ಋತುಸ್ರಾವದ ರಜೆ: ಸರ್ಕಾರದ ನೀತಿ-ನಿರೂಪಣೆಗೆ ಒಳಪಟ್ಟಿದೆ ಎಂದು ಪಿಐಎಲ್‌ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ

ಈ ರಜೆ ನೀಡುವುದು ಒತ್ತಾಯವಾದರೆ ಇದು ಮಹಿಳೆಯರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳಲು ಸಹಜವಾಗಿಯೇ ನಿರುತ್ತೇಜನಕಾರಿಯಾಗಲಿದೆ ಎಂದು ಕೇವಿಯಟರ್‌ ಆದ ಕಾನೂನು ವಿದ್ಯಾರ್ಥಿಯ ವಾದಕ್ಕೆ ಪೀಠವು ಸಹಮತಿಸಿತು.
Menstrual leave
Menstrual leave

ಋತುಸ್ರಾವ ನೋವಿನ ರಜೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮನವಿ ನೀಡಲು ಅರ್ಜಿದಾರರಿಗೆ ಶುಕ್ರವಾರ ಅನುಮತಿಸಿದ ಸುಪ್ರೀಂ ಕೋರ್ಟ್‌, ದೇಶಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗದಲ್ಲಿರುವ ಮಹಿಳೆಯರಿಗೆ ಋತುಸ್ರಾವ ನೋವಿನ ರಜೆ ನೀಡಲು ಆದೇಶ ಮಾಡುವಂತೆ ಕೋರಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ [ಶೈಲೇಂದ್ರ ಮಣಿ ತ್ರಿಪಾಠಿ ವರ್ಸಸ್‌ ಭಾರತ ಸರ್ಕಾರ].

ಪ್ರಕರಣಕ್ಕೆ ನೀತಿ-ನಿರೂಪಣೆಯ ಕೋನವಿದೆ, ಅರ್ಜಿದಾರರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿತು.

ಅದಾಗ್ಯೂ, ಈ ರಜೆ ನೀಡುವುದು ಒತ್ತಾಯವಾದರೆ ಇದು ಮಹಿಳೆಯರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳಲು ಸಹಜವಾಗಿಯೇ ನಿರುತ್ತೇಜನಕಾರಿಯಾಗಲಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಿಯಟರ್‌ ಆದ ಕಾನೂನು ವಿದ್ಯಾರ್ಥಿಯ ವಾದಕ್ಕೆ ಪೀಠವು ಸಹಮತಿಸಿತು.

ಸಮಾಜದಲ್ಲಿ ಋತುಸ್ರಾವ ಅವಧಿಯ ಬಗ್ಗೆ ತೀವ್ರ ಅಸಡ್ಡೆಯಿದೆ. ಆದರೆ, ಕೆಲವು ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಗಳು ಇದನ್ನು ಪರಿಗಣಿಸಿವೆ. ಕೆಲವು ಕಂಪೆನಿಗಳು ಋತುಸ್ರಾವ ಅವಧಿಯಲ್ಲಿ ವೇತನಸಹಿತ ರಜೆ ನೀಡುತ್ತಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಋತುಸ್ರಾವ ನೋವಿನ ರಜೆ ನೀಡಲು ನಿಯಂತ್ರಣ ಕ್ರಮ ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿದಾರರು ಕೋರಿದ್ದರು. 1992ರ ನೀತಿಯ ಭಾಗವಾಗಿ ಬಿಹಾರ ರಾಜ್ಯ ಮಾತ್ರ ವಿಶೇಷ ಋತುಸ್ರಾವ ನೋವಿನ ರಜೆ ನೀಡಿರುವ ದೇಶದ ಏಕೈಕ ರಾಜ್ಯವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com