ಅಪ್ರಾಪ್ತೆಯ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಅರ್ಜಿದಾರ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾನೆ. ಅಂತಿಮವಾಗಿ ಆಕೆಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದು ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಂದಿರುವ ಹೈಕೋರ್ಟ್‌.
Karnataka HC and Justice Rajendra Badamikar
Karnataka HC and Justice Rajendra Badamikar

ಅಪ್ರಾಪ್ತೆ ಮೇಲೆ ಎರಡು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ವೈದ್ಯಕೀಯ ವರದಿಯೂ ಸಹ ಅಪ್ರಾಪ್ತೆಯ ಕನ್ಯಾಪೊರೆಗೆ ಧಕ್ಕೆಯಾಗಿರುವುದನ್ನು ದಾಖಲಿಸಿದೆ, ಅಲ್ಲದೆ ಆಕೆಯ ದೇಹದ ಮೇಲೆ ಕಚ್ಚಿದ ಗಾಯದ ಗುರುತುಗಳು ಇರುವುದನ್ನು ತಿಳಿಸಿದೆ ಎಂದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ಏಕಸದಸ್ಯ ಪೀಠವು ಅರ್ಜಿ ವಜಾ ಮಾಡಿದೆ.

ನ್ಯಾಯಾಂಗ ಬಂಧನದಲ್ಲಿರುವ ತುಮಕೂರು ಜಿಲ್ಲೆಯ ಕೋಟಗುಡ್ಡ ಗ್ರಾಮದ ನಿವಾಸಿ 22 ವರ್ಷದ ರಾಮ್‌ ಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ಸಂತ್ರಸ್ತೆಗೆ 15 ವರ್ಷಗಳಾಗಿದ್ದು, ಅರ್ಜಿದಾರ ರಾಮ್‌ ಕುಮಾರ್‌ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಂತ್ರಸ್ತೆಯೇ ಪ್ರಮಾಣಿಕೃತ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿರುವ ಬಗ್ಗೆ ವೈದ್ಯಕೀಯ ವರದಿ ಹೇಳಿದೆ. ಆಕೆಯ ದೇಹದ ಮೇಲೆ ಕಚ್ಚಿದ ಗಾಯಗಳ ಗುರುತು ಇವೆ. ಇದರಿಂದ ಅರ್ಜಿದಾರ ಲೈಂಗಿಕ ದೌರ್ಜನ್ಯ ಎಸಗಿರುವುದು ಸ್ಪಷ್ಟವಾಗುತ್ತದೆ ಎಂದು ಆದೇಶದಲ್ಲಿ ಪೀಠ ಹೇಳಿದೆ.

ಅರ್ಜಿದಾರ ಹಾಗೂ ಮತ್ತೊಬ್ಬ ಆರೋಪಿ ನಿರಂತರವಾಗಿ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾರೆ. ಅಂತಿಮವಾಗಿ ಆಕೆಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಇದು ಗಂಭೀರ ಸ್ವರೂಪದ ಅಪರಾಧ ಕೃತ್ಯವಾಗಿದ್ದು, ವಿಚಾರಣಾಧೀನ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ವಿಚಾರಣೆಯ ಹಂತದಲ್ಲಿ ಆರೋಪಿಯು ತನ್ನನ್ನು ಸಮರ್ಥಿಸಿಕೊಳ್ಳಬಹುದಾಗಿದೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: 15 ವರ್ಷದ ಸಂತ್ರಸ್ತೆಯು 9ನೇ ತರಗತಿ ಓದುತಿದ್ದು, 2023ರ ಬೇಸಿಗೆ ರಜೆಯಲ್ಲಿ ತನ್ನ ಅಜ್ಜಿಯ ಊರಿಗೆ ಹೋಗಿದ್ದರು. 2023ರ ಜೂನ್‌ 12ರಂದು ಬೆಳಿಗ್ಗೆ ಬಹಿರ್ದೆಸೆಗೆ ಹೋಗಿದ್ದಾಗ ಆರೋಪಿಗಳು ಆಕೆಯನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಅಪಹರಿಸಿದ್ದರು ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಈ ಸಂಬಂಧ ವೈ ಎನ್‌ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2023ರ ಜೂನ್‌ 18ರಂದು ಅರ್ಜಿದಾರನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣಾಧೀನ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

ಪ್ರಕರಣ ದಾಖಲಾಗುವ ಹಿಂದಿನ ಎರಡು ವರ್ಷಗಳಿಂದಲೂ ಸಂತ್ರಸ್ತೆಗೆ ಅರ್ಜಿದಾರ ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿತ್ತು. ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ತುಮಕೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ತ್ವರಿತಗತಿ-1) ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಆರೋಪಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದನು.

Related Stories

No stories found.
Kannada Bar & Bench
kannada.barandbench.com