

ಜಾರಿ ನಿರ್ದೇಶನಾಲಯ (ಇ ಡಿ) ನೀಡಿದ ಸಮನ್ಸ್‌ಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿಯಷ್ಟೇ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು (ಎನ್‌ಬಿ ಡಬ್ಲ್ಯೂ) ಹೊರಡಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ಜಾಮೀನು ರಹಿತ ವಾರಂಟ್ ಹೊರಡಿಸುವ ಮೊದಲು ಸಿಆರ್ ಪಿಸಿ ಸೆಕ್ಷನ್ 73ರಲ್ಲಿರುವ ಅಗತ್ಯ ಷರತ್ತುಗಳನ್ನು ಪೂರೈಸಬೇಕೆಂದು ನ್ಯಾಯಮೂರ್ತಿ ಅಮಿತ್ ಶರ್ಮಾ ಹೇಳಿದರು.
ದೋಷಾರೋಪಿತನಾದ ವ್ಯಕ್ತಿ, ಘೋಷಿತ ಅಪರಾಧಿ ಅಥವಾ ಜಾಮೀನು ರಹಿತ ಪ್ರಕರಣದ ಕೃತ್ಯದ ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ಮಾತ್ರ ಜಾಮೀನು ರಹಿತ ವಾರಂಟ್ ಹೊರಡಿಸಬಹುದು ಎಂದು ನ್ಯಾಯಾಲಯ ವಿವರಿಸಿದೆ.
“ತನಿಖೆಯಿಂದ ತಪ್ಪಿಸಿಕೊಳ್ಳುತ್ತಿರುವ ಮತ್ತು ಪ್ರಾಸಿಕ್ಯೂಷನ್ ದೂರಿನಲ್ಲಿ ಅಧಿಕೃತವಾಗಿ ಆರೋಪಿಯಾಗಿ ಸೇರಿಸಲಾಗದ ವ್ಯಕ್ತಿಯ ವಿರುದ್ಧವೂ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಬಹುದು ಎಂಬುದು ಸತ್ಯವೇ ಆಗಿದೆ. ಆದರೆ, ಸಿಆರ್‌ಪಿಸಿ ಸೆಕ್ಷನ್ 73ರಂತೆ ಅಂತಹ ವ್ಯಕ್ತಿಯನ್ನು ಜಾಮೀನು ರಹಿತ ಅಪರಾಧ ಎಸಗಿರುವ ಆರೋಪಿಯಾಗಿ ಹಾಗೂ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವವನಾಗಿ ಹಾಜರುಪಡಿಸಿರಬೇಕು” ಎಂದು ಪೀಠ ಹೇಳಿದೆ.
ವಿಡಿಯೋಕಾನ್ ಸಮೂಹ ಹಾಗೂ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ, ಇಂಗ್ಲೆಂಡಿನಲ್ಲಿ ನೆಲೆಸಿರುವ ಉದ್ಯಮಿ ಸಚಿನ್ ದೇವ್ ದುಗ್ಗಲ್ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರಂಟ್ ರದ್ದುಗೊಳಿಸುವ ವೇಳೆ ದೆಹಲಿ ಹೈಕೋರ್ಟ್ ಈ ಮಹತ್ವದ ವಿಚಾರ ತಿಳಿಸಿತು.
ವಿಚಾರಣಾ ನ್ಯಾಯಾಲಯ ಸಿ ಆರ್ ಪಿ ಸಿ ಪ್ರಕಾರ ತನ್ನ ಅಧಿಕಾರ ಬಳಸಿಲ್ಲ ಎಂದು ಅದು ಇದೇ ವೇಳೆ ಹೇಳಿತು.