ಕೋವಿಡ್: ವೃದ್ಧ ಕೈದಿಗಳ ಬಿಡುಗಡೆಗೆ ಏಕರೂಪದ ನೀತಿ ಜಾರಿಗೊಳಿಸಲು ಕೋರಿ ಸುಪ್ರೀಂಕೋರ್ಟ್‌ಗೆ ಮೇಧಾ ಪಾಟ್ಕರ್ ಮನವಿ

ವೃದ್ಧ ಕೈದಿಗಳನ್ನು ಬಿಡುಗಡೆ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಅಂತಹವರು ಪುನಾರಾವರ್ತಿತ ಅಪರಾಧಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎಂದು ಪಾಟ್ಕರ್ ವಾದಿಸಿದ್ದಾರೆ.
Medha Patkar and Supreme Court
Medha Patkar and Supreme Court
Published on

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 70 ವರ್ಷ ವಯಸ್ಸಾದ ಕೈದಿಗಳ ಬಿಡುಗಡೆ ಮಾಡುವುದಕ್ಕಾಗಿ ದೇಶಾದ್ಯಂತ ಏಕರೂಪದ ನೀತಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಹೃದಯಸಂಬಂಧಿ ಕಾಯಿಲೆ, ದೀರ್ಘಕಾಲದ ಉಸಿರಾಟದ ತೊಂದರೆ, ಮಧುಮೇಹ, ಕ್ಯಾನ್ಸರ್ ಮುಂತಾದ ವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವ ಕೈದಿಗಳಲ್ಲಿ ಕೋವಿಡ್‌ ಮಾರಕ ಪರಿಣಾಮ ಬೀರುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ವರದಿಯನ್ನು ಮೇಧಾ ಅವರ ಅರ್ಜಿ ಆಧರಿಸಿದೆ.

ಇಪ್ಪತ್ತರ ಹರೆಯದವರಿಗಿಂತಲೂ, ಎಪ್ಪತ್ತರ ಹರೆಯದ ರೋಗಲಕ್ಷಣ ಇರುವ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಇಪ್ಪತ್ತು ಪಟ್ಟು ಹೆಚ್ಚು ಇರುತ್ತದೆ ಎಂದು ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಕೋವಿಡ್‌ -19 ಸ್ಪಂದನಾ ತಂಡ ವರದಿ ಮಾಡಿದೆ ಎಂದು ವಕೀಲ ವಿಪಿನ್‌ ನಾಯರ್‌ ಮತ್ತು ಎಸ್‌ ಬಿ ತಾಳೇಕರ್‌ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ಪ್ರಮುಖ ಅಂಶಗಳು

  • ಕೈದಿಗಳ ವರ್ಗೀಕರಣ ಬಹುತೇಕ ಅವರ ಸಾಮಾಜಿಕ ಸ್ಥಿತಿ ಮತ್ತು ಆಡಳಿತಾತ್ಮಕ ಅನುಕೂಲತೆಯ ಅಂಶಗಳನ್ನು ಆಧರಿಸಿದೆ. ಕೋವಿಡ್‌ ಕಾರಣದಿಂದಾಗಿ ಕೈದಿಗಳನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್‌ ನೀಡಿದ ಆದೇಶದನ್ವಯ ವಿವಿಧ ರಾಜ್ಯಗಳು ರಚಿಸಿರುವ ಉನ್ನತಾಧಿಕಾರ ಸಮಿತಿಗಳು ಸೋಂಕಿಗೆ ಒಳಗಾಗುವ ಸಾಧ್ಯತೆ ಮತ್ತು ತುರ್ತುಪರಿಸ್ಥಿತಿಯಲ್ಲಿ ಅವರನ್ನು ಬಿಡುಗಡೆ ಮಾಡುವ ಅವಶ್ಯಕತೆ ಆಧರಿಸಿ ಕೈದಿಗಳ ವರ್ಗೀಕರಣ ಮಾಡಿಲ್ಲ.

  • ವೃದ್ಧರು ಅದರಲ್ಲಿಯೂ ಎಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.

  • ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಮಾತ್ರ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ವಯಸ್ಸಾದ ಕೈದಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

  • ಬೇರೆ ಬೇರೆ ರಾಜ್ಯಗಳ ಉನ್ನತಾಧಿಕಾರ ಸಮಿತಿಗಳು ಅನುಸರಿಸುತ್ತಿರುವ ವಿಭಿನ್ನ ವಿಧಾನಗಳಿಂದಾಗಿ ವೃದ್ಧ ಕೈದಿಗಳ ಬಿಡುಗಡೆಯಲ್ಲಿ ಏಕರೂಪತೆ ಇಲ್ಲ. ಅಲ್ಲದೆ ವಯಸ್ಸಾದ/ ವೃದ್ಧ ಕೈದಿಗಳಿರುವ ಕಾರಾಗೃಹಗಳಲ್ಲಿ ಸೆರೆವಾಸಿಗಳ ದಟ್ಟಣೆ ಕಡಿಮೆ ಮಾಡಲು ರಾಜ್ಯಗಳು ಯಾವುದೇ ಏಕರೂಪದ ಮಾನದಂಡ ಹೊಂದಿಲ್ಲ.

  • ವೃದ್ಧ ಕೈದಿಗಳನ್ನು ಬಿಡುಗಡೆ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಅಂತಹವರು ಪುನಾರಾವರ್ತಿತ ಅಪರಾಧಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ.

ಕಳೆದ ವರ್ಷ ಅನುಸರಿಸಿದ ಮಾರ್ಗಸೂಚಿಗಳನ್ನು ಪಾಲಿಸಿ ಕೈದಿಗಳಿಗೆ ಪೆರೋಲ್‌ ನೀಡುವಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠ ಮೇ 8ರಂದು ಆದೇಶಿಸಿತ್ತು. ಕೋವಿಡ್‌ ಎರಡನೇ ಅಲೆ ವೇಳೆ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಪರಿಗಣಿಸಿ ಈ ಆದೇಶ ಪ್ರಕಟವಾಗಿತ್ತು. ಕೋವಿಡ್‌ ಕಾರಣದಿಂದಾಗಿ ಕಳೆದ ವರ್ಷ ಬಿಡುಗಡೆಯಾಗಿದ್ದ ಹಾಗೂ ಸೋಂಕಿನ ಅಲೆ ಕಡಿಮೆಯಾದಾಗ ಮತ್ತೆ ಜೈಲು ಸೇರಿದ್ದ ಕೈದಿಗಳು ತಕ್ಷಣ ಬಿಡುಗಡೆಯಾಗಲು ಅರ್ಹರು ಎಂದು ಪೀಠ ತಿಳಿಸಿತ್ತು.

Kannada Bar & Bench
kannada.barandbench.com