ಔಷಧಿಗಳ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುವಂತಿರಬೇಕು; ಸಣ್ಣ ಗೊಂದಲಕ್ಕೂ ಅನುಮತಿ ನೀಡಲಾಗದು ಎಂದ ದೆಹಲಿ ಹೈಕೋರ್ಟ್

ತನ್ನ ಯಾವುದೇ ಔಷಧಿಗಳ ತಯಾರಿಕೆಯಲ್ಲಿ ಕೈಂಡ್ ಎಂಬ ಪದ ಬಳಸದಂತೆ ನೊವಾಕೈಂಡ್ ಬಯೋ ಸೈನ್ಸಸ್‌ಗೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಕೋರಿ ಮ್ಯಾನ್‌ಕೈಂಡ್‌ ಫಾರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ಔಷಧಿಗಳ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುವಂತಿರಬೇಕು; ಸಣ್ಣ ಗೊಂದಲಕ್ಕೂ ಅನುಮತಿ ನೀಡಲಾಗದು ಎಂದ ದೆಹಲಿ ಹೈಕೋರ್ಟ್

ಔಷದಿಗಳ ಲೇಬಲ್‌ ಮಾಡುವಾಗ ಸಣ್ಣದೊಂದು ಗೊಂದಲ ಉಂಟಾದರೂ ಅದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್ ಮತ್ತು ನೋವಾಕೈಂಡ್‌ ಬಯೋ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ತನ್ನ ಯಾವುದೇ ಔಷಧಿಗಳ ತಯಾರಿಕೆಯಲ್ಲಿ ಕೈಂಡ್‌ ಎಂಬ ಪದ ಬಳಸದಂತೆ ನೊವಾಕೈಂಡ್‌ ಬಯೋ ಸೈನ್ಸಸ್‌ಗೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಕೋರಿ ಮ್ಯಾನ್‌ಕೈಂಡ್ ಫಾರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ವಂಚಿಸಲೆಂದೇ ವಿವಿಧ ಔಷಧಿಗಳ ನಡುವೆ ಸಾಮ್ಯತೆ ಸೃಷ್ಟಿಸಲಾಗಿದೆಯೇ ಎಂಬುದನ್ನು ಸಾಮಾನ್ಯ ಬುದ್ಧಿವಂತಿಕೆ ಇರುವ ಹಾಗೂ ಅಪೂರ್ಣ ಸ್ಮರಣಶಕ್ತಿಯ ಗ್ರಾಹಕನ ದೃಷ್ಟಿಯಿಂದ ಗಮನಿಸಬೇಕು ಎಂದು ನ್ಯಾ. ಸಿ ಹರಿಶಂಕರ್‌ ತಿಳಿಸಿದರು.

ತೀರ್ಪಿನ ಪ್ರಮುಖಾಂಶಗಳು

  • ಭಾರತದಲ್ಲಿ ಅನರ್ಹ ವ್ಯಕ್ತಿಗಳು ನಡೆಸುವ ಕಳಪೆ ದರ್ಜೆಯ ಔಷಧಾಲಯಗಳು ಇರುವುದು ದುರದೃಷ್ಟಕರ ಸಂಗತಿ.

  • ಅನೇಕ ಬಾರಿ ವೈದ್ಯಕೀಯ ಪದವಿ ಕೂಡ ಪಡೆಯದ ಚಿಕ್ಕ ಔಷಧಿ ಮಾರಾಟಗಾರ, ಬೀದಿ ಬದಿ ಪುಟ್ಟ ಅಂಗಡಿ ಇಟ್ಟುಕೊಂಡು ಔಷಧಗಳನ್ನು ವಿತರಿಸುವುದು ದೇಶದ ದುರದೃಷ್ಟವಾಗಿದೆ. ಇವು ಬಡವರು ಮತ್ತು ದುಬಾರಿ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗದವರ ʼಚಿಕಿತ್ಸಾಲಯಗಳಾಗಿವೆʼ. ಇಂತಹ ಅನೇಕ ʼವೈದ್ಯರುʼಗಳು ಔಷಧ ತಯಾರಕರನ್ನು ಆಧರಿಸಿ ಔಷಧಗಳನ್ನು ನೀಡುತ್ತಾರೆ.

  • ನೋವಾಕೈಂಡ್‌ ಉತ್ಪನ್ನಗಳು ಮ್ಯಾನ್‌ಕೈಂಡ್‌ ಔಷಧದಂತೆಯೇ ಇವೆ ಎಂದು ಸಾಮಾನ್ಯ ಬುದ್ಧಿಮತ್ತೆ ಹಾಗೂ ಅಪೂರ್ಣ ಸ್ಮರಣೆ ಹೊಂದಿರುವ ಗ್ರಾಹಕ ನಂಬುವ ಸಾಧ್ಯತೆ ಇದೆ.

  • ಟ್ರೇಡ್‌ಮಾರ್ಕ್ ಉಲ್ಲಂಘನೆ ನಡೆದಿದೆ ಎನ್ನಲು ಅಂತಹ ಸಾಧ್ಯತೆ ಸಾಕಾಗುತ್ತದೆ.

  • ಕೆಲಸ ತಿಳಿದ ವ್ಯಕ್ತಿಗಳೇ ಔಷಧ ನೀಡುತ್ತಾರೆ ಎಂಬ ನೋವಾಕೈಂಡ್‌ನ ವಾದ ಒಪ್ಪುವಂಥದ್ದಲ್ಲ. ಸಾಮಾನ್ಯವಾದ ಕೈಂಡ್‌ ಎಂಬ ಪದ ಪ್ರತ್ಯಯದಿಂದಾಗಿ ವೈದ್ಯ ಅಥವಾ ರಸಾಯನಶಾಸ್ತ್ರಜ್ಞ ಕೂಡ ಗೊಂದಲಕ್ಕೊಳಗಾಗಬಹುದು.

  • ಔಷಧಗಳಿಗೆ ಸಂಬಂಧಿಸಿದ ಮಾರ್ಗದರ್ಶಿ ತತ್ವ ಎಂದರೆ ಸಣ್ಣ ಗೊಂದಲಕ್ಕೂ ಆಸ್ಪದ ನೀಡಬಾರದು. ಹೀಗಾಗಿ ಔಷಧಗಳು ಅದರಲ್ಲಿಯೂ ಸೂಚಿಸಲಾದ ಔಷಧಗಳ ವ್ಯತ್ಯಾಸ ಒಂದಕ್ಕೊಂದು ಸ್ಪಷ್ಟವಾಗಿ ತಿಳಿಯುವಂತಿರಬೇಕು.

ಹೀಗಾಗಿ ತಾನು ಈ ಹಿಂದೆ ಏಕಪಕ್ಷೀಯವಾಗಿ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಶಾಶ್ವತಗೊಳಿಸಿದ ನ್ಯಾಯಾಲಯ ನೋವಾಕೈಂಡ್‌ ಅರ್ಜಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com