ಕೃಷ್ಣ ಜನ್ಮಭೂಮಿ ಪ್ರಕರಣ: ಸುನ್ನಿ ಬೋರ್ಡ್, ಈದ್ಗಾ ಮಸೀದಿ ಟ್ರಸ್ಟ್‌ಗೆ ಮಥುರಾ ಜಿಲ್ಲಾ ನ್ಯಾಯಾಲಯದಿಂದ ನೋಟಿಸ್ ಜಾರಿ

ಉತ್ತರ ಪ್ರದೇಶದ ಕತ್ರ ಕೇಶವ್ ದೇವ್‌ನಲ್ಲಿರುವ 13.37 ಎಕರೆ ಜಮೀನು ಭಗವಾನ್ ಶ್ರೀಕೃಷ್ಣ ವಿರಾಜಮಾನ್‌ ಗೆ ಸೇರಿದ್ದು ಎಂದು ಮೇಲ್ಮನವಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕೃಷ್ಣ ಜನ್ಮಭೂಮಿ ಪ್ರಕರಣ: ಸುನ್ನಿ ಬೋರ್ಡ್, ಈದ್ಗಾ ಮಸೀದಿ ಟ್ರಸ್ಟ್‌ಗೆ ಮಥುರಾ ಜಿಲ್ಲಾ ನ್ಯಾಯಾಲಯದಿಂದ ನೋಟಿಸ್ ಜಾರಿ
Published on

ಕೃಷ್ಣ ಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿರುವುದನ್ನು ತೆರವುಗೊಳಿಸುವಂತೆ ಕೋರಿ ಹಿಂದೂ ದೈವಗಳಾದ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಮತ್ತು ಆಸ್ಥಾನ ಶ್ರೀ ಕೃಷ್ಣ ಜನ್ಮಭೂಮಿಯ ಪರವಾಗಿ ವಾದಮಿತ್ರರು ಸಲ್ಲಿಸಿದ್ದ ಮನವಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದ್ದು, ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ನ್ಯಾಯಾಧೀಶರಾದ ಸಾಧನಾ ರಾಣಿ ಠಾಕೂರ್ ಅವರು ಶಾಹಿ ಈದ್ಗಾ ಮಸೀದಿ ಟ್ರಸ್ಟ್‌, ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್‌ ಮಂಡಳಿ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿದೆ. ಭಾರತ ಸಂವಿಧಾನದ 25ನೇ ವಿಧಿಯ ಅಡಿ ಮೂಲಭೂತ ಧಾರ್ಮಿಕ ಹಕ್ಕು ಕಲ್ಪಿಸಲಾಗಿದ್ದು, ಇದರ ಅನ್ವಯ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಶ್ರೀಕೃಷ್ಣನ ಭಕ್ತರಾದ ಮನವಿದಾರರು ಹೇಳಿದ್ದಾರೆ.

ದೇವರ ವಾದಮಿತ್ರರು (ನೆಕ್ಸ್ಟ್ ಆಫ್‌ ಫ್ರೆಂಡ್ಸ್) ಎನ್ನಲಾದ ರಂಜನ್ ಅಗ್ನಿಹೋತ್ರಿ, ಪ್ರವೇಶ್ ಕುಮಾರ್‌, ರಾಜೇಶ್ ಮಣಿ ತ್ರಿಪಾಠಿ, ಕರುಣೇಶ್ ಕುಮಾರ್ ಶುಕ್ಲಾ, ಶಿವಾಜಿ ಸಿಂಗ್ ಮತ್ತು ತ್ರಿಪುರಾರಿ ತಿವಾರಿ ಅವರ ಮೂಲಕ ಮನವಿ ಸಲ್ಲಿಕೆಯಾಗಿದೆ. ವಕೀಲರಾದ ಹರಿ ಶಂಕರ್ ಜೈನ್, ವಿಷ್ಣು ಜೈನ್ ಮತ್ತು ಪಂಕಜ್ ಕುಮಾರ್ ವರ್ಮಾ ಅರ್ಜಿದಾರರನ್ನು ಪ್ರತಿನಿಧಿಸಿದ್ದಾರೆ.

Also Read
ಶ್ರೀಕೃಷ್ಣ ಜನ್ಮಭೂಮಿ ವಿವಾದ: ಭೂಮಿ ಮರುಸ್ವಾಧೀನಕ್ಕಾಗಿ ಮಥುರಾ ನ್ಯಾಯಾಲಯದ ಮೆಟ್ಟಿಲೇರಿದ ಕೃಷ್ಣನ 'ವಾದ ಮಿತ್ರರು'

ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ-1991 ಅಡಿ ಅರ್ಜಿ ಒಪ್ಪಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂಬ ಕಾರಣ ನೀಡಿ ಮಥುರಾ ನ್ಯಾಯಾಲಯವು ಈಚೆಗೆ ಅರ್ಜಿಯನ್ನು ವಜಾಗೊಳಿತ್ತು. ಕತ್ರ ಕೇಶವ್ ದೇವ್‌ ನಲ್ಲಿರುವ 13.37 ಎಕರೆ ಜಮೀನು ಭಗವಾನ್ ಶ್ರೀಕೃಷ್ಣ ವಿರಾಜಮಾನ್‌ ಗೆ ಸೇರಿದ್ದಾಗಿದ್ದು, ಇದರ ಮೇಲೆ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ, ಈದ್ಗಾ ಮಸೀದಿ ಟ್ರಸ್ಟ್ ಅಥವಾ ಮುಸ್ಲಿಂ ಸಮುದಾಯದ ಯಾವುದೇ ಸದಸ್ಯರಿಗೆ ಅಧಿಕಾರವಿಲ್ಲ ಎಂಬುದು ಸುಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com