ದೆಹಲಿ ಶಾಸನಸಭೆ ರಚಿಸಿರುವ 'ಪಾಲಿಕೆಗಳ ಸಮಿತಿ' ಅಸಿಂಧು ಮತ್ತು ಅಸಾಂವಿಧಾನಿಕ ಎಂದು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ದೆಹಲಿ ಸರ್ಕಾರದ ಮೊರೆ ಹೋಗಿದೆ. ಅಲ್ಲದೆ ದೆಹಲಿ ಸರ್ಕಾರ ಪಾಲಿಕೆಯ ಆಡಳಿತ ಕಾರ್ಯಗಳಲ್ಲಿ ಮಧ್ಯಪ್ರವೇಶಿಸದಂತೆ ತಡೆಯಬೇಕು ಎಂದು ಅದು ಕೋರಿದೆ [ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಎಂಸಿಡಿ ಕಾಯಿದೆ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರದ (ಜಿಎನ್‌ಸಿಟಿಡಿ) ನಿಯಮಾವಳಿ ಪ್ರಕಾರ ಪಾಲಿಕೆ ವ್ಯವಹಾರದ ಮೇಲ್ವಿಚಾರಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು ನ್ಯಾಯಾಲಯ ಘೋಷಿಸಬೇಕು ಎಂದು ಅದು ಕೋರಿದೆ.
ಈ ಸಂಬಂಧ ವಿಚಾರಣೆ ವೇಳೆ ನ್ಯಾ. ಯಶವಂತ್ ವರ್ಮಾ ಅವರು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಪ್ರಕರಣವನ್ನು ನ್ಯಾಯಾಲಯ ಅಕ್ಟೋಬರ್ 11ರಂದು ವಿಚಾರಣೆಗೆ ಪರಿಗಣಿಸಲಿದೆ.
ಇದೇ ವೇಳೆ ದೆಹಲಿ ಸರ್ಕಾರದ ಪರ ವಕೀಲರು ಮುಂದಿನ ವಿಚಾರಣೆಯವರೆಗೆ ವಿಧಾನಸಭೆ ಸಮಿತಿ ಪಾಲಿಕೆಯಿಂದ ಯಾವುದೇ ವಿವರ ಪಡೆಯುವುದಿಲ್ಲ ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರವು ಜಿಎನ್‌ಸಿಟಿಡಿ ಕಾಯಿದೆಗೆ ತಿದ್ದುಪಡಿ ತಂದಿದ್ದು, ಸೆಕ್ಷನ್ 33ರಲ್ಲಿ ಮಾಡಿರುವ ತಿದ್ದುಪಡಿಯ ಅನ್ವಯ ಪಾಲಿಕೆಯ ಆಡಳಿತ ವ್ಯವಹಾರಗಳಲ್ಲಿ ದೆಹಲಿ ಸರ್ಕಾರವು ನೇರವಾಗಿ ಇಲ್ಲವೇ ಸದನ ಸಮಿತಿಗಳ ಮೂಲಕ ಮಧ್ಯಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಎಂಸಿಡಿಯು ಅರ್ಜಿಯಲ್ಲಿ ವಾದಿಸಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಜೊತೆ ಸಮಾಲೋಚನೆ ಅವರಿಂದ ಅನುಮೋದನೆ ಪಡೆಯದೆ ಮತ್ತು ಭಾರತದ ರಾಷ್ಟ್ರಪತಿಗಳ ಅಂತಿಮ ಅನುಮೋದನೆ ಇಲ್ಲದೆ ಸದನದ ನಿಯಮಗಳನ್ನು ರೂಪಿಸುವಂತಿಲ್ಲ ಎಂದು ತಿದ್ದುಪಡಿ ಸ್ಪಷ್ಟವಾಗಿ ಹೇಳುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಟ್ಟಡಗಳ ವಿಚಾರ, ಪಶುವೈದ್ಯಕೀಯ ಇಲಾಖೆ, ನೀತಿಗಳು, ಕಾಮಗಾರಿ ಮಾರ್ಗಸೂಚಿಗಳು ಮತ್ತು ರಾಷ್ಟ್ರಧ್ವಜಕ್ಕೆ ಎನ್‌ಒಸಿ ನೀಡುವ ಬಗ್ಗೆ ಮಾಹಿತಿ ಕೋರಿ ಶಾಸಕಾಂಗ ಸಮಿತಿ ಜುಲೈನಲ್ಲಿ ಪತ್ರ ಬರೆದಿತ್ತು ಎಂದು ಪಾಲಿಕೆ ಬಹಿರಂಗಪಡಿಸಿದೆ. ತಾನು ಮಾಹಿತಿ ನೀಡಲು ನಿರಾಕರಿಸಿದಾಗ ಸದನದ ಸ್ಪೀಕರ್ ಮಾಹಿತಿ ಪಡೆಯಲು ತನಗೆ ಅಧಿಕಾರ ನೀಡಿದ್ದಾರೆ ಎಂಬ ನಿಲುವನ್ನು ಸರ್ಕಾರ ಪುನರುಚ್ಚರಿಸಿತು ಎಂಬುದಾಗಿ ಪಾಲಿಕೆ ದೂರಿದೆ.