ಮೆಗಾಸಿಟಿ ಹಣ ದುರ್ಬಳಕೆ: ಅಧೀನ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಮಾಜಿ ಸಚಿವ ಯೋಗೇಶ್ವರ್‌ ಅರ್ಜಿಗಳು ವಜಾ

ಮೆಗಾಸಿಟಿ ಡೆವಲಪರ್ಸ್‌ ಮತ್ತು ಬಿಲ್ಡರ್ಸ್‌ ಲಿಮಿಟೆಡ್‌ನ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಲಾಗಿದೆ. ಕಂಪೆನಿಯನ್ನು ಹೊರತುಪಡಿಸಿ ಪ್ರಕ್ರಿಯೆ ಮುಂದುವರಿಸಲಾಗದು ಎಂದಿರುವ ಹೈಕೋರ್ಟ್‌.
C P Yogeshwara and Karnataka HC
C P Yogeshwara and Karnataka HC

ಮೆಗಾಸಿಟಿ ಹಣ ದುರ್ಬಳಕೆ ಹಗರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯಲ್ಲಿ ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್‌ ಮತ್ತು ಬಿಲ್ಡರ್ಸ್‌ ಲಿಮಿಟೆಡ್‌ ಅನ್ನು ಪಕ್ಷಕಾರರನ್ನಾಗಿಸಲು ಅನುಮತಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ ಪಿ ಯೋಗೇಶ್ವರ್‌ ಅವರು ಸಲ್ಲಿಸಿದ್ದ ಎಂಟು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಸಲ್ಲಿಸಿದ್ದ ಅರ್ಜಿಗಳನ್ನು 2022ರ ಜುಲೈ 8ರಂದು ಮಾನ್ಯ ಮಾಡಿದ್ದ ಬೆಂಗಳೂರಿನ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಂಪೆನಿಯ ನಿರ್ದೇಶಕರಾಗಿರುವ ಬಿಜೆಪಿ ಮುಖಂಡ ಯೋಗೇಶ್ವರ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

“ಮೆಗಾಸಿಟಿಯು ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳು ಇದ್ದು, ಸುಪ್ರೀಂ ಕೋರ್ಟ್‌ ರೂಪಿಸಿರುವ ನಿಯಮದ ಪ್ರಕಾರ ಸಂಬಂಧಿತ ನ್ಯಾಯಾಲಯದಲ್ಲಿ ಮೆಗಾಸಿಟಿ ಆರೋಪಿಯನ್ನಾಗಿಸಬೇಕಿದೆ. ಮೆಗಾಸಿಟಿ ಡೆವಲಪರ್ಸ್‌ ಮತ್ತು ಬಿಲ್ಡರ್ಸ್‌ ಲಿಮಿಟೆಡ್‌ನ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಲಾಗಿದೆ. ಕಂಪೆನಿಯನ್ನು ಹೊರತುಪಡಿಸಿ ಪ್ರಕ್ರಿಯೆ ಮುಂದುವರಿಸಲಾಗದು. ಹೀಗಾಗಿ, ಸಂಬಂಧಿತ ನ್ಯಾಯಾಲಯವು ಮೆಗಾಸಿಟಿಯನ್ನು ಪಕ್ಷಕಾರರನ್ನಾಗಿಸುವ ಅರ್ಜಿಯನ್ನು ಮಾನ್ಯ ಮಾಡಿರುವುದು ಸರಿಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 1994-95ರಲ್ಲಿ ಆರಂಭಿಸಿದ್ದ ವಜ್ರಗಿರಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಯೋಜನೆ ಆರಂಭವಾದಾಗ 3,100 ಮಂದಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಭೂಮಿಯ ದರ ಹೆಚ್ಚಳ ಮತ್ತು ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಗೆ ಭೂಸ್ವಾಧೀನ ಸೇರಿದಂತೆ ಹಲವು ಕಾರಣಗಳಿಗಾಗಿ ವಜ್ರಗಿರಿ ಟೌನ್‌ಶಿಪ್‌ ಯೋಜನೆಯ ಅಡಿ 1,360 ವಸತಿ ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಲು ಸಾಧ್ಯವಾಗಿದ್ದು, ವಿವಿಧ ನ್ಯಾಯಾಲಯಗಳ ಆದೇಶದ ಅನ್ವಯ 1,030 ಅರ್ಜಿದಾರರಿಗೆ ಬಡ್ಡಿ ಸಮೇತ ಹಣವನ್ನು ಮರುಪಾವತಿಸಲಾಗಿತ್ತು.

ಇದನ್ನು ಆಧರಿಸಿ, ಮೆಗಾಸಿಟಿ ಕಂಪೆನಿಯು ಅರ್ಜಿದಾರರಿಂದ 60 ಕೋಟಿ ರೂಪಾಯಿ ಸಂಗ್ರಹಿಸಿತ್ತು ಎಂದು ಎಸ್‌ಎಫ್‌ಐಒ ಪ್ರಕರಣ ದಾಖಲಿಸಿದೆ. ಈ ಪೈಕಿ 3.03 ಕೋಟಿ ಹಣವನ್ನು ಚನ್ನಪಟ್ಟಣದಲ್ಲಿ ಕಟ್ಟಡ ನಿರ್ಮಿಸಿ ಅದನ್ನು ಫ್ಯಾಷನ್‌ ಫೋರಂ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ಗೆ ಬಾಡಿಗೆ ನೀಡಲಾಗಿದೆ. ಈ ಕಂಪೆನಿಯಲ್ಲಿ ಯೋಗೇಶ್ವರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ವಜ್ರಗಿರಿ ಟೌನ್‌ಶಿಪ್‌ ಯೋಜನೆಯಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು.

ವಜ್ರಗಿರಿ ಟೌನ್‌ಶಿಪ್‌ ಯೋಜನೆಯಲ್ಲಿ ಮೆಗಾಸಿಟಿ ಡೆವಲಪರ್ಸ್‌ ಮತ್ತು ಬಿಲ್ಡರ್ಸ್‌ ಲಿಮಿಟೆಡ್‌ ಅನ್ನು ಆರೋಪಿಯನ್ನಾಗಿ ಮಾಡುವ ಅಗತ್ಯವಿರಲಿಲ್ಲ. ಹಾಲಿ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 319ರ ಅಡಿ ಅಧಿಕಾರ ಚಲಾಯಿಸಬಾರದಿತ್ತು ಎಂಬುದು ಯೋಗೇಶ್ವರ್‌ ಅವರ ವಾದವಾಗಿತ್ತು.

ಅರ್ಜಿದಾರ ಸಿ ಪಿ ಯೋಗೇಶ್ವರ್‌ ಪರವಾಗಿ ಹಿರಿಯ ವಕೀಲ ಕಿರಣ್‌ ಎಸ್‌. ಜವಳಿ ಹಾಗೂ ಎಸ್‌ಎಫ್‌ಐಒ ಪರವಾಗಿ ಕೇಂದ್ರ ಸರ್ಕಾರದ ವಿಶೇಷ ವಕೀಲ ಮಧುಕರ್‌ ದೇಶಪಾಂಡೆ ವಾದಿಸಿದ್ದರು.

Attachment
PDF
C P Yogeshwara Vs Serious Fraud Investigation office and others.pdf
Preview

Related Stories

No stories found.
Kannada Bar & Bench
kannada.barandbench.com