ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.
ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ನಗರದ ಅಜ್ಞಾತ ಸ್ಥಳದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಒಟ್ಟು ಎಷ್ಟು ಮಂದಿ ಕೃತ್ಯ ಎಸಗಿದ್ದರು ಎಂಬ ಬಗ್ಗೆ ಕೊಂಚಮಟ್ಟಿನ ಗೊಂದಲ ಇದೆ. ಆರೋಪಿಯೊಬ್ಬ ಏಳು ಮಂದಿ ಕೃತ್ಯ ಎಸಗಿರುವುದಾಗಿ ಹೇಳಿದ್ದರೆ ವಿದ್ಯಾರ್ಥಿನಿಯ ಸ್ನೇಹಿತ ಕೃತ್ಯ ನಡೆದಾಗ ಆರು ಮಂದಿ ಪೊಲೀಸರು ಇದ್ದುದಾಗಿ ಹೇಳಿದ್ದ. ಮತ್ತೊಬ್ಬ ಆರೋಪಿಗಾಗಿ ತಮಿಳುನಾಡಿನಲ್ಲಿ ಶೋಧ ಮುಂದುವರೆದಿದೆ.
ಇತ್ತ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲು ವಿಶೇಷ ತಂಡವೊಂದು ಮೈಸೂರಿಗೆ ಆಗಮಿಸಿದ್ದು ಆರೋಪಿಗಳಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸಲಿದ್ದಾರೆ. ಮೈಸೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಯಲಿದೆ. ಇತ್ತ ಸಂತ್ರಸ್ತೆಯಿಂದ ಹೇಳಿಕೆ ಪಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ. ಇದುವರೆಗೆ ಸಂತ್ರಸ್ತೆಯ ಸ್ನೇಹಿತ ನೀಡಿದ್ದ ಮಾಹಿತಿ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಾಪರಾಧಿ ಸೇರಿದಂತೆ ಐವರನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದರು.
ಬಂಧಿತರಲ್ಲಿ ಒಬ್ಬ ಅನಕ್ಷರಸ್ಥನಾಗಿದ್ದಾನೆ. ವೃತ್ತಯಿಂದ ಅವರಲ್ಲಿ ಕೆಲವರು ವೈರಿಂಗ್, ಕಾರು ಚಾಲನೆ, ಮರಗೆಲಸ ಮಾಡುವವರಾಗಿದ್ದಾರೆ. ಆರೋಪಿಗಳ ಪೈಕಿ ಒಬ್ಬರು ಬಾಲಾಪರಾಧಿ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.