ನಕಲಿ ಭದ್ರತೆ (ಶೂರಿಟಿ) ನೀಡುವವರ ಹಾವಳಿ ತಪ್ಪಿಸಲು, ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಸಂಬಂಧ ನೀಡಲಾಗುವ ಯಾವುದೇ ಭದ್ರತೆಯನ್ನು ಒಪ್ಪುವುದಕ್ಕೂ ಮುನ್ನ ಪಾಲಿಸಬೇಕಾದ ನಿಯಮಗಳ ಕುರಿತು ಹಲವು ಮಹತ್ವದ ನಿರ್ದೇಶನಗಳನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ನೀಡಿದೆ.
ಮಂಡ್ಯ ಜಿಲ್ಲೆಯ ಬಿ ನಾರಾಯಣ ಮತ್ತು ಜಯಚಂದ್ರ ಬಾಬು ಎಚ್ ಎನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ನಕಲಿ ಭದ್ರತೆ ವಿಚಾರದಲ್ಲಿ ಪರಿಣಾಮಕಾರಿ ಕ್ರಮಕೈಗೊಳ್ಳದಿದ್ದರೆ ಮುಗ್ಧರಾದ ಮೂರನೇ ವ್ಯಕ್ತಿಗಳು ಅಪಾಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಾಲಯವು ಹೇಳಿದ್ದು, ಅರ್ಜಿದಾರ ನಾರಾಯಣ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಕೆಳಗಿನ ನಿರ್ದೇಶನಗಳನ್ನು ನೀಡಿ ಅರ್ಜಿ ವಿಲೇವಾರಿ ಮಾಡಿದೆ.
ಪ್ರತಿ ಸಾಲ ತೀರಿಕೆ ಸಾಮರ್ಥ್ಯ (ಸಾಲ್ವೆನ್ಸಿ) ಸರ್ಟಿಫಿಕೇಟ್‌ನಲ್ಲಿ ಸಂಬಂಧಪಟ್ಟ ಇಲಾಖಾ ಪ್ರಮುಖರ ಸಹಿ, ಹೆಸರು, ಹುದ್ದೆಯ ಸ್ಟ್ಯಾಂಪ್ ಮತ್ತು ಅದನ್ನು ನೀಡಲಾದ ದಿನಾಂಕ ಇರಬೇಕು. ಅಸಲಿ ಸಾಲ್ವೆನ್ಸಿ ಸರ್ಟಿಫಿಕೇಟ್ ಮಾತ್ರ ಪರಿಗಣಿಸಲಾಗುವುದು.
ಸಾಲ್ವೆನ್ಸಿ ಸರ್ಟಿಫಿಕೇಟ್‌ನಲ್ಲಿ ಸಂಬಂಧ ಪಟ್ಟ ಇಲಾಖೆಯು ಭದ್ರತೆ ನೀಡುವವರ ಫೋಟೊ, ಸಹಿ ಅಥವಾ ಸ್ಪಷ್ಟವಾದ ಬೆರಳಿನ ಗುರುತು ಪಡೆಯಬೇಕು ಮತ್ತು ಅದನ್ನು ದೃಢೀಕರಿಸಬೇಕು.
ಸರ್ಟಿಫಿಕೇಟ್‌ನೊಂದಿಗೆ ಸ್ವದೃಢೀಕೃತ ಆಧಾರ್ ಕಾರ್ಡ್‌ನ ಪ್ರತಿಯನ್ನೂ ಸಲ್ಲಿಸಬೇಕು.
ಭದ್ರತೆ ನೀಡುವ ಉದ್ಯೋಗಿಯು ತಮ್ಮ ಉದ್ಯೋಗದಾತರಿಂದ ಗುರುತು ಮತ್ತು ವೇತನ ಸರ್ಟೀಫಿಕೇಟ್ ಪಡೆದು ಸಲ್ಲಿಸಲು ನಿರ್ದೇಶಿಸಬೇಕು. ಉದ್ಯೋಗಿಯ ಸಹಿಯನ್ನು ಒಳಗೊಂಡಿರಬೇಕು. ಉದ್ಯೋಗದಾತರು ಅದನ್ನು ದೃಢೀಕರಿಸಬೇಕು.
ಸಾಲ್ವೆನ್ಸಿ ಸರ್ಟಿಫಿಕೇಟ್ ಅಥವಾ ವೇತನ ಸರ್ಟಿಫಿಕೇಟ್‌ನಲ್ಲಿನ ಭದ್ರತೆಯ ಸಹಿ/ಬೆರಳಿನ ಗುರುತು ನ್ಯಾಯಾಲಯದಲ್ಲಿ ಹಾಜರಾಗುವ ಭದ್ರತೆಯ ಸಹಿ/ಬೆರಳಿನ ಗುರುತು ಮತ್ತು ಫೋಟೊ ಜೊತೆ ಹೊಂದಾಣಿಕೆಯಾಗಬೇಕು.
ಪ್ರತಿ ಭದ್ರತೆ ನೀಡುವ ವ್ಯಕ್ತಿಯು ತಮ್ಮ ಪೂರ್ಣ ಹೆಸರು, ತಂದೆ ಹೆಸರು, ವಯಸ್ಸು, ಉದ್ಯೋಗ, ಸಂಪೂರ್ಣವಾದ ಅಂಚೆ ವಿಳಾಸವನ್ನು ನ್ಯಾಯಾಲಯಕ್ಕೆ ನೀಡಬೇಕು.
ಭದ್ರತೆ ನೀಡುವವರು ಬ್ಯಾಂಕ್ ಪಾಸ್‌ಬುಕ್ ಅಥವಾ ಪಡಿತರ ಚೀಟಿ ಹಾಜರುಪಡಿಸಬೇಕು. ಸಾಲ್ವೆನ್ಸಿ ಸರ್ಟಿಫಿಕೇಟ್‌ನಲ್ಲಿನ ಮಾಹಿತಿಗೆ ಪೂರಕವೆನಿಸುವ ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ದಾಖಲೆಗಳನ್ನು ಹಾಜರುಪಡಿಸಬೇಕು.
ಆಸ್ತಿಯ ರೂಪದಲ್ಲಿ ಭದ್ರತೆ ನೀಡಿದರೆ, ಅಗತ್ಯವೆನಿಸಿದರೆ ಕಂದಾಯ ಇಲಾಖೆಯ ವೆಬ್‌ಸೈಟ್‌ನಲಿನ ಭೂಮಿ ಅಥವಾ ಕಾವೇರಿ ಸಾಫ್ಟವೇರ್‌ಗಳನ್ನು ಬಳಕೆ ಮಾಡಿಕೊಂಡು ಸಂಬಂಧಿತ ಅಧಿಕಾರಿಗಳು ಆಸ್ತಿಯ ಮಾಹಿತಿಯನ್ನು ಪುನರ್ ಪರಿಶೀಲಿಸಿಕೊಳ್ಳಬಹುದು.
ಇಂಥ ಪರಿಶೀಲನೆಗೆ ಅಗತ್ಯವಾಗುವ ರೀತಿಯಲ್ಲಿ ಸಂಬಂಧಿತರಿಗೆ ಅಗತ್ಯವಾದ ತರಬೇತಿ ನೀಡಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವ್ಯವಸ್ಥೆ ಮಾಡಬೇಕು. ಇದಕ್ಕೆ ಪೂರಕವಾಗಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಸಮನ್ವಯ ಸಾಧಿಸಲು ನಿರ್ದೇಶಿಸಲಾಗಿದೆ.
ಭದ್ರತೆ ನೀಡುವವರನ್ನು ಆಧಾರ್ ಕಾರ್ಡ್ ಬಳಸಿ ಪತ್ತೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಸಾಧನ ಮತ್ತು ಸಾಫ್ಟ್‌ವೇರ್‌ಗಳನ್ನು ಯುಐಡಿಎಐ ಎಲ್ಲಾ ನ್ಯಾಯಾಲಯಗಳಿಗೂ ಪೂರೈಸಬೇಕು.
ನಗದು ಭದ್ರತೆ ನೀಡಿದರೆ ಆರೋಪಿಯ ಕಾಯಂ ವಿಳಾಸದ ಬಗ್ಗೆ ನ್ಯಾಯಾಲಯಕ್ಕೆ ವಿಶ್ವಾಸ ಮೂಡಬೇಕು. ಆರೋಪಿಯ ಹಾಜರಿ ಸುಲಭವಾಗಿರಬೇಕು. ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿ ಇತ್ಯಾದಿಗಳನ್ನು ಪಡೆಯಬೇಕು.
ನ್ಯಾಯಾಲಯಗಳು ಬಳಕೆ ಮಾಡುವ ಪ್ರಕರಣದ ಮಾಹಿತಿ ಸಾಫ್ಟ್‌ವೇರ್‌ನಲ್ಲಿ ಭದ್ರತೆ ನೀಡಿರುವವರ ಹೆಸರುಗಳು, ಅಪರಾಧ ಸಂಖ್ಯೆ, ಪೊಲೀಸ್ ಠಾಣೆ, ಆರೋಪಿ ಹೆಸರುಗಳ ಮಾಹಿತಿ ಲಭ್ಯವಾಗುವಂತೆ ಮಾಡಬೇಕು. ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಮತ್ತು ಸೆಂಟ್ರಲ್ ಪ್ರಾಜೆಕ್ಟ್ ಸಮನ್ವಯಕಾರರು ಎಲ್ಲಾ ನ್ಯಾಯಾಲಯಗಳಿಗೆ ಭದ್ರತೆಗಳ ನೋಂದಣಿ ನಿರ್ವಹಣೆಗೆ ಸಂಬಂಧಿಸಿದಂತೆ ಮಾಡ್ಯೂಲ್ ಸಿದ್ಧಪಡಿಸಬೇಕು. ಇದು ರಾಜ್ಯದ ಎಲ್ಲಾ ನ್ಯಾಯಾಲಯಗಳು ಒಂದೇ ರೀತಿಯಾಗಿರಬೇಕು.
ಒಬ್ಬ ವ್ಯಕ್ತಿಯು ಹಿಂದೆ ಆರೋಪಿಯೊಬ್ಬರಿಗೆ ಭದ್ರತೆ ನೀಡಿದ್ದರೆ ಅದನ್ನು ಪುನರ್ ಪರಿಶೀಲಿಸಬೇಕು. ಪದೇ ಪದೇ ಭದ್ರತೆ ನೀಡಲು ಮುಂದಾಗುವ ವ್ಯಕ್ತಿಗಳ ಬಗ್ಗೆ ನ್ಯಾಯಾಲಯ ನಿಗಾವಹಿಸಬೇಕು.
ಭದ್ರತೆ ನೀಡುವವರ ರಿಜಿಸ್ಟರ್ ಅನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೇ ಎಂಬುದನ್ನು ತಿಳಿಯಲು ಪ್ರತಿ ತಿಂಗಳು ಸಂಬಂಧಿತ ನ್ಯಾಯಾಲಯಗಳ ಮೇಲುಸ್ತುವಾರಿ ಅಧಿಕಾರಿಗಳು ಪರಿಶೀಲಿಸಬೇಕು.
ವಾರ್ಷಿಕ ಪರಿಶೀಲನೆಯ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ಗಳು ಭದ್ರತೆ ನೀಡಿರುವವರ ರಿಜಿಸ್ಟರ್‌ಗಳನ್ನು ಪರಿಶೀಲಿಸಬೇಕು. ಏನಾದರೂ ವ್ಯತ್ಯಾಸ ಕಂಡು ಬಂದಿದ್ದರೆ ಅದರಲ್ಲಿ ಸೂಕ್ತ ಸಲಹೆಗಳನ್ನು ಉಲ್ಲೇಖಿಸಬೇಕು.
ಹಂಗಾಮಿ ಮುಖ್ಯ ನ್ಯಾಯಮೂರ್ತಿಯವರ ಅನುಮತಿ ಪಡೆದು ಕ್ರಿಮಿನಲ್ ಪ್ರಕರಣಗಳನ್ನು ನಡೆಸುತ್ತಿರುವ ಎಲ್ಲಾ ನ್ಯಾಯಾಲಯಗಳಿಗೆ ಅಗತ್ಯ ಸುತ್ತೋಲೆ ಹೊರಡಿಸಬೇಕು ಎಂದು ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಿಸಲಾಗಿದೆ.