ಅನವಶ್ಯಕವಾಗಿ ಸೇನೆಯ ಸದಸ್ಯರಿಗೆ ಕಿರುಕುಳ ನೀಡುವಂತಿಲ್ಲ, ನ್ಯಾಯಾಂಗದ ಸುತ್ತ ಗಿರಕಿ ಹೊಡೆಸುವಂತಿಲ್ಲ: ದೆಹಲಿ ಹೈಕೋರ್ಟ್

ಅರ್ಜಿದಾರರಿಗೆ ಪ್ರಮಾಣಾನುಗುಣವಾಗಿ ಪಿಂಚಣಿ ನೀಡುವುದಕ್ಕೆ ನಿರಾಕರಿಸಿರುವ ಭಾರತೀಯ ವಾಯು ಸೇನೆಯ ನಿಲುವು ನಿವೃತ್ತರಿಗೆ ಕಿರುಕುಳ ನೀಡುವ ಕ್ರಮವಾಗಿದ್ದು, ನ್ಯಾಯಾಲಯ ಪ್ರಕ್ರಿಯೆಯ ನಿಂದನೆಯಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
Indian Soldiers, Armed Forces
Indian Soldiers, Armed Forces

ಭಾರತೀಯ ಸೇನೆಯ ಸದಸ್ಯರಿಗೆ ಅನವಶ್ಯವಕಾಗಿ ಕಿರುಕುಳ ನೀಡಬಾರದು ಮತ್ತು ಒಂದು ನ್ಯಾಯಿಕ ವೇದಿಕೆಯಿಂದ ಮತ್ತೊಂದು ವೇದಿಕೆಗೆ ಪಿಂಗ್‌ ಪಾಂಗ್‌ ರೀತಿಯಲ್ಲಿ ಅವರನ್ನು ಅಲೆಸಬಾರದು ಎಂದು ಈಚೆಗೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ರಾಜೀವ್‌ ಸಹಾಯ್‌ ಎಂಡ್‌ಲಾ ಮತ್ತು ಆಶಾ ಮೆನನ್‌ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ (ಬ್ರಿಜ್ಲಾಲ್‌ ವರ್ಸಸ್‌ ಭಾರತ ಸರ್ಕಾರ).

“ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಶಪಥವನ್ನು ಸೇನೆಯ ಸಿಬ್ಬಂದಿ ಕೈಗೊಳ್ಳುತ್ತಾರೆ. ಇಂಥ ವಿಶಿಷ್ಟ ಸಮುದಾಯಕ್ಕೆ ವಿಶೇಷ ಗೌರವ ನೀಡಬೇಕಿದೆ. ಅನವಶ್ಯಕವಾಗಿ ಅವರಿಗೆ ಕಿರುಕುಳ ನೀಡಬಾರದು ಮತ್ತು ಟೇಬಲ್‌ ಟೆನಿಸ್‌ ಕೋರ್ಟ್‌ನಲ್ಲಿ ಚೆಂಡನ್ನು‌ ವರ್ಗಾಯಿಸುವಂತೆ ಅವರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಅಲೆಸಬಾರದು” ಎಂದು ನ್ಯಾಯಪೀಠ ಹೇಳಿದೆ.

ಸೇನಾ ಪಡೆಗಳ ನ್ಯಾಯಾಧಿಕರಣವು (ಎಎಫ್‌ಟಿ) ಹೈಕೋರ್ಟ್‌ ಆದೇಶಿಕ ತತ್ವಗಳ ಅನ್ವಯ ಕ್ರಮಕೈಗೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ರಕ್ಷಣಾ ಕ್ಷೇತ್ರದ ನಾನ್‌ ಕಮಿಷನ್ಡ್‌ ಅಧಿಕಾರಿ/ಅಧಿಕಾರಿ ಶ್ರೇಣಿಯಿಂದ ಕೆಳಗಿರುವ ಸಿಬ್ಬಂದಿಗಳನ್ನು (ಎನ್‌ಸಿಒ/ಪಿಬಿಒಆರ್‌ಗಳು) ಹೊರತುಪಡಿಸಿ ಕಮಿಷನ್ಡ್‌ ಅಧಿಕಾರಿಗಳಿಗೆ ಮಾತ್ರ ರಕ್ಷಣಾ ಇಲಾಖೆಯ ಲಾಭಗಳನ್ನು ಪ್ರಮಾಣಾನುಗುಣವಾಗಿ ನೀಡುವ ಕುರಿತು ಕೇಂದ್ರ ರಕ್ಷಣಾ ಇಲಾಖೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಭಾರತೀಯ ಸೇನೆಗೆ ಏರ್ಮೆನ್‌/ಕಾರ್ಪೊರಲ್‌ಗಳಾಗಿ ಸೇರ್ಪಡೆಯಾದ ಎನ್‌ಸಿಒ/ಪಿಬಿಒಆರ್‌ಗಳು ಮನವಿದಾರರಾಗಿದ್ದಾರೆ.

ಸರ್ಕಾರ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಬಾಕಿ ಇರುವ ಮನವಿಗಳನ್ನು ಎಎಫ್‌ಟಿಗೆ ವರ್ಗಾಯಿಸುವಂತೆ ಕೋರಿದ್ದ ಕೇಂದ್ರ ಸರ್ಕಾರದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ದೇಶಕ್ಕಾಗಿ ಜೀವವನ್ನೇ ಒತ್ತೆ ಇಡುವ ಶಪಥ ಮಾಡುವ ಅರ್ಜಿದಾರರ ಮನವಿಯನ್ನು ಪರಿಗಣಿಸಿರುವ ಪೀಠವು ಹೀಗೆ ಹೇಳಿದೆ:

“ಸದರಿ ಮನವಿಗಳಲ್ಲಿ ಅರ್ಜಿದಾರರಾಗಿರುವ ಎಲ್ಲರೂ ಸಶಸ್ತ್ರ ಪಡೆಗಳ ಸದಸ್ಯರಾಗಿದ್ದು, ಭಾರತೀಯ ಸಂವಿಧಾನ ಮತ್ತು ಕಾನೂನಿನ ಅನ್ವಯ ರಾಷ್ಟ್ರಪತಿಗಳು ಅಥವಾ ಸೇನಾ ಸಿಬ್ಬಂದಿಯ ಮೇಲಧಿಕಾರಿ ನೀಡುವ ಆಜ್ಞೆಯನ್ನು ಪಾಲಿಸಲು ತಮ್ಮ ಜೀವವನ್ನು ಒತ್ತೆ ಇಡುತ್ತಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರುಗಳು, ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಇವರಾರೂ ತೆಗೆದುಕೊಳ್ಳದ ದೇಶಕ್ಕಾಗಿ ಜೀವವನ್ನೇ ಸಮರ್ಪಿಸುವ ಪ್ರಮಾಣವನ್ನು ಅವರು ಕೈಗೊಳ್ಳುತ್ತಾರೆ".

ಎನ್‌ಸಿಒಗಳಿಗೆ ಅದೇ ಪ್ರಮಾಣದಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಲು ಐಎಎಫ್‌ ನಿರಾಕರಿಸಿರುವುದು ನ್ಯಾಯಾಲಯ ಜಾರಿಗೊಳಿಸಿರುವ ಕಾನೂನುಗಳ ಉಲ್ಲಂಘನೆಯಾಗಿದ್ದು, ಕಿರುಕುಳ ನೀಡುವ ಕ್ರಮವಾಗಿದೆ ಎಂದು ಹೇಳಿದೆ.

"ನಿವೃತ್ತ ಸೇನಾ ಸಿಬ್ಬಂದಿಗೆ ಕಿರುಕುಳ ನೀಡುವ ಈ ಕ್ರಮವು ಅವರಿಗೆ ನೀಡಲಾಗಿರುವ ಪ್ರಮಾಣವನ್ನು ಮರೆಯುವಂತಹದ್ದಾಗಿದೆ. ತಾವು ತೆಗೆದುಕೊಂಡ ಪ್ರತಿಜ್ಞಾವಿಧಿಯನ್ನು ಅವರು (ಸೇನಾ ಸಿಬ್ಬಂದಿ) ಪೂರೈಸುವಂತೆ ಒತ್ತಾಯಿಸಲಾಗುತ್ತದೆ. ಆದರೆ, ಮತ್ತೊಂದೆಡೆ ಅರ್ಜಿದಾರರು ಸದರಿ ನ್ಯಾಯಾಲಯವನ್ನು ಒಂದೇ ವಿಚಾರವಾಗಿ ಪದೇಪದೇ ಎಡತಾಕುವಂತೆ ಮಾಡಲಾಗುತ್ತಿದೆ, ಪ್ರತಿವಾದಿಯಾದ ಐಎಎಫ್‌ನ ಈ ಕ್ರಮವು ನ್ಯಾಯಾಲಯ ಪ್ರಕ್ರಿಯೆಯ ನಿಂದನೆಯಾಗಿದೆ” ಎಂದು ಹೇಳಿದೆ.

“ಎಎಫ್‌ಟಿ ಆದೇಶಗಳು ಈ ನ್ಯಾಯಾಲಯದ ಪರಿಶೀಲನೆಗೆ ಒಳಪಟ್ಟಿವೆ ಎಂದ ಮೇಲೆ, ಮತ್ತೆ ಮತ್ತೆ ಎಎಫ್‌ಟಿ ಹೈಕೋರ್ಟ್‌ಗಳ ಆದೇಶಗಳನ್ನು ಉಲ್ಲಂಘಿಸಿ ಅದೇ ಅದೇಶಗಳನ್ನು ಹೊರಡಿಸುವುದು ಗೊಂದಲಕ್ಕೆ ನಾಂದಿಯಾಗುತ್ತದೆ. ಇದು ನ್ಯಾಯಾಧಿಕರಣದ (ಎಎಫ್‌ಟಿ) ಆದೇಶಗಳನ್ನು ಸಂವಿಧಾನದ 226ನೇ ವಿಧಿಯ ಅನ್ವಯ ಪ್ರಾಥಮಿಕವಾಗಿ ಕಾನೂನು ಬಾಹಿರ ಎಂದು ಅರ್ಜಿ ಸಲ್ಲಿಸುವುದಕ್ಕೆ ಕಾರಣವಾಗುವುದರೊಟ್ಟಿಗೆ, ತ್ವರಿತ ವಿಲೇವಾರಿ ಉದ್ದೇಶದಿಂದ ಸ್ಥಾಪಿಸಲಾದ ನ್ಯಾಯಾಧಿಕರಣದ ಉದ್ದೇಶಕ್ಕೇ ಹಿನ್ನಡೆ ಉಂಟು ಮಾಡುತ್ತದೆ,” ಎಂದು ಹೇಳಿದೆ.

ನಿರ್ದಿಷ್ಟ ಅವಧಿಯಲ್ಲಿ ಅರಿಯರ್ಸ್‌ ರೂಪದಲ್ಲಿ ಪ್ರಮಾಣಾನುಗುಣವಾಗಿ ಪಿಂಚಣಿ ಪಾವತಿಸುವಂತೆ ಭಾರತೀಯ ವಾಯುಸೇನೆಗೆ ನ್ಯಾಯಾಲಯ ನಿರ್ದೇಶಿಸಿದೆ.

Related Stories

No stories found.
Kannada Bar & Bench
kannada.barandbench.com