ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಪೂರೈಸಿದವರಿಗೆ ಗ್ರಾಮೀಣ ಸೇವೆ ಇನ್ನು ಕಡ್ಡಾಯ: ಹೈಕೋರ್ಟ್‌

ವೈದ್ಯರನ್ನು ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ ವಾಸಿಸುವ ಆದಿವಾಸಿಗಳು, ಬಡವರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲಾಗಿದೆ ಎಂದಿರುವ ನ್ಯಾಯಾಲಯ.
Doctors
Doctors

ಸರ್ಕಾರಿ ಕೋಟಾದ ಅಡಿ 2022ರ ಜುಲೈ 22ರ ನಂತರ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿರುವ ಎಂಬಿಬಿಎಸ್‌ ವಿದ್ಯಾರ್ಥಿಗಳು ಪದವಿಯ ನಂತರ ಕಡ್ಡಾಯ ಗ್ರಾಮೀಣ ವೈದ್ಯಕೀಯ ಸೇವೆ ಮಾಡುವುದನ್ನು ಅಥವಾ ನಿಯಮಾವಳಿಗಳ ಅನ್ವಯ ತಾವು ನೀಡಿರುವ ಬಾಂಡ್‌ಗಳ ಜಾರಿಯನ್ನು ತಪ್ಪಿಸಿಕೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ಮಾಡಿದೆ.

ಬೆಂಗಳೂರಿನ ಡಾ.ಶರಣ್ಯಾ ಮೋಹನ್‌ ಸೇರಿದಂತೆ ರಾಜಸ್ಥಾನ, ಹರಿಯಾಣ, ಕೇರಳ, ಗುಜರಾತ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚೆನ್ನೈನ ವಿವಿಧ ಭಾಗಗಳ ಒಟ್ಟು 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದೆ.

Justice M Nagaprasanna
Justice M Nagaprasanna

“2012ರ ಜುಲೈ 17ರ ಅಧಿಸೂಚನೆಯಲ್ಲಿ ತಿದ್ದುಪಡಿ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದಾಗಿನಿಂದ ಜಾರಿಗೆ ಬರಲಿವೆ ಎಂದು ಹೇಳಲಾಗಿದೆ. ನಿಯಮಗಳು ರೂಪಿಸಿದ ಹತ್ತು ವರ್ಷಗಳ ಬಳಿಕ ಅಂದರೆ 2022ರ ಜುಲೈ 22ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಇದನ್ನು ನೋಡಿದರೆ ರಾಜ್ಯ ಸರ್ಕಾರವು ಹತ್ತು ವರ್ಷಗಳಿಂದ ಗಾಢನಿದ್ರೆಯಲ್ಲಿತ್ತು ಎಂದೆನಿಸುತ್ತದೆ” ಎಂದು ನ್ಯಾಯಾಲಯ ಕುಟುಕಿದೆ.

ಈ ಸಂಬಂಧದ ತಿದ್ದುಪಡಿಯಾದ ನಿಯಮಗಳನ್ನು 2022ರ ಜುಲೈ 27ಕ್ಕೆ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಪೀಠ ಹೇಳಿದ್ದು, ಇದಕ್ಕೂ ಮುಂಚಿನ ವಿದ್ಯಾರ್ಥಿಗಳಿ ಈ ನಿಯಮ ಅನ್ವಯವಾಗದು ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ಕೋರ್ಟ್‌ ಕಟಕಟೆ ಏರಿದ್ದ ಗೆಜೆಟ್‌ ಪ್ರಕಟಣೆಯ ಪೂರ್ವದ 447 ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯ ನಿಯಮಾವಳಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದು ಅವರಿಗೆ ಪರಿಹಾರ ಕಲ್ಪಿಸಿದೆ.

“ಬುಶ್ರಾ ಅಬ್ದುಲ್‌ ಅಲೀಮ್‌ ಪ್ರಕರಣವನ್ನು ಉಲ್ಲೇಖಿಸಿರುವ ಪೀಠವು ರಾಜ್ಯ ಸರ್ಕಾರಕ್ಕೆ ಶಾಸನಬದ್ಧ ಸಾಮರ್ಥ್ಯವಿಲ್ಲ. ಹೀಗಾಗಿ ನಿಯಮಗಳನ್ನು ಬದಿಗೆ ಸರಿಸಬೇಕು ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿದೆ. 2019ರ ಕಾಯಿದೆಯಲ್ಲಿ ಸಂವಿಧಾನದ ಏಳನೇ ಷೆಡ್ಯೂಲ್‌ನ ಲಿಸ್ಟ್‌ IIIಯ ಎಂಟ್ರಿ 25ರ ಅಡಿ ಶಿಕ್ಷಣವನ್ನು ನಿಯಂತ್ರಿಸಲು ಅಡ್ಡಿ ಮಾಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಜಗತ್ತಿನ ಯಾವುದೇ ಭಾಗದಲ್ಲಿ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡುವುದು ವೈದ್ಯಕೀಯ ವೃತ್ತಿಯಲ್ಲಿ ಹೊಸದೇನಲ್ಲ; ಹೆಸರು ಬದಲಾಗಬಹುದು ವಿಚಾರ ಒಂದೇ. ವೈದ್ಯರು ಸಮುದಾಯ/ಗ್ರಾಮೀಣ ಸೇವೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಿಗೆ ಹಲವು ಶಿಫಾರಸ್ಸುಗಳನ್ನು ಮಾಡಿದೆ” ಎಂದು ನ್ಯಾಯಾಲಯ ಹೇಳಿದೆ.

“ವೈದ್ಯರನ್ನು ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ ವಾಸಿಸುವ ಆದಿವಾಸಿಗಳು, ಬಡವರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಸಾರ್ವಜನಿಕ ಆರೋಗ್ಯ ಯೋಜನೆಯ ಭಾಗವಾಗಬೇಕು. ವೈದ್ಯಕೀಯ ಪದವೀಧರರು ಸ್ವಯಂಪ್ರೇರಿತವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ತಮ್ಮನ್ನು ತೊಡಗಿಸಕೊಳ್ಳುತ್ತಾರೆ ಎಂಬ ಕನಸು ಒಂದು ದಿನ ಸಾಕಾರವಾಗಬಹುದು. ಈ ಕನಸು ಆದಷ್ಟು ಬೇಗ ಸಾಕಾರಗೊಳ್ಳುವ ಮೂಲಕ ಸಮಸಮಾಜ ನಿರ್ಮಾಣವಾಗಬೇಕು” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2015ರಲ್ಲಿ ಅರ್ಜಿದಾರರು ಸರ್ಕಾರಿ ಕೋಟಾದಡಿ ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಈ ಮಧ್ಯೆ, ಭಾರತೀಯ ವೈದ್ಯಕೀಯ ಕೌನ್ಸಿಲ್‌ ಕಾಯಿದೆ 1956 ಅನ್ನು ಹಿಂಪಡೆಯಲಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆ 2019 ಅನ್ನು ಜಾರಿಗೆ ತರಲಾಗಿತ್ತು. ಹೀಗಾಗಿ, ಅರ್ಜಿದಾರರು ರಾಜ್ಯ ಸರ್ಕಾರಕ್ಕೆ ನಿಯಮ 11 ಅನ್ನು ಅಧಿಸೂಚನೆ ಮಾಡುವ ಶಾಸನಬದ್ಧ ಸಾಮರ್ಥ್ಯ ಇಲ್ಲ. ಇದು ಕೇಂದ್ರದ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು. ಅಲ್ಲದೇ, ಪದವಿ ಮುಗಿದ ತಕ್ಷಣ ಸ್ನಾತಕೋತ್ತರ ನೀಟ್‌ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರದ ನಿರ್ಧಾರವು ಕರ್ನಾಟಕದ ವಿದ್ಯಾರ್ಥಿಗಳಿಗೆ ಅವಕಾಶ ಸೀಮಿತಗೊಳಿಸಲಿದೆ ಎಂದು ಆಕ್ಷೇಪಿಸಿದ್ದವು.

ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ (ಕ್ಯಾಪಿಟೇಷನ್‌ ಶುಲ್ಕ ನಿಷೇಧ) ಕಾಯಿದೆಯ ಸೆಕ್ಷನ್‌ 14ರ ಅಡಿ ರಾಜ್ಯ ಸರ್ಕಾರಕ್ಕೆ ನಿಯಮ ರೂಪಿಸುವ ಅಧಿಕಾರವಿದೆ. ಹೀಗಾಗಿ, ಕರ್ನಾಟಕ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರಿ ಸೀಟುಗಳ ಅಡಿ ಅಭ್ಯರ್ಥಿಗಳ ಪ್ರವೇಶಕ್ಕೆ ಆಯ್ಕೆ ನಿಯಮ 2006ರ ನಿಯಮ 11ಕ್ಕೆ 2012ರ ಜುಲೈ 17ರಂದು ತಿದ್ದುಪಡಿ ಮಾಡಲಾಗಿದೆ. ಬಾಂಡ್‌ ಪ್ರಕಾರ ಕೋರ್ಸ್‌ ಪೂರ್ಣಗೊಂಡ ಬಳಿಕ ಒಂದು ವರ್ಷದ ಅವಧಿಗೆ ರಾಜ್ಯದ ಯಾವುದಾದರೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು. ಇದನ್ನು ಮಾಡಲು ವಿಫಲವಾದಲ್ಲಿ ಅಂಥ ವಿದ್ಯಾರ್ಥಿಗಳು 15-30 ಲಕ್ಷ ರೂಪಾಯಿ ದಂಡವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಹೇಳಲಾಗಿದೆ. 

Attachment
PDF
Dr.Sharanya Mohan Vs UoI.pdf
Preview
Kannada Bar & Bench
kannada.barandbench.com