ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ ತಯಾರಕರೊಂದಿಗೆ ಮುಂದಿನ ವಾರ ಸಭೆ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

“ಈ ತಿಂಗಳಲ್ಲಿ ಸಭೆ ನಿದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಎಲ್ಲ ಪಾಲುದಾರರನ್ನು ಸಭೆಗೆ ಆಹ್ವಾನಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದ್ದರಿಂದ, ಮುಂದಿನ ವಾರ ಸಭೆ ನಡೆಸಲಾಗುವುದು” ಎಂದು ತಿಳಿಸಿದ ಸರ್ಕಾರದ ವಕೀಲರು.
High Court of Karnataka
High Court of Karnataka
Published on

ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ - ಎಚ್‌ಎಸ್‌ಆರ್‌ಪಿ) ತಯಾರಕರಿಗೆ ಅನುಮತಿ ನೀಡುವ ಕುರಿತು ಅರ್ಜಿದಾರರು ಸೇರಿದಂತೆ ಸಂಬಂಧಪಟ್ಟ ಪಾಲುದಾರರೊಂದಿಗೆ ಮುಂದಿನ ವಾರ ಸಭೆ ನಡೆಸಿ, ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸುವುದಾಗಿ ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಎಚ್​ಎಸ್​ಆರ್‌ಪಿ ತಯಾರಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​. ದೀಕ್ಷಿತ್​ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆಯನ್ನು ಡಿಸೆಂಬರ್​ 6ಕ್ಕೆ ಮುಂದೂಡಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ‌ ಹೆಚ್ಚುವರಿ ಅಡ್ವೋಕೇಟ್​ ಜನರಲ್‌ ವಿಕ್ರಂ ಹುಯಿಲಗೋಳ ಅವರು “ಈ ತಿಂಗಳಲ್ಲಿ ಸಭೆ ನಿದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಎಲ್ಲ ಪಾಲುದಾರರನ್ನು ಸಭೆಗೆ ಆಹ್ವಾನಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದ್ದರಿಂದ, ಮುಂದಿನ ವಾರ ಸಭೆ ನಡೆಸಲಾಗುವುದು” ಎಂದು ಮಾಹಿತಿ ನೀಡಿದರು.

ಎಚ್​ಎಸ್​ಆರ್​ಪಿ ತಯಾರಕರ ಸಂಘದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು, ಸರ್ಕಾರ ನಡೆಸುವ ಸಭೆಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರನ್ನು ಸೇರಿಸಿ ಸಭೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೂ, ಸಭೆಗೆ ಯಾವುದೇ ಪಾಲುದಾರರನ್ನು ಸರ್ಕಾರ ಆಹ್ವಾನಿಸಿಲ್ಲ ಎಂದು ವಿವರಿಸಿದರು.

ಪ್ರಕರಣದ ಹಿನ್ನೆಲೆ: 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಿಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿದ್ದ ಭಾರತೀಯ ಅತಿ ಸುರಕ್ಷಿತ ನಂಬರ್ ಫಲಕಗಳ ಉತ್ಪಾದಕರ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿ, ಕೆಲ ಕಂಪೆನಿಗಳಿಗೆ ಮಾತ್ರ ನಂಬರ್‌ ಪ್ಲೇಟ್ ಉತ್ಪಾದನೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಇತರರಿಗೆ ಅವಕಾಶ ನೀಡಿಲ್ಲ. ಹೀಗಾಗಿ ಅಧಿಸೂಚನೆಗೆ ತಡೆ ನೀಡಬೇಕು ಎಂದು ಕೋರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಒಕ್ಕೂಟದ ಮನವಿಯನ್ನು ತಿರಸ್ಕರಿಸಿದ್ದು, ನಂಬರ್ ಫಲಕ ಉತ್ಪಾದನೆ ಮಾಡುವುದಕ್ಕೆ ಪರವಾನಿಗೆ ಹೊಂದಿರುವ ಎಲ್ಲ ಕಂಪೆನಿಗಳನ್ನು ಪರಿಗಣಿಸಿ ನಿಯಮಗಳ ಪ್ರಕಾರ ಮುಂದಿನ 15 ದಿನಗಳಲ್ಲಿ ಉತ್ಪಾದಕರನ್ನು ಅಂತಿಮ ಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿತ್ತು. ಈ ಆದೇಶವನ್ನು ದ್ವಿಸದಸ್ಯ ಪೀಠ ಅಮಾನತ್ತಿನಲ್ಲಿಟ್ಟಿದೆ.

Kannada Bar & Bench
kannada.barandbench.com