[ಆಮ್ಲಜನಕದ ಕೊರತೆ] ಕೇಂದ್ರ ಸರ್ಕಾರ ವಾಸ್ತವಕ್ಕೆ ಏಕೆ ಮುಖ ಮಾಡುತ್ತಿಲ್ಲ? ದೆಹಲಿ ಹೈಕೋರ್ಟ್‌ನಿಂದ ಕೇಂದ್ರಕ್ಕೆ ತಪರಾಕಿ

ಇದನ್ನು ಗಮನಿಸಿದರೆ ಜನರ ಜೀವಗಳು ಸರ್ಕಾರಕ್ಕೆ ಅಷ್ಟು ಮುಖ್ಯವಲ್ಲ ಎನಿಸುತ್ತದೆ. ವೈದ್ಯಕೀಯ ಆಮ್ಲಜನಕದ ಅತ್ಯಂತ ತುರ್ತು ಅಗತ್ಯತೆಯ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಎಂಬುದು ನಮಗೆ ಆಘಾತ ಉಂಟು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.
Justices Vipin Sanghi and Rekha Palli
Justices Vipin Sanghi and Rekha Palli

ದೆಹಲಿಯ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ 1,400ಕ್ಕೂ ಅಧಿಕ ಕೋವಿಡ್‌ ಸೋಂಕಿತರು ಇದ್ದು, ಅವರಿಗೆ ತುರ್ತಾಗಿ ಆಮ್ಲಜನಕ ಲಭ್ಯವಾಗುವುದನ್ನು ಖಾತರಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಯಾವುದೇ ವಿಧಾನವನ್ನಾದರೂ ಅನುಸರಿಸಿ, ಭಿಕ್ಷೆ ಬೇಡಿ, ಕಡ ತನ್ನಿ, ಕದ್ದು ತನ್ನಿ ಒಟ್ಟಿನಲ್ಲಿ ಅಮ್ಲಜನಕ ಪೂರೈಸಿ ಎಂದು ನ್ಯಾಯಾಲಯ ತೀಕ್ಷ್ಣವಾಗಿ ಕೇಂದ್ರಕ್ಕೆ ಚಾಟಿ ಬೀಸಿದೆ.

ಇಡೀ ಕೈಗಾರಿಕಾ ಉತ್ಪಾದನೆಯನ್ನು ವೈದ್ಯಕೀಯ ಬಳಕೆ ವರ್ಗಾಯಿಸಿಕೊಂಡಾದರೂ ಸರಿಯೇ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವುದನ್ನು ಖಾತರಿಪಡಿಸಬೇಕು ಎಂದು ಬುಧವಾರ ರಾತ್ರಿ 8 ಗಂಟೆಯಲ್ಲಿ ನಡೆಸಿದ ತುರ್ತು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರೇಖಾ ಪಳ್ಳಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

“ತೀರ ಅಸ್ವಸ್ಥರಾಗಿ ವೈದ್ಯಕೀಯ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಏನನ್ನಾದರೂ ಮಾಡಿ ಆಮ್ಲಜನಕ ಪೂರೈಸುವ ಮೂಲಕ ನಾಗರಿಕರ ಜೀವಿಸುವ ಹಕ್ಕನ್ನು ರಕ್ಷಿಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತಿದ್ದೇವೆ” ಎಂದು ಪೀಠ ಹೇಳಿದೆ.

Also Read
ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವುದು ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಲು ಕಾರಣಗಳೇನು?

“ಅಗತ್ಯಬಿದ್ದರೆ ಕಾರ್ಖಾನೆಗಳಿಂದ ಅದರಲ್ಲೂ ಉಕ್ಕು ಮತ್ತು ಪೆಟ್ರೋಲಿಯಂ ಸಂಸ್ಥೆಗಳಿಂದ ಇಡೀ ಪೂರೈಕೆಯನ್ನು ಕೇಂದ್ರ ಸರ್ಕಾರ ವರ್ಗಾಯಿಸಬೇಕು. ಉತ್ಪಾದನೆಯ ಸ್ಥಳದಿಂದ ಬಳಕೆಯ ಸ್ಥಳಕ್ಕೆ ರವಾನಿಸುವುದೂ ಸಹ ಸವಾಲು” ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ, ರೈಲು ಮಾರ್ಗ, ವಾಯು ಮಾರ್ಗ ಎಲ್ಲವನ್ನೂ ತುರ್ತಾಗಿ ಆಮ್ಲಜನಕ ಪೂರೈಕೆಗೆ ಬಳಸಿಕೊಳ್ಳಲು ಸೂಚಿಸಿದೆ.

“ಒಂದೆರಡು ವಾರಗಳ ಕಾಲ ನಿಮ್ಮ ಕೈಗಾರಿಕೆಗಳು (ಆಮ್ಲಜನಕ ಕಡಿಮೆಯಾದರೂ) ತಡೆಯಬಹುದು. ಈ ದಿಕ್ಕಿನಿಂದ ನೀವು ಯೋಚಿಸಿಯೇ ಇಲ್ಲ. ಇದರರ್ಥ ಜನರ ಜೀವಗಳು ಸರ್ಕಾರಕ್ಕೆ ಅಷ್ಟು ಮುಖ್ಯವಲ್ಲ ಎನಿಸುತ್ತದೆ. ವೈದ್ಯಕೀಯ ಆಮ್ಲಜನಕದ ಅತ್ಯಂತ ತುರ್ತು ಅಗತ್ಯತೆಯ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಎಂಬುದು ನಮಗೆ ಆಘಾತ ಉಂಟು ಮಾಡಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿಚಾರಣೆ ವೇಳೆ ಒಂದು ದಿನದ ಕಾಲಾವಕಾಶ ಕೋರಿದ ಸರ್ಕಾರದ ಪರ ವಕೀಲರಿಗೆ ನಾಳೆಗೆ ಮುಂದೂಡುವುದು ಸಾಧ್ಯವೇ ಇಲ್ಲ ಎಂದ ಪೀಠವು, 30 ನಿಮಿಷಗಳೊಳಗೆ ನಿಮ್ಮ ಕಾರ್ಯದರ್ಶಿಗಳು ಹಾಜರಾಗಬಹುದು. ಅಷ್ಟು ಸಮಯವನ್ನು ಮಾತ್ರವೇ ನಾವು ನೀಡುವುದು ಎಂದು ಕಟ್ಟುನಿಟ್ಟಾಗಿ ಹೇಳಿತು.

Related Stories

No stories found.
Kannada Bar & Bench
kannada.barandbench.com