ವರ್ಗಾವಣೆ ಕೋರಿದ ಜಿ ಆರ್‌ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು: ಸರ್ಕಾರ, ಕೆಇಎಗೆ ಹೈಕೋರ್ಟ್‌ ನೋಟಿಸ್‌

ಅರ್ಜಿದಾರರು ತಮ್ಮ ವಿದ್ಯಾಭ್ಯಾಸ ಮುಂದುವರಿಕೆಗೆ ಅನುಕೂಲವಾಗುವಂತೆ ಯಾವುದಾದರೂ ಸರ್ಕಾರಿ ಕಾಲೇಜಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
High Court of Karnataka
High Court of Karnataka

ಕಳೆದ ಸಾಲಿನ ವೈದ್ಯಕೀಯ ಕೋರ್ಸ್‌ಗೆ ತಮ್ಮ ಪ್ರವೇಶವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಅಕ್ರಮ ಎಂದು ಸಾರಿರುವ ಹಿನ್ನೆಲೆಯಲ್ಲಿ ತಮಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿ ಮಂಗಳೂರಿನ ಜಿ ಆರ್ ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಡಿ ಎಸ್ ಧಾತ್ರಿ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಲೇಜಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 20ಕ್ಕೆ ಮುಂದೂಡಿದೆ.

ಅರ್ಜಿದಾರರು ತಮ್ಮ ವಿದ್ಯಾಭ್ಯಾಸ ಮುಂದುವರಿಕೆಗೆ ಅನುಕೂಲವಾಗುವಂತೆ ಯಾವುದಾದರೂ ಸರ್ಕಾರಿ ಕಾಲೇಜಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಜಿ ಆರ್ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ಮೂಲ ಸೌಕರ್ಯವಿಲ್ಲ ಮತ್ತು ವೈದ್ಯಕೀಯ ಶಿಕ್ಷಣ ನೀಡಲು ಕಾಲೇಜು ಕಾನೂನು ಪ್ರಕಾರ ಅರ್ಹತೆ ಹೊಂದಿಲ್ಲ ಎಂದು ಕಾಲೇಜಿನ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗವು ಕ್ರಮ ಕೈಗೊಂಡಿದೆ. ಆದರೆ, ಈ ವಿಚಾರದಲ್ಲಿ ಅರ್ಜಿದಾರರಾದ ವಿದ್ಯಾರ್ಥಿಗಳ ತಪ್ಪೇನೂ ಇಲ್ಲ, ಅವರೆಲ್ಲಾ ಮುಗ್ಧರು ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದ್ದರು.

ಬಹುತೇಕ ವಿದ್ಯಾರ್ಥಿಗಳು ಎರಡನೇ ಮಾಪಪ್ ಸುತ್ತಿನಲ್ಲಿ ಜಿ ಆರ್‌ ಕಾಲೇಜಿನಲ್ಲಿ ಸೀಟು ಪಡೆದು ಪ್ರವೇಶ ಪಡೆದಿದ್ದಾರೆ. ಆ ಸೀಟುಗಳನ್ನು ವಾಪಸ್ ಮಾಡಲಾಗದು. ಹೀಗಾಗಿ, ಸರ್ಕಾರ ಮತ್ತು ಕೆಇಎ, ಕಾಲೇಜಿಗೆ ಪ್ರವೇಶ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಅವುಗಳೇ ವಿದ್ಯಾರ್ಥಿಗಳ ಹೊಣೆಯನ್ನು ಹೊರಬೇಕು. ಅರ್ಜಿದಾರರಿಗೆ ಯಾವುದಾದರೂ ಸರ್ಕಾರಿ ಕಾಲೇಜಿನಲ್ಲಿ ಸೀಟುಗಳನ್ನು ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿದರು.

Kannada Bar & Bench
kannada.barandbench.com