕ್ಕೆ ರೋಹಟ್ಗಿ ಸಹಮತ ವ್ಯಕ್ತಪಡಿಸಿದರು.

“ಮಾಸ್ಟರ್‌ ಆಫ್‌ ರೋಸ್ಟರ್‌ ಅಧಿಕಾರದ ಮೂಲಕ ಅನಿಯಂತ್ರಿತವಾದ ಮತ್ತು ಸಂಪೂರ್ಣವಾದ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳಿಗೆ ದೊರೆಯಲಿದ್ದು, ಅದನ್ನು ಅವರು ಬಳಸಿ ನಿರ್ದಿಷ್ಟ ಪ್ರಕರಣಗಳನ್ನು ನಿರ್ದಿಷ್ಟ ಪೀಠಗಳಿಗೆ ವಿಚಾರಣೆಗೆ ನಿಗದಿಗೊಳಿಸುವುದು ಮತ್ತು ಕೆಲವು ಪ್ರಕರಣಗಳನ್ನು ನಿಧಾನವಾಗಿ ಮತ್ತೆ ಕೆಲವನ್ನು ತಕ್ಷಣಕ್ಕೆ ವಿಚಾರಣೆ ನಡೆಸುವ ಪ್ರಕ್ರಿಯೆಯು ನಿಜಕ್ಕೂ ಸಮಸ್ಯಾತ್ಮಕವಾಗಿದ್ದು, ಅದಕ್ಕೆ ನಿಯಮಗಳನ್ನು ರೂಪಿಸಬೇಕಿದೆ ಎಂಬ ಕಪಿಲ್‌ ವಾದಕ್ಕೆ ನನ್ನ ಸಹಮತವಿದೆ. ಈ ವಿಚಾರದ ಕುರಿತು ಎರಡು ವರ್ಷಗಳ ಹಿಂದೆ ನಮಗೆ ಬಾರಿ ಸಮಸ್ಯೆಯಾಗಿದೆ” ಎಂದು ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ರಂಜನ್‌ ಗೊಗೊಯ್‌ ಸೇರಿದಂತೆ ಹಲವರ ಕಾಲದಲ್ಲಿ ಎದುರಾಗಿದ್ದ ವಿವಾದಗಳತ್ತ ಬೆರಳು ಮಾಡಿದರು.

ಮಾಸ್ಟರ್‌ ಆಫ್‌ ರೋಸ್ಟರ್‌ ಅಧಿಕಾರದ ಮೂಲಕ ಅನಿಯಂತ್ರಿತವಾದ ಮತ್ತು ಸಂಪೂರ್ಣವಾದ ಅಧಿಕಾರ ಮುಖ್ಯ ನ್ಯಾಯಮೂರ್ತಿಗಳಿಗೆ ದೊರೆಯಲಿದ್ದು, ಅದನ್ನು ಅವರು ಬಳಸಿ ನಿರ್ದಿಷ್ಟ ಪ್ರಕರಣಗಳನ್ನು ನಿರ್ದಿಷ್ಟ ಪೀಠಗಳಿಗೆ ವಿಚಾರಣೆಗೆ ನಿಗದಿಗೊಳಿಸುವುದು ಮತ್ತು ಕೆಲವು ಪ್ರಕರಣಗಳನ್ನು ನಿಧಾನವಾಗಿ ಮತ್ತೆ ಕೆಲವನ್ನು ತಕ್ಷಣಕ್ಕೆ ವಿಚಾರಣೆ ನಡೆಸುವ ಪ್ರಕ್ರಿಯೆಯು ನಿಜಕ್ಕೂ ಸಮಸ್ಯಾತ್ಮಕವಾಗಿದೆ.
ಮುಕುಲ್‌ ರೋಹ್ಟಗಿ

ಸುಪ್ರೀಂ ಕೋರ್ಟ್‌ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳಲ್ಲಿ ಮಾಸ್ಟರ್‌ ಆಫ್‌ ರೋಸ್ಟರ್‌ ಸಹ ಒಂದಾಗಿದೆ. ಪ್ರಕರಣಗಳ ಸಂಖ್ಯೆ ವ್ಯಾಪಕವಾಗುತ್ತಿರುವುದರಿಂದ ವ್ಯವಸ್ಥೆ ಶಿಥಿಲಗೊಳ್ಳುತ್ತಿದೆ ಎಂದಿರುವ ರೋಹಟ್ಗಿ ಅವರು, “ಸುಪ್ರೀಂ ಕೋರ್ಟ್‌ ಸೂಪರ್‌ ಮೇಲ್ಮನವಿ ನ್ಯಾಯಾಲಯವಾಗಿದೆ” ಎಂದರು.

“ನ್ಯಾಯಾಲಯವು ತನ್ನಲ್ಲಿ ಸಲ್ಲಿಕೆಯಾಗಿರುವ ಮೇಲ್ಮನವಿಗಳಿಂದ ತುಂಬಿ ಹೋಗಿದೆ. ಇದಕ್ಕೆ ಹಲವು ವಿಭಿನ್ನ ಕಾರಣಗಳಿವೆ. ನ್ಯಾಯಾಲಯವು ಸಂವಿಧಾನವು ಬಯಸಿದ್ದಕ್ಕಿಂತ ಹೆಚ್ಚಾಗಿ ತನ್ನ ಬಾಗಿಲನ್ನು ಮುಕ್ತಗೊಳಿಸಿದೆ. ಇದರಿಂದ ಇದು ಸೂಪರ್‌ ಮೇಲ್ಮನವಿ ನ್ಯಾಯಾಲಯವಾಗಿದೆ. ಹೈಕೋರ್ಟ್‌ಗಳಿಂದ ಎಲ್ಲವೂ ಸುಪ್ರೀಂ ಕೋರ್ಟ್‌ಗೆ ಹೋಗುತ್ತವೆ, ಅದು ಹಾಗೆ ಆಗಬಾರದು” ಎಂದರು.

ಬಾಕಿ ಪ್ರಕರಣಗಳ ಜೊತೆಗೆ ಹೆಚ್ಚುವರಿಯಾಗಿ ನ್ಯಾಯಾಧಿಕರಣಗಳು ಹೆಚ್ಚಾಗಿದ್ದು, ಇವು ನೇರವಾಗಿ ಸುಪ್ರೀಂ ಕೋರ್ಟ್‌ನ ಶಾಸನಬದ್ಧ ಮೇಲ್ಮನವಿಗೆ ಒಳಪಡುತ್ತವೆ. ಸಂವಿಧಾನದ ಉದ್ದೇಶ ಇದಾಗಿರಲಿಲ್ಲ. ನಿಮ್ಮ ಜನಸಂಖ್ಯೆ ನೂರು ಕೋಟಿ ದಾಟಿದ್ದು, ಕೇವಲ 30 ನ್ಯಾಯಮೂರ್ತಿಗಳು ಮಾತ್ರ ಇದ್ದರೆ, ಅಲ್ಲಿ ಮೊಕದ್ದಮೆಗಳೇ ವಿಜೃಂಭಿಸುತ್ತವೆ. ನಿಮ್ಮ ತಲೆಯ ಮೇಲೆ ಅಷ್ಟು ದೊಡ್ಡ ಭಾರ ಹೊರಿಸಿದರೆ ಅದನ್ನು ಒತ್ತು ಸಾಗುವುದು ಹೇಗೆ? ವ್ಯವಸ್ಥೆಯು ಶಿಥಿಲಗೊಳ್ಳುತ್ತಿದೆ” ಎಂದರು.

ಸುಪ್ರೀಂ ಕೋರ್ಟ್‌ ಮೇಲ್ಮನವಿಗಳಿಂದ ತುಂಬಿ ಹೋಗಿದೆ. ಇದು ಮೇಲ್ಮನವಿಗಳ ನ್ಯಾಯಾಲಯವಾಗಿದೆ.
ಮುಕುಲ್‌ ರೋಹ್ಟಗಿ

ಮೇಲ್ಮನವಿಗಳ ಸಂಖ್ಯೆ ವ್ಯಾಪಕವಾಗಲು ಕಪಿಲ್‌ ಸಿಬಲ್‌ ಮತ್ತು ತಾನು ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಅವರು ಹಿಂಜರಿಯಲಿಲ್ಲ. “ಕೆಲವರು ವ್ಯವಸ್ಥೆ ಶಿಥಿಲಗೊಂಡಿದೆ ಎಂದರೆ, ಇನ್ನು ಕೆಲವರು ಅದು ಶಿಥಿಲಗೊಳ್ಳುತ್ತಿದೆ ಎನ್ನುತ್ತಾರೆ. ಇದಕ್ಕೆ ತಕ್ಕಮಟ್ಟಿಗೆ ವಕೀಲರಾದ ಸಿಬಲ್‌ ಮತ್ತು ನನ್ನಂತಹವರನ್ನೂ ದೂರಬೇಕು” ಎಂದರು. “ನೀವು ಇದನ್ನು ಹೇಳಲಿ ಎಂದು ನಾನು ಬಯಸುತ್ತಿದ್ದೆ,” ಎಂದು ಸರ್ದೇಸಾಯಿ ಪ್ರತಿಕ್ರಿಯಿಸಿದರು.

“ನಾನೂ ಅದನ್ನು ಹೇಳುತ್ತೇನೆ. ನಮ್ಮ ಬಳಿ ಬರುವ ಪ್ರಕರಣಗಳಲ್ಲಿನ ಅಂಕಿ-ಸಂಖ್ಯೆಗಳಿಂದ ಕೆಲವೊಮ್ಮೆ ನಾವುಗಳೂ ಸಖೇದಾಶ್ಚರ್ಯಗಳಿಗೆ ಸಿಲುಕುತ್ತೇವೆ. ಮಾಸ್ಟರ್‌ ಆಫ್‌ ರೋಸ್ಟರ್‌ ಆದ ಸಿಜೆಐ ಬಳಿಗೆ ದೌಡಾಯಿಸಿ, “ಪ್ರಕರಣವನ್ನು ಕೈಗೆತ್ತಿಕೊಳ್ಳದಿದ್ದರೆ ಇದಾಗುತ್ತದೆ, ಅದಾಗುತ್ತದೆ. 10 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ. 5 ಸಾವಿರ ಉದ್ಯೋಗ ನಷ್ಟವಾಗುತ್ತದೆ ಎಂದು ಹೇಳುತ್ತೇವೆ. ಎಲ್ಲವೂ ಮಾನವೀಯ ನೆಲೆಗಟ್ಟಿನಲ್ಲಿರುತ್ತವೆ. ಈ ಕಾರಣಕ್ಕಾಗಿ ಕೆಲವೊಮ್ಮೆ ಈ ಪ್ರಕರಣಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತದೆ” ಎಂದರು.

ನ್ಯಾಯಮೂರ್ತಿಗಳು ಕಠಿಣ ವಿಚಾರಗಳಿಂದ ರೂಪಿತವಾಗಿರಬೇಕು ಎಂಬ ನ್ಯಾ. ಮದನ್‌ ಲೋಕೂರ್‌ ಅವರ ಹೇಳಿಕೆ ಪ್ರತಿಕ್ರಿಯಿಸಿದ ರೋಹಟ್ಗಿ ಅವರು, “ನಾವು ನ್ಯಾಯಮೂರ್ತಿಗಳನ್ನು ಎಲ್ಲಿಂದ ಪಡೆಯುತ್ತೇವೆ? ವಕೀಲರೇ ನ್ಯಾಯಮೂರ್ತಿಗಳಾಗುತ್ತಾರೆ. ಕಡಿಮೆ ವೇತನದ ಹಿನ್ನೆಲೆಯಲ್ಲಿ ಪ್ರಖರವಾದ ನ್ಯಾಯವಾದಿಗಳು ನ್ಯಾಯಮೂರ್ತಿಗಳಾಗಲು ಬಯಸುವುದಿಲ್ಲ. ಸರಾಸರಿ ಮಟ್ಟದಲ್ಲಿರುವ ವಕೀಲ ನ್ಯಾಯಮೂರ್ತಿಯಾದರೆ ವಕೀಲನಾಗಿ ಅವರು ಗಳಿಸುವ ಹಣದ 1/5 ಭಾಗ ಮಾತ್ರ ನ್ಯಾಯಮೂರ್ತಿಯಾಗಿ ಪಡೆಯುತ್ತಾರೆ. ಉತ್ತಮ ವಕೀಲ ನ್ಯಾಯಮೂರ್ತಿಯಾದರೆ ಅವರು ಗಳಿಸುತ್ತಿದ್ದ ಆದಾಯದ 1/20 ಭಾಗದಷ್ಟು ಮಾತ್ರ ವೇತನ ಸಿಗುತ್ತದೆ. ಈ ಕಾರಣಕ್ಕಾಗಿ ಅವರು ನ್ಯಾಯಮೂರ್ತಿಗಳಾಗಲು ಬಯಸುವುದಿಲ್ಲ. ವಕೀಲರಿಗೆ ಮಕ್ಕಳಿರುತ್ತವೆ. ಅವರಿಗೆ ಮದುವೆ ಮಾಡುವವರು ಯಾರು? ಅವರಿಗೆ ಶಿಕ್ಷಣ ಕೊಡಿಸುವವರು ಯಾರು? ಇದೆಲ್ಲವೂ ಅವರ ಮನಸ್ಸಿನಲ್ಲಿಟ್ಟು ತೂಗುತ್ತಾರೆ. ಹಾಗಾಗಿ, ಆ ಹಳೆಯ ವಿಚಾರಗಳು ಎಂದೋ ಕಳೆದುಹೋಗಿವೆ” ಎಂದರು.

ನಿಮ್ಮ ಹೃದಯ ಸರಿಯಾದ ಸ್ಥಾನದಲ್ಲಿದ್ದರೆ ನೀವು ತಪ್ಪು ಮಾಡುವುದಿಲ್ಲ. ಭಾರತದ ನ್ಯಾಯಾಂಗವನ್ನು ಕಾಡುತ್ತಿರುವ ಸಮಸ್ಯೆಯೇ ಇದು.
ಕಪಿಲ್‌ ಸಿಬಲ್‌

ನ್ಯಾಯಮೂರ್ತಿಗಳ ವೇತನ ಹೆಚ್ಚು ಮಾಡಿದರೆ ಅಧಿಕಾರಿಗಳು, ಸಚಿವರು, ಸೇನೆಯ ಸಿಬ್ಬಂದಿಯೂ ವೇತನ ಹೆಚ್ಚಿಸುವಂತೆ ಕೋರುತ್ತಾರೆ ಎಂದು ರೋಹ್ಟಗಿ ಹೇಳಿದರು.

Also Read
ಕಪ್ಪನ್‌ ಪ್ರಕರಣದ ವಿಚಾರಣೆ ವೇಳೆ ಅರ್ನಾಬ್‌ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ನೆನಪಿಸಿದ ಹಿರಿಯ ನ್ಯಾಯವಾದಿ ಸಿಬಲ್

ಸಂಸ್ಥೆಯಲ್ಲಿ ಕೆಲವು ತೊಂದರೆಗಳಿರಬಹುದು. ಆದರೆ, ಬಹುತೇಕ ಸಂದರ್ಭದಲ್ಲಿ ಕೆಲವೇ ಕೆಲವು ನ್ಯಾಯಮೂರ್ತಿಗಳಲ್ಲಿ ಸಮಸ್ಯೆಗಳಿರುತ್ತವೆ. ಹಿಂದೆಯೂ ಮಾಸ್ಟರ್‌ ಆಫ್‌ ರೋಸ್ಟರ್‌ ಇತ್ತು ಹಾಗೂ ವ್ಯವಸ್ಥೆಯು ಸರಿಯಾದ ರೀತಿಯಲ್ಲಿತ್ತು ಎಂದು ನೆನಪಿಸಿದ ಸಿಬಲ್‌, ಸಮಸ್ಯೆಗಳು ಈಚೆಗೆ ವ್ಯಾಪಕವಾಗಿವೆ ಎಂದರು.

ಇದನ್ನು ಉದಾಹರಣೆ ಸಹಿತ ವಿವರಿಸಿದ ಕಪಿಲ್‌ ಸಿಬಲ್‌ ಅವರು ಪತ್ರಕರ್ತರೊಬ್ಬರು ತಮ್ಮ ಪ್ರಕರಣವನ್ನು ನ್ಯಾಯಾಲಯದ ರಜಾಕಾಲದ ಅವಧಿಯಲ್ಲೂ ವಿಚಾರಣೆ ನಡೆಸಲು ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಉತ್ತರ ಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರನ್ನು “ಹೈಕೋರ್ಟ್‌ ಅಥವಾ ವಿಚಾರಣಾಧೀನ ನ್ಯಾಯಾಲಯಕ್ಕೆ” ತೆರಳುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌ ಅವರ ಮನವಿಯ ವಿಚಾರಣೆಗೆ ನಿರಾಕರಿಸಿತು ಎಂದರು.

Related Stories

No stories found.
Kannada Bar & Bench
kannada.barandbench.com