ಕಾನೂನನ್ನು ಕಾಪಿ-ಪೇಸ್ಟ್‌ ಮಾಡುವುದು ಸಾಲದು: ಮುಡಾ ಪ್ರಕರಣದಲ್ಲಿ ಆಸ್ತಿ ಜಫ್ತಿ ಮಾಡಿದ್ದ ಇ ಡಿ ಆದೇಶ ವಜಾ

ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ವಿಚಾರವು ಬಾಕಿ ಇರುವಾಗ ಅವುಗಳನ್ನು ಅರ್ಜಿದಾರೆ ಜಯಮ್ಮ ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿರುವ ನ್ಯಾಯಾಲಯ.
ED and Karnataka HC
ED and Karnataka HC
Published on

ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅನುಸರಣೆಯನ್ನು ಸೂಚಿಸಲು ಕೇವಲ ಕಾನೂನು ನಿಬಂಧನೆಗಳನ್ನು ನಕಲು ಮಾಡಿ ಅಂಟಿಸುವುದು ಸಾಕಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಜಯಮ್ಮ ಅವರಿಗೆ ಹಂಚಿಕೆ ಮಾಡಿದ್ದ ಕೆಲವು ನಿವೇಶನಗಳನ್ನು ಜಫ್ತಿ ಮಾಡಿದ್ದ ಇ ಡಿ ಆದೇಶವನ್ನು ಬದಿಗೆ ಸರಿಸಿ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ಆದೇಶಿಸಿದೆ.

Justice S Sunil Dutt Yadav
Justice S Sunil Dutt Yadav

ದಾಖಲೆಗಳನ್ನು ಪರಿಶೀಲಿಸಿದರೆ ಆಸ್ತಿ ಜಫ್ತಿ ಮಾಡುವ ಅಗತ್ಯವಿರಲಿಲ್ಲ. ಈ ಸಂಬಂಧ ಜಾರಿ ನಿರ್ದೇಶನಾಲಯ ನೀಡಿರುವ ವಿವರಣೆಯು ಸಾಕಾಗುವುದಿಲ್ಲ. ಏಕೆಂದರೆ ಇದು ಶಾಸನಬದ್ಧ ನಿಬಂಧನೆಗಳ ಮರು ಪ್ರತಿಷ್ಠಾಪನೆ ಮಾತ್ರವಾಗಿದೆ ಎಂದಿದೆ.

ಮುಡಾ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿತ್ತು. ಇದೇ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾಗಿಯಾಗಿದ್ದು, ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಹಾಲಿ ಅರ್ಜಿದಾರೆ ಜಯಮ್ಮ ಆರೋಪಿಯಾಗದಿದ್ದರೂ ಆಕೆಗೆ ಹಂಚಿಕೆಯಾಗಿದ್ದ ನಿವೇಶನದ ಸಂಬಂಧ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದವು. ಮೈಸೂರಿನಲ್ಲಿ ಜಯನಗರ ಲೇಔಟ್‌ ರೂಪಿಸಲು ತಮ್ಮ ಆಸ್ತಿಯನ್ನು ಮುಡಾ ವಶಪಡಿಸಿಕೊಂಡಿದ್ದರಿಂದ ಆಕೆಯು ಪರಿಹಾರಕ್ಕೆ ಬದಲಾಗಿ ನಿವೇಶನ ನೀಡುವಂತೆ ಕೋರಿದ್ದರು. ಇದರ ಭಾಗವಾಗಿ ಆಕ್ಷೇಪಿತ ನಿವೇಶನಗಳಿಗೆ ಸಂಬಂಧಿಸಿದಂತೆ ಮುಡಾ ಕ್ರಯ ಪತ್ರ ಮಾಡಿಕೊಟ್ಟಿದ್ದರೂ ಕಂದಾಯ ಇಲಾಖೆಯು ಮಾಲೀಕತ್ವ ದಾಖಲೆ ಅಥವಾ ಸಂಬಂಧಿತ ನಿವೇಶನಗಳಿಗೆ ಖಾತೆ ಮಾಡಿಕೊಟ್ಟಿರಲಿಲ್ಲ ಎಂದು ವಾದಿಸಲಾಗಿತ್ತು.

ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದ ಬೆನ್ನಿಗೇ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕ್ರಿಯೆ ಆರಂಭಿಸಿತ್ತು. ಜಯಮ್ಮ ಹಂಚಿಕೆಯಾಗಿರುವ ನಿವೇಶನಗಳು ಅಪರಾಧ ಪ್ರಕ್ರಿಯೆ ಆಗಿದ್ದು, ಇದರ ಭಾಗವಾಗಿ ಪಿಎಂಎಲ್‌ಎ ಅಡಿ ಜಫ್ತಿ ಮಾಡಲಾಗಿದೆ ಎಂದು ಇ ಡಿ ವಾದಿಸಿತ್ತು.

ಇದನ್ನು ತಳ್ಳಿಹಾಕಿರುವ ನ್ಯಾಯಾಲಯವು ಆಸ್ತಿಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳದಿದ್ದರೆ, ಪಿಎಂಎಲ್‌ಎ ಅಡಿಯಲ್ಲಿನ ಪ್ರಕ್ರಿಯೆಗಳು ವಿಫಲಗೊಳ್ಳುವ ಸಾಧ್ಯತೆಯಿದೆ ಎಂದು ನಂಬಲು ಸಕ್ಷಮ ಅಧಿಕಾರಿಗೆ ಯಾವುದೇ ಕಾರಣವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕಂದಾಯ ದಾಖಲೆಗಳಿಗೆ ಸಂಬಂಧಿಸಿದ ವಿಚಾರವು ಬಾಕಿ ಇರುವಾಗ ಅವುಗಳನ್ನು ಅರ್ಜಿದಾರೆ ಜಯಮ್ಮ ಮಾರಾಟ ಮಾಡುತ್ತಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿರುವ ನ್ಯಾಯಾಲಯವು ಇ ಡಿ ಜಫ್ತಿ ಆದೇಶವನ್ನು ವಜಾಗೊಳಿಸಿದೆ.

Attachment
PDF
Jayamma Vs Directorate of Enforcement
Preview
Kannada Bar & Bench
kannada.barandbench.com