[ಕೊಲೆ ಪ್ರಕರಣ] ಪತ್ನಿಯ ಹೆರಿಗೆಯ ಕಾರಣ ಉಲ್ಲೇಖಿಸಿ ಜಾಮೀನು ಕೋರಿಕೆ; ಅರ್ಜಿ ವಜಾಗೊಳಿಸಿದ ಹೈಕೋರ್ಟ್

ದೂರು ಅಥವಾ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿಲ್ಲ, ಇತರರಿಗೆ ಪ್ರಚೋದನೆ ನೀಡಿದ ಆರೋಪ ಮಾತ್ರ ತಮ್ಮ ಮೇಲಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
High Court of Karnataka, Dharwad Bench
High Court of Karnataka, Dharwad Bench

ಪತ್ನಿ ಗರ್ಭಿಣಿಯಾಗಿದ್ದು, ಆಕೆಯ ಹೆರಿಗೆಯ ಸಂದರ್ಭದಲ್ಲಿ ಹಾಜರಿರಬೇಕು ಎಂಬ ಆಧಾರದಲ್ಲಿ ಜಾಮೀನು ಕೋರಿದ್ದ ಗಲಭೆ ಹಾಗೂ ಕೊಲೆ ಪ್ರಕರಣದಲ್ಲಿನ ಆರೋಪಿಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ವಜಾ ಮಾಡಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ್‌ನ ಗುರುನಗೌಡ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ನೇತೃತ್ವದ ಪೀಠವು ವಜಾ ಮಾಡಿದೆ.

“ಮೇಲ್ಮನವಿದಾರ ಅಥವಾ 29ನೇ ಆರೋಪಿಯ ಪತ್ನಿ ಗರ್ಭಿಣಿಯಾಗಿದ್ದು, ಆಕೆಯ ಪ್ರಸವದ ದಿನವು ನವೆಂಬರ್‌ 6ರಂದು ಎಂದು ವೈದ್ಯಕೀಯ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ತನಿಖೆಯು ನಡೆಯುತ್ತಿರುವ ಸಂದರ್ಭದಲ್ಲಿ ಜಾಮೀನು ನೀಡಲು ಇದು ಸೂಕ್ತ ಆಧಾರವಾಗಲಾರದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಪ್ರಕರಣದಲ್ಲಿ ಆರೋಪಿಗಳ ಪಾತ್ರವೇನು ಎಂಬುದು ತನಿಖೆಯ ಭಾಗವಾಗಿದ್ದು, ಅಂತಿಮ ವರದಿಯಿಂದ ತಿಳಿಯಲಿದೆ. ಪ್ರಕರಣ ನಡೆದ ಸ್ಥಳದಿಂದ 40 ಕಿ ಮೀ ದೂರವಿರುವ ಗಂಗಾವತಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಿದ್ದ ಮಾತ್ರಕ್ಕೆ ಪ್ರಕರಣ ನಡೆದ ದಿನ ಸ್ಥಳದಲ್ಲಿ ಆರೋಪಿ/ಅರ್ಜಿದಾರ ಇರಲಿಲ್ಲ ಎಂದಲ್ಲ. ಆರೋಪಿಯ ಪತ್ನಿಯು ಗರ್ಭಿಣಿಯಾಗಿದ್ದು, ನವೆಂಬರ್‌ 6ರಂದು ಪ್ರಸವದ ದಿನ ಇದೆ ಎಂದು ವೈದ್ಯಕೀಯ ದಾಖಲೆಯಲ್ಲಿ ಉಲ್ಲೇಖಿಸಿರುವುದು ಜಾಮೀನು ಮಂಜೂರು ಮಾಡಲು ಸೂಕ್ತ ಕಾರಣವಾಗದು. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಕೊಪ್ಪಳದ ಪ್ರಧಾನ ಜಿಲ್ಲಾ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿಯು ಮೇಲ್ಮನವಿ ಸಲ್ಲಿಸಿದ್ದರು. ದೂರು ಅಥವಾ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿಲ್ಲ, ಇತರರಿಗೆ ಪ್ರಚೋದನೆ ನೀಡಿದ ಆರೋಪ ಮಾತ್ರ ತಮ್ಮ ಮೇಲಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಎರಡು ಗ್ರಾಮಗಳಲ್ಲಿನ ಗುಂಪುಗಳ ವೈಷಮ್ಯದ ಹಿನ್ನೆಲೆಯಲ್ಲಿ ನಡೆದ ಗಲಭೆಯಲ್ಲಿ ದೂರುದಾರ ಖಾದರ್‌ಸಾಬ್‌ ಮೇಲೆ ಹಲ್ಲೆ ಮತ್ತು ಅವರ ಸಹೋದರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ. 29 ಮತ್ತು 31ನೇ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅವುಗಳನ್ನು ನ್ಯಾಯಾಲಯ ವಜಾ ಮಾಡಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 143, 147, 148, 323, 324, 307, 302, 504, 506 ಜೊತೆಗೆ 149 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ ಸೆಕ್ಷನ್‌ 3(2)(v) ಅಡಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com