ಎಂಬಿಬಿಎಸ್ ವಿದ್ಯಾರ್ಥಿಗಳ ಹೆಚ್ಚುವರಿ ಶುಲ್ಕ ಮರು ಪಾವತಿಸಲು ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿಗೆ ಹೈಕೋರ್ಟ್‌ ಆದೇಶ

ಸರ್ಕಾರ ಮತ್ತು ಕೆಇಎ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಶುಲ್ಕವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ದರದಲ್ಲಿ 2 ತಿಂಗಳ ಒಳಗೆ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು & ಆಸ್ಪತ್ರೆ ಮರು ಪಾವತಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ.
medical sector
medical sector

ಎಂಬಿಬಿಎಸ್ ಪದವಿಯ 70 ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಶುಲ್ಕವನ್ನು ಮರು ಪಾವತಿ ಮಾಡುವಂತೆ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ [ಬಿಂದುಶ್ರೀ ಜೆ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ].

ಹೆಚ್ಚುವರಿಯಾಗಿ ಸಂಗ್ರಹಿಸಿದ ಶುಲ್ಕವನ್ನು ಮರು ಪಾವತಿಸುವಂತೆ ಕಾಲೇಜಿಗೆ ನಿರ್ದೇಶಿಸಬೇಕು ಎಂದು ಕೋರಿ ಜೆ ಬಿಂದುಶ್ರೀ ಸೇರಿದಂತೆ 70 ವಿದ್ಯಾರ್ಥಿಗಳು ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಜಯ ಕುಮಾರ ಎ. ಪಾಟೀಲ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ ಶಿಫಾರಸ್ಸು ಮಾಡಿರುವಂತೆ ಅರ್ಜಿದಾರ ವಿದ್ಯಾರ್ಥಿಗಳಿಂದ 2017-18, 2018-19, 2019-20 ಮತ್ತು 2020-21ನೇ ಸಾಲಿನವರೆಗೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಶುಲ್ಕವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿದರಲ್ಲಿ ಎರಡು ತಿಂಗಳ ಒಳಗೆ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮರು ಪಾವತಿ ಮಾಡಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರ ವಿದ್ಯಾರ್ಥಿಗಳು 2017-18ನೇ ಸಾಲಿನಲ್ಲಿ ಖಾಸಗಿ ಸೀಟುಗಳ ಕೋಟಾದಡಿ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. 2023ರ ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರ ಮತ್ತು ಕೆಇಎ ನಿಗದಿಪಡಿಸಿದ್ದ ಪ್ರಮಾಣಕ್ಕಿಂತ ಅಧಿಕ ಶುಲ್ಕವನ್ನು ಪ್ರವೇಶಾತಿ ಸಂದರ್ಭದಲ್ಲಿ ಕಾಲೇಜು ತಮ್ಮಿಂದ ಸಂಗ್ರಹಿಸಿದೆ. ಆ ಹಣವನ್ನು ಮರು ಪಾವತಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್ ಇತ್ತೀಚೆಗೆ ಪುರಸ್ಕರಿಸಿದೆ.

ಹೆಚ್ಚುವರಿ ಶುಲ್ಕದ ಮರು ಪಾವತಿ ಕೋರಿ ಕಾಲೇಜಿನ ಇತರೆ ಹಲವು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಈ ಹಿಂದೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅವುಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕವನ್ನು ಹಿಂದಿರುಗಿಸುವಂತೆ 2022ರ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಕಾಲೇಜಿಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Attachment
PDF
Bindushree J and others Vs State of Karntaka and others.pdf
Preview

Related Stories

No stories found.
Kannada Bar & Bench
kannada.barandbench.com