ಮೇಕೆದಾಟು ಪಾದಯಾತ್ರೆ: ಎಂಟೂ ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಡಿಸಿಎಂ ಶಿವಕುಮಾರ್‌

ಪಾದಯಾತ್ರೆ ನಡೆಸಲು ಸರ್ಕಾರಿ ಪ್ರಾಧಿಕಾರಗಳೇ ಅನುಮತಿ ನೀಡಿವೆ. ಅದಕ್ಕೆ ದಾಖಲೆಗಳೂ ಇವೆ. ಆದರೂ ದೂರು ದಾಖಲಿಸಿರುವುದು ಕಾನೂನುಬಾಹಿರ. ಆದ್ದರಿಂದ, ಎಲ್ಲಾ ದೂರುಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Congress Leaders And Supporters During Mekedatu padayatra In Karnataka
Congress Leaders And Supporters During Mekedatu padayatra In Karnataka

ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ವೇಳೆ ಕೊರೊನಾ ನಿಯಮ ಉಲ್ಲಂಘಿಸಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಂಟು ದೂರುಗಳನ್ನು ರದ್ದುಪಡಿಸುವಂತೆ ಕೋರಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ದೂರುಗಳ ರದ್ದತಿ ಕೋರಿ ಪ್ರತ್ಯೇಕವಾಗಿ ಸಲ್ಲಿಸಿರುವ ಎಂಟು ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿಗಳಿಗೆ ಸಂಬಂಧಿಸಿದಂತೆ ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ನ್ಯಾಯಮೂರ್ತಿಗಳು ಗಮನಿಸಿದರು. ಇದರಿಂದ ಕಚೇರಿ ಆಕ್ಷೇಪಣೆಗಳನ್ನು ಸರಿ ಪಡಿಸುವಂತೆ ಶಿವಕುಮಾರ್ ಪರ ವಕೀಲ ಅರ್ನವ್‌ ಬಾಗಲವಾಡಿ ಅವರಿಗೆ ಸೂಚನೆ ನೀಡಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು 2022ರ ಜನವರಿ 9ರಿಂದ 10 ದಿನ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ವಿರುದ್ಧ ಸಾತನೂರು, ಉಪ್ಪಾರಪೇಟೆ, ಹಲಸೂರು ಗೇಟ್ ಮತ್ತು ಇಜೂರು ಪೊಲೀಸ್ ಠಾಣೆಗಳಲ್ಲಿ ಎಂಟು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಈ ಎಲ್ಲಾ ದೂರುಗಳನ್ನು ರದ್ದುಪಡಿಸುವಂತೆ ಕೋರಿ ಡಿ ಕೆ ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸಾಂಕ್ರಾಮಿಕ ರೋಗಗಳ ತಡೆ ಕಾಯಿದೆಯ ನಿಯಮಗಳನ್ನು ಸೂಕ್ತ ಅಧಿಸೂಚನೆ ಹೊರಡಿಸದೆ ಜಾರಿಗೊಳಿಸಲು ಅವಕಾಶವಿಲ್ಲ. ಹೀಗಿದ್ದರೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯಿದೆ ಅಡಿ ಜಾರಿ ಮಾಡಲಾಗಿದ್ದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ಪಾದಯಾತ್ರೆ ನಡೆಸಲು ಸರ್ಕಾರಿ ಪ್ರಾಧಿಕಾರಗಳೇ ಅನುಮತಿ ನೀಡಿವೆ. ಅದಕ್ಕೆ ದಾಖಲೆಗಳೂ ಇವೆ. ಆದರೂ ದೂರು ದಾಖಲಿಸಿರುವುದು ಕಾನೂನುಬಾಹಿರ. ಆದ್ದರಿಂದ, ಎಲ್ಲಾ ದೂರುಗಳನ್ನು ರದ್ದುಪಡಿಸುವಂತೆ ಡಿ ಕೆ ಶಿವಕುಮಾರ್ ಅರ್ಜಿಯಲ್ಲಿ ಕೋರಿದ್ದಾರೆ.

Also Read
[ಮೇಕೆದಾಟು] ಕೋವಿಡ್‌ ನಿಯಮ ಉಲ್ಲಂಘನೆ; ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರ ವಿರುದ್ದದ ಆರೋಪ ಪಟ್ಟಿಗೆ ಹೈಕೋರ್ಟ್‌ ತಡೆ

ಮೇಕುದಾಟು ಪಾದಯಾತ್ರೆಯಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಶಾಸಕ ಟಿ ಬಿ ಜಯಚಂದ್ರ ಸೇರಿದಂತೆ ಕಾಂಗ್ರೆಸ್‌ನ 31 ಮುಖಂಡರ ವಿರುದ್ಧ ರಾಮನಗರ ತಹಶೀಲ್ದಾರ್ ಜನವರಿ 15ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರ ತನಿಖೆ ನಡೆಸಿದ್ದ ಪೊಲೀಸರು, ಫೆಬ್ರವರಿ 9ರಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಆರೋಪ ಪಟ್ಟಿಗೆ ಹೈಕೋರ್ಟ್, 2022ರ ಜೂನ್‌ 28ರಂದು ತಡೆಯಾಜ್ಞೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com